ಸಾರಾಂಶ
ಮಗುವನ್ನು ಹೇಗೆ ಕಲಿಕೆಯತ್ತ ಆಸಕ್ತಿ ಬರುವಂತೆ ನೋಡಿಕೊಳ್ಳಬೇಕು ಎಂಬುದು ಶಿಕ್ಷಕರು ಅರಿತು, ಮಗುವಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕು
ಬಳ್ಳಾರಿ: ನಗರದ ಎಸ್.ಕೆ. ಮೋದಿ ನ್ಯಾಷನಲ್ ಶಾಲೆಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ಪೂರ್ವ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಎರಡು ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿದ ವೀ.ವಿ. ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್, ಶಾಲೆಯಲ್ಲಿ ಮಗು ಕಲಿಕೆಯಲ್ಲಿ ಹೇಗೆ ಪಾಲ್ಗೊಳ್ಳುವಂತೆ ಮಾಡಬೇಕು ಎಂಬುದನ್ನು ಶಿಕ್ಷಕರು ಮೊದಲು ಅರಿಯಬೇಕು. ಪ್ರತಿಯೊಂದು ಮಗುವಿನಲ್ಲೂ ಕಲಿಕೆಯ ಅದಮ್ಯ ಶಕ್ತಿ ಇರುತ್ತದೆ. ಆದರೆ, ಮಗುವನ್ನು ಹೇಗೆ ಕಲಿಕೆಯತ್ತ ಆಸಕ್ತಿ ಬರುವಂತೆ ನೋಡಿಕೊಳ್ಳಬೇಕು ಎಂಬುದು ಶಿಕ್ಷಕರು ಅರಿತು, ಮಗುವಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕು. ಶಿಕ್ಷಕರಾದ ಶಾಲೆಯ ಕೋಣೆಯಲ್ಲಿ ಮಗುವಿಗೆ ತಾಯಿಪ್ರೀತಿ ತೋರಿಸಿ, ಮಕ್ಕಳೊಂದಿಗೆ ಸಲುಗೆ ಬೆಳಸಿಕೊಳ್ಳಬೇಕು ಎಂದು ಹೇಳಿದರು.ಎಸ್.ಕೆ.ಮೋದಿ ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಏಳುಬೆಂಚೆ ರಾಜಶೇಖರ್ ಮಾತನಾಡಿ, ಮಕ್ಕಳು ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುವುದು ಬಹಳ ಮುಖ್ಯ. ಶಿಕ್ಷಕರಾದವರು ಮಗು ಮತ್ತು ಶಾಲೆಯ ವಾತಾವರಣ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತರಬೇತುದಾರರಾದ ಅಂಜುಮ್ ರ‍್ವೀನ್ ಅವರು ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಮೊದ ಮೊದಲು ಮಗುವು ಶಾಲಾ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಶಿಕ್ಷಕರಾದವರು ತಮ್ಮಲ್ಲಿನ ಕೌಶಲ್ಯಗಳನ್ನು ಬಳಸಿಕೊಂಡು ಮಗುವನ್ನು ಶಾಲೆಯತ್ತ ಸೆಳೆಯಬೇಕು. ಸಂಗೀತ, ನೃತ್ಯ, ಹಾಡು ಮತ್ತಿತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಓದಿನ ಕಡೆ ಸೆಳೆಯಬೇಕು ಎಂದು ತಿಳಿಸಿದರು.ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ, ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ, ಸಹ ಕಾರ್ಯದರ್ಶಿ ಯಾಳ್ಪಿ ಮೇಟಿ ಪೊಂಪನಗೌಡ, ಖಜಾಂಚಿ ಬೈಲುವದ್ದಿಗೇರಿ ಎರ‍್ರಿಸ್ವಾಮಿ, ಶಾಲೆಯ ಮುಖ್ಯಗುರು ಸುನಂದಾ ಎಂ.ಪಾಟೀಲ್ ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.