ಬಿದಿರಿನ ಕಡ್ಡಿಗಳಿಂದ ವಿವಿಧ ಪರಿಕರ ತಯಾರಿಕೆ ತರಬೇತಿ

| Published : Jun 15 2024, 01:03 AM IST

ಸಾರಾಂಶ

ಹನೂರು ಪೊನ್ನಾಚಿ ಗ್ರಾಮದಲ್ಲಿ ಬಿದಿರು ಕಡ್ಡಿಗಳಿಂದ ವಿವಿಧ ಪರಿಕರಗಳ ತರಬೇತಿ ಕಾರ್ಯಾಗಾರವನ್ನು ಅರಣ್ಯ ಇಲಾಖೆ ವತಿಯಿಂದ ಪ್ರಾರಂಭಿಸಲಾಗಿದೆ.

ಹನೂರು: ಪೊನ್ನಾಚಿ ಗ್ರಾಮದಲ್ಲಿ ಬಿದಿರಿನ ಕಡ್ಡಿಗಳಿಂದ ವಿವಿಧ ಪರಿಕರಗಳನ್ನು ತಯಾರಿಸುವ ತರಬೇತಿ ಕೇಂದ್ರ ಪ್ರಾರಂಭವಾಗಿದೆ.

ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ಮಲೆ ಮಹದೇಶ್ವರ ವನ್ಯಜೀವಿ ವಲಯದ ಪೊನ್ನಾಚಿ ಗ್ರಾಮದಲ್ಲಿ ಅರಣ್ಯ ಇಲಾಖೆ ಹಾಗೂ ಇಂಡಸ್ಟ್ರಿ ಫೌಂಡೇಶನ್ ಬೆಂಗಳೂರು ಹಾಗೂ ಪರಿಸರ ಅಭಿವೃದ್ಧಿ ಸಮಿತಿ ಅವರ ಸಹಯೋಗದಲ್ಲಿ ತರಬೇತಿ ಕೇಂದ್ರ ಪ್ರಾರಂಭಿಸಲಾಗಿದೆ.

ತರಬೇತಿ ಕೇಂದ್ರದಲ್ಲಿ ಬಿದಿರು ಬೊಂಬುವಿನಿಂದ ಕಡ್ಡಿಗಳಾಗಿ ಪರಿವರ್ತಿಸಿ ವಿವಿಧ ರೀತಿಯ ಪರಿಕರಗಳನ್ನು ತಯಾರು ಮಾಡುವ ತರಬೇತಿಯನ್ನು ಪೊನ್ನಾಚಿ ಗ್ರಾಮದಲ್ಲಿ ಪ್ರಾರಂಭಿಸಲಾಗಿದೆ. ಮೊದಲನೇ ಹಂತದಲ್ಲಿ 25ರಿಂದ 30 ಮಹಿಳೆಯರಿಗೆ ಈ ತರಬೇತಿ ಕಾರ್ಯಗಾರದಲ್ಲಿ ಬಿದಿರಿನಿಂದ ತಯಾರು ಮಾಡುವ ಪರಿಕರಗಳ ಬಗ್ಗೆ ತರಬೇತಿ ನೀಡಲಾಗುವುದು. ಈ ಭಾಗದ ನಿರುದ್ಯೋಗಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಸದಾವಕಾಶ ಅರಣ್ಯ ಇಲಾಖೆ ಕಲ್ಪಿಸಿದೆ. ತರಬೇತಿ ಕೇಂದ್ರದಲ್ಲಿ ಭಾಗವಹಿಸುವ ಹೆಣ್ಣು ಮಕ್ಕಳಿಗೆ ಗೌರವಧನ ಸಿಗಲಿದೆ.

ತರಬೇತಿ ಮುಕ್ತಾಯವಾದ ನಂತರ ತರಬೇತಿ ಪಡೆದವರಿಗೆ ಬಿದಿರು ಸಂಸ್ಕರಣ ಘಟಕದಲ್ಲಿ ಅರಣ್ಯ ಇಲಾಖೆ ವತಿಯಿಂದ ಉದ್ಯೋಗ ಸಹ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಬಂದವರಿಗೆ ಮುಂದಿನ ದಿನಗಳಲ್ಲಿ ತರಬೇತಿ ತಂಡವನ್ನು ರಚಿಸಿ ತರಬೇತಿ ನೀಡಲಾಗುವುದು. ಉಳಿದಂತೆ ತರಬೇತಿಯಲ್ಲಿ ತೊಡಗಿಕೊಂಡಿರುವವರು ಈ ಸದಾವಕಾಶ ಬಳಸಿಕೊಂಡು ಉದ್ಯೋಗ ಪಡೆದುಕೊಳ್ಳುವಂತೆ ಮಲೆ ಮಾದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.