ರೈಲು ಸಂಚಾರ ಭಾಗಶಃ ರದ್ದು

| Published : Jan 25 2024, 02:04 AM IST

ಸಾರಾಂಶ

ಕೊಪ್ಪಳ ಜಿಲ್ಲೆಯ ಗಿಣಗೇರಾ ರೈಲು ನಿಲ್ದಾಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರೈಲುಗಳನ್ನು ಭಾಗಶಃ, ರದ್ದುಪಡಿಸಲಾಗಿದ್ದರೆ, ಕೆಲ ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ

ಹುಬ್ಬಳ್ಳಿ: ಕೊಪ್ಪಳ ಜಿಲ್ಲೆಯ ಗಿಣಗೇರಾ ರೈಲು ನಿಲ್ದಾಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕಾಮಗಾರಿ ನಡೆಯುತ್ತಿರುವುದರಿಂದ ಕೆಲ ರೈಲುಗಳನ್ನು ಭಾಗಶಃ, ರದ್ದುಪಡಿಸಲಾಗಿದ್ದರೆ, ಕೆಲ ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗುತ್ತಿದೆ.

ಸೊಲ್ಲಾಪುರ- ಹೊಸಪೇಟೆ (ರೈಲು ಸಂಖ್ಯೆ 11305) ಜ. 25,ಫೆ. 6, ಫೆ. 7ರಂದು ಹೊಸಪೇಟೆ ಹಾಗೂ ಗದಗ ನಿಲ್ದಾಣಗಳ ಮಧ್ಯೆ ಭಾಗಶಃ ರದ್ದುಪಡಿಸಲಾಗಿದೆ. ಈ ರೈಲು ಹೊಸಪೇಟೆ ಬದಲು ಗದಗ ಕೊನೆಯಾಗಲಿದೆ. ಹೊಸಪೇಟೆ- ಸೊಲ್ಲಾಪುರ (ರೈಲು ಸಂಖ್ಯೆ 11306) ಜ. 25, 26, ಫೆ.7 ಹಾಗೂ 8ರಂದು ಗದಗ- ಹೊಸಪೇಟೆ ಮಧ್ಯೆ ಸಂಚರಿಸುವುದಿಲ್ಲ. ಗದಗ ನಿಲ್ದಾಣದಿಂದ ಪ್ರಯಾಣ ಶುರುವಾಗಲಿದೆ. ವಿಜಯವಾಡ- ಎಸ್‌ಎಸ್‌ಎಸ್‌ (ರೈಲು ಸಂಖ್ಯೆ- 17330) ಹುಬ್ಬಳ್ಳಿ ಮಾರ್ಗ ಮಧ್ಯೆದಲ್ಲಿ ಫೆ. 6ರಂದು 2 ಗಂಟೆ ನಿಯಂತ್ರಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಯಾಣಿಕರ ಕೊರತೆ: ಪ್ರಯಾಣಿಕರ ಕೊರತೆಯಿಂದಾಗಿ ರೈಲು ಸಂಖ್ಯೆ 17347/17348 ಎಸ್‌ಎಸ್‌ಎಸ್ ಹುಬ್ಬಳ್ಳಿ-ಚಿತ್ರದುರ್ಗ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೆಮು ಎಕ್ಸ್‌ಪ್ರೆಸ್‌ ರೈಲುಗಳನ್ನು ಭಾಗಶಃ ರದ್ದತಿ ವಿಸ್ತರಣೆ ಮಾಡಲಾಗುತ್ತಿದೆ. ರೈಲು ಸಂಖ್ಯೆ (17347) ಹುಬ್ಬಳ್ಳಿ- ಚಿತ್ರದುರ್ಗ ರೈಲನ್ನು ಪ್ರಯಾಣಿಕರ ಕೊರತೆಯಿಂದಾಗಿ ಚಿಕ್ಕಜಾಜೂರ- ಚಿತ್ರದುರ್ಗ ಮಧ್ಯೆ ಜ. 31ರ ವರೆಗೆ ರದ್ದುಪಡಿಸಲಾಗಿತ್ತು. ಈಗಲೂ ಅದೇ ಪರಿಸ್ಥಿತಿ ಮುಂದುವರಿದಿರುವ ಕಾರಣ ಮಾ. 31ರ ವರೆಗೆ ಚಿಕ್ಕಜಾಜೂರಲ್ಲಿ ಕೊನೆ ನಿಲುಗಡೆಯಾಗಲಿದೆ. ಅದೇ ರೀತಿ ರೈಲು ಸಂಖ್ಯೆ 17348 ಚಿತ್ರದುರ್ಗ -ಎಸ್‌ಎಸ್‌ಎಸ್‌ ಹುಬ್ಬಳ್ಳಿ ಮಧ್ಯೆ ಸಂಚರಿಸಬೇಕಿದ್ದ ರೈಲು ಚಿಕ್ಕಜಾಜೂರಿನಿಂದ ಹುಬ್ಬಳ್ಳಿವರೆಗೆ ಮಾತ್ರ ಮಾ. 31ರ ವರೆಗೆ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ.