ಸಾರಾಂಶ
ಸಂಚಾರ ನಿಯಮ ಉಲ್ಲಂಘನೆ ಕುರಿತು ವಾಹನ ತಪಾಸಣೆ ವೇಳೆ ಹೊರ ರಾಜ್ಯದಿಂದ ನಗರಕ್ಕೆ ಕಾರಿನಲ್ಲಿ ಗಾಂಜಾ ತಂದಿದ್ದ ಪೆಡ್ಲರ್‌ವೊಬ್ಬ ಗಿರಿನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಚಾರ ನಿಯಮ ಉಲ್ಲಂಘನೆ ಕುರಿತು ವಾಹನ ತಪಾಸಣೆ ವೇಳೆ ಹೊರ ರಾಜ್ಯದಿಂದ ನಗರಕ್ಕೆ ಕಾರಿನಲ್ಲಿ ಗಾಂಜಾ ತಂದಿದ್ದ ಪೆಡ್ಲರ್‌ವೊಬ್ಬ ಗಿರಿನಗರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಎಲೆಕ್ಟ್ರಾನಿಕ್ ಸಿಟಿ ಸಮೀಪದ ನಿವಾಸಿ ನಹೀಮ್ ಸೈಯದ್ ಬಂಧಿತನಾಗಿದ್ದು, ಆರೋಪಿಯಿಂದ 21 ಕೆಜಿ ಗಾಂಜಾ, ₹2 ಲಕ್ಷ ನಗದು, 80 ಗ್ರಾಂ ಚಿನ್ನ ಹಾಗೂ ಕಾರು ವಾಹನ ಜಪ್ತಿಯಾಗಿದೆ. ಈ ವೇಳೆ ತಪ್ಪಿಸಿಕೊಂಡಿರುವ ಮತ್ತಿಬ್ಬರ ಪತ್ತೆಗೆ ತನಿಖೆ ನಡೆದಿದೆ. ಹೊಸಕೆರೆಹಳ್ಳಿ ಸಮೀಪದ ವೀರಭದ್ರ ನಗರದ ಜಂಕ್ಷನ್ ಬಳಿ ಮಂಗಳವಾರ ರಾತ್ರಿ ಬನಶಂಕರಿ ಸಂಚಾರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಆ ರಸ್ತೆಯಲ್ಲಿ ಬಂದ ಪೆಡ್ಲರ್‌ಗಳು, ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಮಾಹಿತಿ ಪಡೆದು ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ದುಬಾರಿ ಬೆಲೆಗೆ ಆರೋಪಿಗಳು ಮಾರುತ್ತಿದ್ದರು. ಅಂತೆಯೇ ಸಹ ಪೆಡ್ಲರ್‌ವೊಬ್ಬನಿಗೆ ಗಾಂಜಾ ಪೂರೈಸಲು ಕಾರಿನಲ್ಲಿ ನಹೀಮ್ ಹಾಗೂ ಆತನ ಸ್ನೇಹಿತರು ತೆರಳುತ್ತಿದ್ದರು. ಆಗ ವೀರಭದ್ರನಗರದ ಜಂಕ್ಷನ್ ಬಳಿ ಸಂಚಾರ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಗಿರಿನಗರ ಪೊಲೀಸರಿಗೆ ಟ್ರಾಫಿಕ್ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ. ಈ ಮಾಹಿತಿ ಪಡೆದ ತಕ್ಷಣವೇ ವೀರಭದ್ರ ನಗರಕ್ಕೆ ಧಾವಿಸಿದ ಪೊಲೀಸರು, ಪರಾರಿಯಾಗಲು ಯತ್ನಿಸಿದವರನ್ನು ಬೆನ್ನತ್ತಿದ್ದಾರೆ. ಆಗ ಕಾರು ನಿಲ್ಲಿಸಿ ಓಡಿ ಹೋಗಲು ಮುಂದಾದ ನಹೀಮ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದು ಬಂದಿದೆ.