ಸಾರಾಂಶ
ರೈಲ್ವೆ ಟಿಕೆಟ್ ವಿತರಣೆ ವ್ಯವಸ್ಥೆಯನ್ನು ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿಸಿರುವ ನೈಋತ್ಯ ರೈಲ್ವೆ ಬೆಂಗಳೂರು ವಲಯ ಕಾಯ್ದಿರಿಸದ ಮೊಬೈಲ್ ಟಿಕೆಟ್ ವ್ಯವಸ್ಥೆ (ಎಂ-ಯುಟಿಎಸ್) ಅಡಿ ಕೌಂಟರ್ ಬದಲಾಗಿ ಪ್ರಯಾಣಿಕರ ಬಳಿಗೆ ಹೋಗಿ ತ್ವರಿತವಾಗಿ ಟಿಕೆಟ್ ನೀಡುವ ಸೌಲಭ್ಯ ಜಾರಿಗೆ ತಂದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರೈಲ್ವೆ ಟಿಕೆಟ್ ವಿತರಣೆ ವ್ಯವಸ್ಥೆಯನ್ನು ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿಸಿರುವ ನೈಋತ್ಯ ರೈಲ್ವೆ ಬೆಂಗಳೂರು ವಲಯ ಕಾಯ್ದಿರಿಸದ ಮೊಬೈಲ್ ಟಿಕೆಟ್ ವ್ಯವಸ್ಥೆ (ಎಂ-ಯುಟಿಎಸ್) ಅಡಿ ಕೌಂಟರ್ ಬದಲಾಗಿ ಪ್ರಯಾಣಿಕರ ಬಳಿಗೆ ಹೋಗಿ ತ್ವರಿತವಾಗಿ ಟಿಕೆಟ್ ನೀಡುವ ಸೌಲಭ್ಯ ಜಾರಿಗೆ ತಂದಿದೆ.ಪ್ರಸ್ತುತ ನಗರದ ಕೆಎಸ್‌ಆರ್, ಯಶವಂತಪುರ ಮತ್ತು ಎಸ್‌ಎಂವಿಟಿ ನಿಲ್ದಾಣಗಳಲ್ಲಿ ಈ ಸೌಲಭ್ಯವನ್ನು ಜಾರಿಗೆ ತಂದಿದೆ. ನಿಲ್ದಾಣದ 500 ಮೀಟರ್ ವ್ಯಾಪ್ತಿಯಲ್ಲಿ ಪ್ರಯಾಣಿಕರು ಇದರ ಮೂಲಕ ಟಿಕೆಟ್‌ಗಳನ್ನು ಖರೀದಿ ಮಾಡಬಹುದಾಗಿದೆ. ಮುಂದಿನ ಹಂತಗಳಲ್ಲಿ ಇತರೆ ಜನದಟ್ಟಣೆಯ ನಿಲ್ದಾಣಗಳಲ್ಲಿ ಎಂ-ಯುಟಿಎಸ್ ಜಾರಿಗೊಳಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಟಿಕೆಟ್ ನೀಡುವ ಪ್ರಕ್ರಿಯೆ ಸರಳಗೊಳಿಸುವ ಮತ್ತು ಬಹುಬೇಗ ಪ್ರಯಾಣಿಕರು ಟಿಕೆಟ್ ಪಡೆಯುವಂತಾಗಲು ಈ ಸೌಲಭ್ಯ ತರಲಾಗಿದೆ. ಇದಕ್ಕಾಗಿ ನವೀನ ಸಾಧನ ವಿನ್ಯಾಸಗೊಳಿಸಲಾಗಿದೆ. ರೈಲ್ವೆ ಸಿಬ್ಬಂದಿ ನಿರ್ವಹಿಸುವ ಈ ಹ್ಯಾಂಡ್‌ಹೆಲ್ಡ್ ಸಾಧನಗಳು ಪ್ರಯಾಣಿಕರಿಗೆ ಟಿಕೆಟ್‌ಗಳನ್ನು ತ್ವರಿತವಾಗಿ ವಿತರಿಸಲಿವೆ.ರೈಲ್ವೆ ನಿಲ್ದಾಣಗಳಲ್ಲಿ ಸಾಮಾನ್ಯವಾಗಿ ಇರುವ ಸಾಂಪ್ರದಾಯಿಕ ಟಿಕೆಟ್ ಕೌಂಟರ್‌ಗಳಂತೆ, ಈ ಯಂತ್ರಗಳಿಗೆ ನಿಶ್ಚಿತ ಜಾಗ ಮತ್ತಿತರ ಸಾಧನಗಳು ಅಗತ್ಯವಿಲ್ಲ. ನಿಲ್ದಾಣದ ಯಾವುದೇ ಸ್ಥಳದಲ್ಲಾದರೂ ಟಿಕೆಟ್ ನೀಡಬಹುದಾಗಿದೆ, ಇದರಿಂದ ಟಿಕೆಟ್ ಕೌಂಟರ್ ಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ಜೊತೆಗೆ ಪ್ರಯಾಣಿಕರಿಗೆ ತಾವಿದ್ದಲ್ಲೇ ಟಿಕೆಟ್ ಪಡೆಯುವ ಅವಕಾಶ ಲಭ್ಯವಾಗಲಿದೆ.
ಎಂ-ಯುಟಿಎಸ್ ಸೌಲಭ್ಯ ವಿಶೇಷವಾಗಿ ಪ್ರಯಾಣಿಕರ ದಟ್ಟಣೆ ಸಮಯದಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಈ ಯಂತ್ರಗಳನ್ನು ನಿಲ್ದಾಣದಲ್ಲಿ ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾಗಿದ್ದು, ಸರದಿಯಲ್ಲಿ ಟಿಕೆಟ್‌ಗಾಗಿ ಕಾಯುವ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.-ತ್ರಿನೇತ್ರ, ಬೆಂಗಳೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು, ನೈಋತ್ಯ ರೈಲ್ವೆ