ಸಾರಾಂಶ
ಕೆಆರ್‌ಎಸ್ ಜಲಾಶಯ ರೈತರ ಜೀವನಾಡಿ. ಅಣೆಕಟ್ಟು ಸುತ್ತ ಗಣಿಗಾರಿಕೆ ನಡೆಸುವುದರಿಂದ ಅಣೆಕಟ್ಟೆಗೆ ಅಪಾಯವಿದೆ ಎನ್ನುವುದು ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಿಂದ ದೃಢಪಟ್ಟಿದೆ. ೯೨ ವರ್ಷ ಹಳೆಯದಾದ ಅಣೆಕಟ್ಟು ರಕ್ಷಣೆ ಸರ್ಕಾರ ಮತ್ತು ಎಲ್ಲರ ಕರ್ತವ್ಯವಾಗಿದೆ. ಆದರೂ ಅಣೆಕಟ್ಟೆಯ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಿ ಟ್ರಯಲ್ ಬ್ಲಾಸ್ಟ್‌ಗೆ ನ್ಯಾಯಾಲಯದ ಅನುಮತಿ ಕೋರಿರುವುದು ದುರಂತದ ಸಂಗತಿ.
ಕನ್ನಡಪ್ರಭ ವಾರ್ತೆ ಮಂಡ್ಯ
ಕೆಆರ್‌ಎಸ್ ಸುತ್ತ ಟ್ರಯಲ್ ಬ್ಲಾಸ್ಟ್, ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡದಿರುವುದು, ಬೆಳೆಗಳಿಗೆ ನೀರು ಹರಿಸದಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೇರಿದ ರೈತಸಂಘದ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಮಾತನಾಡಿ, ಕೆಆರ್‌ಎಸ್ ಜಲಾಶಯ ರೈತರ ಜೀವನಾಡಿ. ಅಣೆಕಟ್ಟು ಸುತ್ತ ಗಣಿಗಾರಿಕೆ ನಡೆಸುವುದರಿಂದ ಅಣೆಕಟ್ಟೆಗೆ ಅಪಾಯವಿದೆ ಎನ್ನುವುದು ರಾಷ್ಟ್ರೀಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಿಂದ ದೃಢಪಟ್ಟಿದೆ. ೯೨ ವರ್ಷ ಹಳೆಯದಾದ ಅಣೆಕಟ್ಟು ರಕ್ಷಣೆ ಸರ್ಕಾರ ಮತ್ತು ಎಲ್ಲರ ಕರ್ತವ್ಯವಾಗಿದೆ. ಆದರೂ ಅಣೆಕಟ್ಟೆಯ ಸಾಮರ್ಥ್ಯ ಪರೀಕ್ಷೆಗೆ ಮುಂದಾಗಿ ಟ್ರಯಲ್ ಬ್ಲಾಸ್ಟ್‌ಗೆ ನ್ಯಾಯಾಲಯದ ಅನುಮತಿ ಕೋರಿರುವುದು ದುರಂತದ ಸಂಗತಿ. ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್‌ಗೆ ಅನುಮತಿ ನೀಡದೆ. ೨೦೨೦ರ ಅಣೆಕಟ್ಟು ಸುರಕ್ಷತಾ ಕಾಯಿದೆಯನ್ನು ಕೂಡಲೇ ಜಾರಿಗೊಳಿಸಬೇಕು. ಅಣೆಕಟ್ಟು ಸುತ್ತ ಗಣಿಗಾರಿಕೆ ನಡೆಸದಂತೆ ಸುಗ್ರೀವಾಜ್ಞೆ ತರಬೇಕು ಎಂದು ಒತ್ತಾಯಿಸಿದರು.ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಹಾಲಿನ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ದರವನ್ನು ಶೇ.೮.೫ ಇಳುವರಿಗೆ ನಿಗದಿಪಡಿಸಿ ಟನ್ ಕಬ್ಬಿಗೆ ೪೫೦೦ ರು. ಘೋಷಿಸಬೇಕು. ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿರುವಂತೆ ಬಾಕಿ ೧೫೦ ರು. ಪಾವತಿಸಬೇಕು ಎಂದು ಆಗ್ರಹಿಸಿದರು.
ಕೃಷ್ಣರಾಜಸಾಗರ ಹಾಗೂ ಹೇಮಾವತಿ ಜಲಾಶಯಗಳಿಂದ ಜನ-ಜಾನುವಾರುಗಳು ಹಾಗೂ ಹಾಲಿ ಬೆಳೆದಿರುವ ಬೆಳೆಗಳ ರಕ್ಷಣೆಗೆ ತಕ್ಷಣವೇ ನೀರು ಬಿಡುಗಡೆ ಮಾಡಬೇಕು. ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಶಾಸನ ರೂಪಿಸಬೇಕು. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ಈ ಹಿಂದೆ ಇದ್ದಂತಹ ಅಕ್ರಮ-ಸಕ್ರಮ ಪದ್ಧತಿಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಏಕರೂಪ ದರ ನಿಗದಿಪಡಿಸಿ ಪ್ರಾರಂಭಿಸುವಂತೆ ಸರ್ಕಾರ ನಿರ್ದೇಶನ ನೀಡಬೇಕು. ನೀಟ್ ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿದರು.
ರೈತ ಸಂಘದ ರಾಜೇಗೌಡ, ಪ್ರಸನ್ನಗೌಡ, ಜಿಲ್ಲಾ ಕಾರ್ಯದರ್ಶಿ ಲಿಂಗಪ್ಪಾಜಿ, ಎಸ್.ಕೆ.ರವಿಕುಮಾರ್, ಮುಖಂಡರಾದ ಬೋರಾಪುರ ಶಂಕರೇಗೌಡ, ಜಿ.ಎ.ಶಂಕರ್, ವಿಜಯಕುಮಾರ್, ಪಿ.ಬಾಲಕೃಷ್ಣ, ಎಸ್.ಬಿ.ಪುಟ್ಟಸ್ವಾಮಿ, ಎಸ್.ಸಿ.ಮರಿಚನ್ನೇಗೌಡ, ಚಂದ್ರು ಶಿವಳ್ಳಿ, ಕೆ.ಟಿ.ಗೋವಿಂದೇಗೌಡ, ಜಿ.ಕೆ.ರಾಮಕೃಷ್ಣ, ಕೃಷ್ಣೇಗೌಡ, ಪಿ.ನಾಗರಾಜು ಕೆನ್ನಾಳು ಸೇರಿದಂತೆ ಹಲವರು ಮಂದಿ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿದ್ದರು.