ಸಾರಾಂಶ
ಕ್ರಿಕೆಟ್ ತರಬೇತಿ ನೀಡುವ ರಾಕಿನ್ ಸ್ಪೋರ್ಟಿಂಗ್ ಅಕಾಡೆಮಿಗೆ ಚಾಲನೆ ನೀಡಿ ಮಾತನಾಡಿದ ಶಾಸಕ ರಾಜೇಗೌಡ ಗ್ರಾಮೀಣ ಪ್ರದೇಶದ ಯುವಜನರು ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಲು ಗುಣಮಟ್ಟದ ತರಬೇತಿ ಪಡೆಯುವುದು ಅಗತ್ಯ.
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಕ್ರೀಡೆಯಲ್ಲಿ ಗುರಿ ತಲುಪಲು ಪ್ರಯತ್ನ ಮತ್ತು ಗುರಿ ಪ್ರಮುಖವಾಗಿ ಬೇಕಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ಬೈರೇಗುಡ್ಡದಲ್ಲಿ ಭಾನುವಾರ ಕ್ರಿಕೆಟ್ ತರಬೇತಿ ನೀಡುವ ರಾಕಿನ್ ಸ್ಪೋರ್ಟಿಂಗ್ ಅಕಾಡೆಮಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಯುವಜನರು ಯಾವುದೇ ಕ್ರೀಡೆಯಲ್ಲಿ ಸಾಧನೆ ಮಾಡಲು ಗುಣಮಟ್ಟದ ತರಬೇತಿ ಪಡೆಯುವುದು ಅಗತ್ಯ.
ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ತರಬೇತಿಗೆ ಸುಸಜ್ಜಿತ ಆಕಾಡೆಮಿ ಆರಂಭಿಸಿರುವುದು ಶ್ಲಾಘನೀಯ ಎಂದರು.
ಇಲ್ಲಿ ತರಬೇತಿ ಪಡೆದ ಆಟಗಾರರು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಬೇಕು ಎಂಬುದು ನಮ್ಮ ಆಶಯ. ಗ್ರಾಮೀಣ ಭಾಗಗಳಿಂದ ಯುವಕರು ಸಾಧನೆ ಮಾಡಬೇಕು ಎಂಬುದೇ ನಮ್ಮ ಉದ್ದೇಶ. ಕ್ರೀಡೆಯಲ್ಲಿ ಸತತ ಸಾಧನೆ ಮಾಡುವ ಆಟಗಾರರಿಗೆ ನಾವು ಸದಾ ಪ್ರೋತ್ಸಾಹ ನೀಡುತ್ತೇವೆ ಎಂದರು.
ರಾಕಿನ್ ಅಕಾಡೆಮಿ ಅಧ್ಯಕ್ಷ ಮಹಮ್ಮದ್ ಇಫ್ತೆಖಾರ್ ಆದಿಲ್ ಮಾತನಾಡಿ, ಬಾಳೆಹೊನ್ನೂರಿನ ಯುವ ಆಟಗಾರರಿಗೆ ಪಟ್ಟಣದಲ್ಲಿ ಉತ್ತಮ ಕ್ರೀಡಾಂಗಣ ನೀಡಬೇಕು. ಇಲ್ಲಿನ ಪ್ರತಿಭೆಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೊರಹೊಮ್ಮಬೇಕು ಎಂಬುದು ನಮ್ಮ ಆಶಯವಾಗಿತ್ತು.
ಉತ್ತಮ ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ತರಬೇತಿ ನೀಡುವ ಆಕಾಡೆಮಿ ಸ್ಥಾಪಿಸಲಾಗಿದೆ. ಪಟ್ಟಣದಲ್ಲಿ ನಡೆಯುವ ಹಲವು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ಆಟಗಾರರು ಬಂದು ಆಡುತ್ತಾರೆ.
ಅದೇ ರೀತಿ ನಮ್ಮೂರಿನ ಪ್ರತಿಭೆಗಳು ಹೊರ ಕ್ರೀಡಾಂಗಣದಲ್ಲಿ ಆಡಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ.
ಆಟಗಾರರಲ್ಲಿ ಶಿಸ್ತು, ಸಂಯಮ ಅಗತ್ಯವಾಗಿರಬೇಕು. ಆಗ ಮಾತ್ರ ಸಾಧನೆ ಸಾಧ್ಯವಿದೆ. ಉತ್ತಮ ಹಂತಕ್ಕೆ ಬೆಳೆದ ನಂತರ ಆಟಗಾರರು ದುಶ್ಚಟ ಬೆಳೆಸಿಕೊಳ್ಳಬಾರದು. ದೇಶಕ್ಕಾಗಿ ಆಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಹ್ಯಾಮರ್ ಥ್ರೋನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಸಾಲೀಂ, ಏಕಲವ್ಯ ಪ್ರಶಸ್ತಿ ವಿಜೇತ ಪರ್ವೀಜ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಕಾಡೆಮಿ ಸ್ಥಾಪಕ ರಾಕಿನ್ ಆದಿಲ್, ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್, ಮಹಮ್ಮದ್ ಜುಹೇಬ್, ಬಿ.ಕೆ.ಮಧುಸೂದನ್, ಬಿ.ಸಿ.ಸಂತೋಷ್‌ಕುಮಾರ್, ಪ್ರಶಾಂತ್ ಬನ್ನೂರು, ಸತೀಶ್ ಅರಳೀಕೊಪ್ಪ, ಎಸ್.ಪೇಟೆ ಸತೀಶ್, ಗುರುಮೂರ್ತಿ ಬೆಳಸೆ, ಜಾನ್ ಡಿಸೋಜಾ, ಗಿರೀಶ್ ಹುಯಿಗೆರೆ ಮತ್ತಿತರರು ಇದ್ದರು.
೧೪ಬಿಹೆಚ್‌ಆರ್ ೧:
ಬಾಳೆಹೊನ್ನೂರಿನ ಬೈರೇಗುಡ್ಡದಲ್ಲಿ ನಡೆದ ರಾಕಿನ್ ಸ್ಪೋರ್ಟಿಂಗ್ ಅಕಾಡೆಮಿ ಉದ್ಘಾಟನೆಯಲ್ಲಿ ರಾಷ್ಟ್ರಮಟ್ಟದ ಹ್ಯಾಮರ್ ಥ್ರೋ ಸ್ಪರ್ಧೆಗೆ ಆಯ್ಕೆಯಾದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಸಾಲೀಂ ಅವರನ್ನು ಸನ್ಮಾನಿಸಲಾಯಿತು. ಶಾಸಕ ರಾಜೇಗೌಡ, ಮಹ್ಮದ್ ಇಫ್ತೆಕಾರ್ ಆದಿಲ್, ರಾಕಿನ್, ಎಂ.ಎಸ್.ಅರುಣೇಶ್, ಪ್ರಶಾಂತ್ ಇದ್ದರು.