ಆಳ್ವಾಸ್ ಸಂಸ್ಥೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕರ್ನಾಟಕದ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ ಹಾಗೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಆಶ್ರಯದಲ್ಲಿ ಗ್ರಾಹಕರ ಜಾಗೃತಿ ಕಾರ್ಯಕ್ರಮ ನೆರವೇರಿತು.
ಮೂಡುಬಿದಿರೆ: ಟ್ರಾಯ್ ಗ್ರಾಹಕರ ಹಕ್ಕುಗಳನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿದ್ದು, ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಂಡು ದೂರು ಸಲ್ಲಿಸಿದರೆ ಉತ್ತಮ ಸೇವೆ ಪಡೆಯಲು ಸಾಧ್ಯವೆಂದು ಕರ್ನಾಟಕದ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಮುಖ್ಯ ಪೋಷಕ ಹಾಗೂ ಸ್ಥಾಪಕ ಸೋಮಶೇಖರ್ ವಿ.ಕೆ. ತಿಳಿಸಿದ್ದಾರೆ.ಆಳ್ವಾಸ್ ಸಂಸ್ಥೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕರ್ನಾಟಕದ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ ಹಾಗೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಆಶ್ರಯದಲ್ಲಿ ನಡೆದ ಗ್ರಾಹಕರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ದೂರಸಂಪರ್ಕ ಸೇವೆಗಳ ಕುರಿತ ಅನೇಕ ಮಾಹಿತಿ ನೀಡಿದ ಅವರು, ನೆಟ್ವರ್ಕ್ ತೊಂದರೆಗಳು, ನಿಧಾನಗತಿಯ ಇಂಟರ್ನೆಟ್, ಹೆಚ್ಚುವರಿ ಶುಲ್ಕ ವಿಧಿಸುವುದು, ಅನುಮತಿ ಇಲ್ಲದೆ ಸಿಮ್ ಸಕ್ರಿಯಗೊಳ್ಳುವುದು, ಕೆವೈಸಿ ಸಮಸ್ಯೆಗಳು, ಮೊಬೈಲ್ ನಂಬರ್ ಪೋರ್ಟಿಂಗ್ ವಿಳಂಬವಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.ಮೊಬೈಲ್ ಸಂಖ್ಯೆ ಬದಲಿಸದೆ ನೆಟ್ವರ್ಕ್ ಪೋರ್ಟ್ ಮಾಡಿಕೊಳ್ಳುವ ಹಕ್ಕು ಗ್ರಾಹಕರಿಗೆ ಇರುವುದನ್ನೂ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. ೨೦೧೨ರ ಗ್ರಾಹಕ ಸಂರಕ್ಷಣಾ ನಿಯಮಗಳಡಿ ಗುಣಮಟ್ಟದ ಸೇವೆ ಹಾಗೂ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿದರು.ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ರೀಚಾರ್ಜ್ ಮಾಡುವ ಮೊದಲು ಅದರ ಯೋಜನೆ ಸಂಪೂರ್ಣ ತಿಳಿದುಕೊಳ್ಳಬೇಕು, ಸೇವಾ ಗುಣಮಟ್ಟ ತೃಪ್ತಿಕರವಾಗಿರದಿದ್ದರೆ ನೆಟ್ವರ್ಕ್ ಪೋರ್ಟ್ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉಡುಪಿ ಗ್ರಾಹಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾತುಗಳನ್ನಾಡಿದರು.ಸೈಬರ್ ಕೈಮ್ ಪೋಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರತಿಭಾ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಪ್ರಕರಣಗಳನ್ನು ನಿಯಂತ್ರಿಸಲು ಜಾಗೃತಿ ಮಾತ್ರವೇ ಪರಿಣಾಮಕಾರಿ ಮಾರ್ಗ. ಹಿಂದೆ ಕಡಿಮೆ ಪ್ರಮಾಣದಲ್ಲಿದ್ದ ಸೈಬರ್ ಪ್ರಕರಣಗಳು ಇಂದು ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಯಿಂದಾಗಿ ಉಲ್ಬಣಗೊಂಡಿದೆ ಎಂದರು. ಶಾಸಕ ಉಮನಾಥ್ ಕೋಟ್ಯಾನ್ಉದ್ಘಾಟಿಸಿ ಮಾತನಾಡಿದರು. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರತಿಭಾ, ಸಂಘದ ಪದಾಧಿಕಾರಿ ವಿದ್ಯಾ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಇದ್ದರು. ಸಂಯೋಜಕಿ ಡಾ ಸುಲತಾ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ರಶ್ಮಿನ್ ನಿರೂಪಿಸಿ, ಉಪನ್ಯಾಸಕಿ ಮೇಘನಾ ವಂದಿಸಿದರು.