ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಪ್ರಶಿಕ್ಷಣ ವರ್ಗವು ಮಂಡಲ ಮಟ್ಟದಲ್ಲಿ ಈಗಾಗಲೇ ಮುಗಿದಿದೆ. ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದವರೆಗೂ ನಡೆಯಲಿದೆ. ಇದು ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು, ಶಿಸ್ತು ಮೂಡಿಸಲು ಸಹಕಾರಿಯಾಗಲಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.ಖಾನಾಪುರ ತಾಲೂಕಿನ ಜಾಂಬೋಟಿ ಬಳಿಯ ಕೈವಲ್ಯಂ ಯೋಗ ರಿಟ್ರೀಟ್ ಸೆಂಟರ್‌ನಲ್ಲಿ ಬಿಜೆಪಿಯಿಂದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಮಾನ- 2026ರ ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿ, ನಿರ್ದಿಷ್ಟ ಗುರಿ ಹೊಂದಿರುವ ಬಿಜೆಪಿ ಇತರೆ ಪಕ್ಷಗಳಿಗಿಂತ ಭಿನ್ನವಾಗಿದೆ. ಕೇವಲ ಅಧಿಕಾರ ಗಳಿಸುವುದು ಮಾತ್ರ ನಮ್ಮ ಉದ್ದೇಶವಲ್ಲ. ಉತ್ತಮ ಸೇವೆ ಸಲ್ಲಿಸಲು ಅಧಿಕಾರ ನಮಗೆ ಒಂದು ಸಾಧನವಷ್ಟೇ, ಪಕ್ಷದ ಮೂಲ ತತ್ವ, ಸಿದ್ಧಾಂತ ಮತ್ತು ಪರಂಪರೆಯನ್ನು ಇಂದಿನ ಆಧುನಿಕ ಕಾಲಘಟ್ಟದ ಕಾರ್ಯಕರ್ತರಿಗೆ ಸ್ಮರಿಸಿ, ಪಕ್ಷದೊಳಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು. ಜನರಿಗೆ ಹೇಗೆ ಸೇವೆ ಸಲ್ಲಿಸಬೇಕು ಎಂಬುದನ್ನು ತಿಳಿಸಲು ಪ್ರಶಿಕ್ಷಣ ವರ್ಗ ಸಹಕಾರಿಯಾಗಲಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮತ್ತು ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ದೇಶ ರಕ್ಷಣೆ, ಭಾರತದ ಮೂಲ ನಿವಾಸಿಗಳ ರಕ್ಷಣೆಗಾಗಿ ಹುಟ್ಟಿಕೊಂಡ ಬಿಜೆಪಿ ಸಂಘಟನೆಯ ಮೂಲಕ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ರಾಜಕೀಯ ಪಕ್ಷವಾಗಿ ಖ್ಯಾತಿ ಗಳಿಸಿದೆ ಎಂದರು.ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ನಕಲಿ ಮತದಾರರನ್ನು ಹುಡುಕಿ ಅವರ ಮತದಾನದ ಹಕ್ಕನ್ನು ರದ್ದುಪಡಿಸಿದ ಕಾರಣ ಸ್ವತಂತ್ರ ಭಾರತದ ನಂತರ ಮೊದಲ ಬಾರಿಗೆ ಅಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಕಾರ್ಯಕರ್ತರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಿಲ್ಲ ಎಂಬುದಕ್ಕೆ ಪಶ್ಚಿಮ ಬಂಗಾಳ ಚುನಾವಣೆಯೇ ಸಾಕ್ಷಿ ಎಂಬುದನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಜಗದೀಶ್ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಮಹಾದೇವಪ್ಪ ಯಾದವಾಡ, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಮಹೇಶ್ ಮೋಹಿತೆ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಮಾದಮ್ಮನವರ, ಸಂದೀಪ ದೇಶಪಾಂಡೆ, ಧನಶ್ರೀ ದೇಸಾಯಿ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ್ ಕೊಚೇರಿ, ಖಾನಾಪುರ ಮಂಡಲ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ಸೇರಿದಂತೆ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.