ಸಾರಾಂಶ
ಸಂಡೂರು: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಆಂಗ್ಲ, ಕನ್ನಡ ಹಾಗೂ ಉರ್ದು ಮಾಧ್ಯಮದಲ್ಲಿ ತಾಲೂಕಿಗೆ ಅತಿಹೆಚ್ಚು ಅಂಕ ಗಳಿಸಿದ ಪ್ರತಿ ವಿಭಾಗದ ಮೂವರು ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊರೋನ ಸಂದರ್ಭದಲ್ಲಿಯ ಕಲಿಕೆಯಲ್ಲಿನ ಕೊರತೆಯನ್ನು ನೀಗಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಬಾರಿ ತಾಲೂಕು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.೭೭.೪೬ ಫಲಿತಾಂಶ ಪಡೆದು, ಜಿಲ್ಲೆಯಲ್ಲಿ ದ್ವಿತೀಯ ಸ್ಥಾನಗಳಿಸಿದೆ ಎಂದರು.ಅಪರ ಆಯುಕ್ತರು, ಜಿಲ್ಲಾಧಿಕಾರಿ, ಜಿಪಂ ಸಿಇಒ, ಉಪ ನಿರ್ದೇಶಕರು ಹಾಗೂ ಡಯಟ್ ಪ್ರಾಚಾರ್ಯರ ಮಾರ್ಗದರ್ಶನದ ಮೇರೆಗೆ ಪ್ರತಿ ೧೫ ದಿನಕ್ಕೊಮ್ಮೆ ಘಟಕ ಪರೀಕ್ಷೆ, ಪ್ರತಿಬಿಂಬ ಎಂದು ಪೂರಕ ಸಾಹಿತ್ಯ ವಿತರಣೆ, ೫ ಸರಣಿ ಪರೀಕ್ಷೆಗಳು, ಕಲಿಕೆಯಲ್ಲಿ ಹಿಂದುಳಿದಿದ್ದ ಸುಮಾರು ೭೦೦ ವಿದ್ಯಾರ್ಥಿಗಳಿಗೆ ಸಂಪನ್ಮೂಲ ಶಿಕ್ಷಕರಿಂದ ಸನಿವಾಸ ತರಬೇತಿ ಮುಂತಾದ ಕಾರ್ಯಕ್ರಮಗಳಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದರು.
ವಿದ್ಯಾರ್ಥಿಗಳು ಮುಂದಿನ ಹಂತದಲ್ಲಿ ತಮಗಿಷ್ಟವಾದ ವಿಷಯವನ್ನು ಆಯ್ದುಕೊಂಡು ಉತ್ತಮ ಜ್ಞಾನದೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮಾತನಾಡಿ, ಇತ್ತೀಚೆಗಿನ ವಿದ್ಯಾರ್ಥಿಗಳ ಅಂಕಗಳನ್ನು ಗಮನಿಸಿದಾಗ ಶಿಕ್ಷಣ ಹಾಗೂ ಕಲಿಕೆಯ ಗುಣಮಟ್ಟ ಹೆಚ್ಚುತ್ತಿರುವುದು ತಿಳಿದು ಬರುತ್ತಿದೆ. ಕಲಿಕೆ ನಿರಂತರವಾಗಿರಬೇಕು. ವಿದ್ಯಾರ್ಥಿಗಳು ಸಮಚಿತ್ತತೆಯನ್ನು ರೂಢಿಸಿಕೊಳ್ಳಬೇಕು. ಜೀವನದಲ್ಲಿ ಏರಿಳಿತ ಇದ್ದೇ ಇರುತ್ತದೆ. ವಿದ್ಯಾರ್ಥಿಗಳನ್ನು ಉದಾತ್ತ ಗುರಿಯನ್ನು ಹಾಕಿಕೊಳ್ಳಬೇಕು. ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕು. ಈಗಿನದು ಸ್ಮರ್ಧಾತ್ಮಕ ಜಗತ್ತು. ಉತ್ತಮ ಜೀವನ ರೂಪಿಸಿಕೊಳ್ಳಬೇಕು. ನಮ್ಮ ಏಳ್ಗೆಗಾಗಿ ಶ್ರಮಿಸಿದ ಪಾಲಕರಿಗೆ, ಶಿಕ್ಷಕರಿಗೆ ಹಾಗೂ ಸಮಾಜಕ್ಕೆ ಗೌರವ ನೀಡಿ, ಸಮಾಜಕ್ಕೆ ನಮ್ಮದೇ ಆದ ಕೊಡುಗೆಯನ್ನು ಕೊಡಲು ಶ್ರಮಿಸಬೇಕು ಎಂದು ತಿಳಿಸಿದರು.
ಪಾಲಕರಾದ ರುದ್ರಮುನಿ ಮಾತನಾಡಿದರು.ಸನ್ಮಾನಿತ ವಿದ್ಯಾರ್ಥಿಗಳು: ಆಂಗ್ಲ ಮಾಧ್ಯಮದ ಸುದೀಪ ಎಚ್, ಒ.ಆರ್. ಪ್ರಜ್ವಲ್ ಹಾಗೂ ಜಿ.ಎಸ್. ಅಖಿಲ್‌ಕುಮಾರ್, ಕನ್ನಡ ಮಾಧ್ಯಮದ ಶಶಿಕಲಾ, ಅನು ಹಾಗೂ ಲಕ್ಷ್ಮಿ ಎಂ., ಉರ್ದು ಮಾಧ್ಯಮದ ಅಯಿನುಸ್ ಸಾಬಾ ಬಿ., ಅಫ್ರಿನ್ ಆಲಮ್ ಹಾಗೂ ಉಮ್ಮಿ ಕುಲ್ಸುಮ್ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಸಂಯೋಜಕ ಪಾಲಾಕ್ಷಪ್ಪ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಶರಣಬಸಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಭುದೇವಯ್ಯ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖರಾವ್, ಕೊಟ್ರೇಶ್, ಬಿಆರ್‌ಪಿ ಕಾರ್ತಿಕ್, ಮುಖ್ಯ ಶಿಕ್ಷಕ ಹೆಚ್.ಎನ್. ಭೋಸ್ಲೆ, ವಿದ್ಯಾರ್ಥಿಗಳ ಪಾಲಕರು ಉಪಸ್ಥಿತರಿದ್ದರು.