ಬೆಂಗಳೂರು : ಫೆ. 10ರಿಂದ ಆರಂಭವಾಗುವ ಏರ್‌ ಶೋಗೆ ಯುದ್ಧ ವಿಮಾನಗಳ ತಾಲೀಮು ಶುರು

| N/A | Published : Feb 07 2025, 02:03 AM IST / Updated: Feb 07 2025, 08:20 AM IST

ಸಾರಾಂಶ

ಫೆ.10ರಿಂದ ಆರಂಭವಾಗುವ ಏರ್‌ಶೋಗೆ ತಾಲೀಮು ಶುರುವಾಗಿದೆ. ಸೂರ್ಯ ಕಿರಣ್‌ ಯುದ್ಧ ವಿಮಾನಗಳು ಆಕಾಶದಲ್ಲಿ ಹೃದಯ ಚಿತ್ರ ಬಿಡಿಸಿ ವೀಕ್ಷಕರ ಗಮನ ಸೆಳೆದವು.

 ಬೆಂಗಳೂರು :  ಒಂಬತ್ತು ‘ಹಾಕ್ ಎಂಕೆ 132’ ವಿಮಾನಗಳ ‘ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ’ ಯಲಹಂಕ ವಾಯುಪಡೆ ನೆಲೆಯಲ್ಲಿ ಭಾರತದ ತ್ರಿವರ್ಣ ಧ್ವಜದ ಬಣ್ಣಗಳನ್ನು ಹೊರಸೂಸುತ್ತಾ ಆಕರ್ಷಕ ಪ್ರದರ್ಶನ ನೀಡುತ್ತಿದ್ದರೆ ನೆರೆದಿದ್ದ ಸಾವಿರಾರು ವೀಕ್ಷಕರ ಚಪ್ಪಾಳೆ, ಕರಾಡತನ ಮುಗಿಲು ಮುಟ್ಟಿತ್ತು.

ಫೆ.10ರಿಂದ 14ರ ವರೆಗೆ ನಡೆಯುವ ಏರೋ ಇಂಡಿಯಾ-2025ಕ್ಕೆ ಪೂರ್ವಭಾವಿಯಾಗಿ ಗುರುವಾರದಂದು ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು, ಹೆಲಿಕಾಪ್ಟರ್‌, ಸರಕು ವಿಮಾನ, ಲಘು ತರಬೇತಿ ವಿಮಾನ, ಮಿಲಿಟರಿ ರಹಸ್ಯ ಕಾರ್ಯಾಚರಣೆ ವಿಮಾನಗಳು ತಾಲೀಮು ನಡೆಸಿದವು. ಈ ಪೈಕಿ ಸೂರ್ಯ ಕಿರಣ್ ತಂಡ ಹೆಚ್ಚು ಗಮನ ಸೆಳೆಯಿತು. ನೀಲಾಕಾಶದಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಸಂಯೋಜನೆ ವಿಮಾನಗಳು ಬರೀ 5 ಮೀಟರ್‌ ಸಮೀಪದ ಅಂತರ ಕಾಪಾಡಿಕೊಂಡು ನೂರಾರು ಕಿ.ಮೀ ವೇಗದಲ್ಲಿ ಹಾರುತ್ತಿದ್ದರೆ ನೋಡುಗರ ಮೈ ಜುಂ ಎನ್ನುತ್ತಿತ್ತು.ತಲಾ ಎರಡು ವಿಮಾನಗಳು ವಿರುದ್ಧ ದಿಕ್ಕಿನಲ್ಲಿ ನೂರಾರು ಕಿ.ಮೀ ವೇಗದಲ್ಲಿ ಹಾರುತ್ತ ಮುಖಾಮುಖಿ ಡಿಕ್ಕಿಯಾಗುತ್ತವೆ ಎನ್ನುವಷ್ಟರಲ್ಲಿ ತಿರುವು ತೆಗೆದುಕೊಂಡು ಸುರಕ್ಷಿತವಾಗಿ ಸಾಗುವ ಕ್ಷಣಗಳು ವೀಕ್ಷಕರ ಹೃದಯ ಬಡಿತ ಹೆಚ್ಚಿಸಿದವು. ನೀಲಾಕಾಶದಲ್ಲಿ ಬಿಳಿ ಹೊಗೆ ಬಿಡುತ್ತಾ ರಚಿಸಿದ ‘ಹೃದಯ ಚಿಹ್ನೆ’ ಸೇರಿದಂತೆ ವಿವಿಧ ಆಕಾರಗಳು ಕಣ್ಣಿಗೆ ಮುದ ನೀಡಿದವು.

ಇನ್ನು ಭಾರತೀಯ ವಾಯುಸೇನೆಯ ಬೆನ್ನೆಲೆಬು ಎಂದು ಕರೆಯಲಾಗುವ ಯುದ್ಧವಿಮಾನ ಸುಖೋಯ್ ಎಸ್‌ಯು-30 ಮತ್ತು ಎಚ್‌ಎಎಲ್ ಲಘು ಯುದ್ಧ ವಿಮಾನ ತೇಜಸ್ ಗರ್ಜಿಸಿದವು. ಎಚ್‌ಎಎಲ್‌ನ ವಿವಿಧ ಹೆಲಿಕಾಪ್ಟರ್‌ಗಳು ಆಕರ್ಷಕ ಪ್ರದರ್ಶನ ನೀಡಿದವು.ಸೇನೆಯ ಕುಟುಂಬದವರು, ಶಾಲಾ ಮಕ್ಕಳಿಗೆ ಅವಕಾಶ:

ಏರೋ ಇಂಡಿಯಾ ಆಯೋಜನೆ, ಭದ್ರತೆ, ಮೇಲ್ವಿಚಾರಣೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಸೇನೆಯ ಮೂರು ಪಡೆಗಳು, ಕೇಂದ್ರೀಯ ಭದ್ರತಾ ಪಡೆಗಳು, ಎಚ್‌ಎಎಲ್, ಡಿಆರ್‌ಡಿಒ, ಬಿಇಎಲ್ ಸೇರಿದಂತೆ ವಿವಿಧ ಮಿಲಿಟರಿ ಉತ್ಪನ್ನಗಳ ಉತ್ಪಾದಕ ಸಂಸ್ಥೆಗಳು, ಪೊಲೀಸರ ಕುಟುಂಬದವರಿಗೆ ಯಲಹಂಕ ವಾಯುಪಡೆ ನೆಲೆಯ ಸುತ್ತಲಿನ ಗ್ರಾಮಗಳ ಕೆಲವು ಶಾಲಾ ಮಕ್ಕಳಿಗೆ ಗುರುವಾರ ವೈಮಾನಿಕ ಪ್ರದರ್ಶನದ ತಾಲೀಮು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.ಟ್ರಾಫಿಕ್ ಜಾಮ್:

ಪ್ರತಿ ಬಾರಿ ಏರೋ ಇಂಡಿಯಾ ಸಂದರ್ಭದಲ್ಲಿ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಸುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಗುರುವಾರವೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಮಾನ ನಿಲ್ದಾಣ ರಸ್ತೆಯಿಂದ ಸಾರ್ವಜನಿಕರು ಪ್ರದರ್ಶನ ವೀಕ್ಷಣೆಗೆ ತೆರಳುವ ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯ ತಿರುವಿನಲ್ಲಿ ಭಾರಿ ವಾಹನ ದಟ್ಟಣೆ ಇತ್ತು. ಅಲ್ಲದೇ ವಾಯುಪಡೆ ನೆಲೆಯ ಮುಖ್ಯ ದ್ವಾರದ ಬಳಿಯು ದಟ್ಟಣೆ ಉಂಟಾಗಿತ್ತು. ಫೆ.10ರಿಂದ 14ರವರೆಗೆ ಏರೋ ಇಂಡಿಯಾ ಸಂದರ್ಭದಲ್ಲಿ ಇನ್ನು ಹೆಚ್ಚು ಜನರು, ಪ್ರತಿನಿಧಿಗಳು ಭಾಗವಹಿಸುವ ಕಾರಣ ಇನ್ನೂ ಹೆಚ್ಚಿನ ಟ್ರಾಫಿಕ್ ಜಾಮ್ ಆಗುವ ಸಾಧ್ಯತೆ ಇದೆ.

5ನೇ ತಲೆಮಾರಿನ ಯುದ್ಧ ವಿಮಾನಸುಖೋಯ್ ಎಸ್‌ಯು-57 ಲ್ಯಾಂಡ್‌

 ಬೆಂಗಳೂರು :  ಈ ಬಾರಿಯ ಏರೋಇಂಡಿಯಾ 2025ರ ಆಕರ್ಷಣೆಯ ಕೇಂದ್ರ ಬಿಂದು ಆಗಿರುವ ಐದನೇ ತಲೆಮಾರಿನ ಯುದ್ಧ ವಿಮಾನ ರಷ್ಯಾದ ‘ಸುಖೋಯ್ ಎಸ್‌ಯು-57ಇ’ ಯಲಹಂಕ ವಾಯುಪಡೆ ನೆ ಲೆಗೆ ಗುರುವಾರ ಬಂದಿಳಿದಿದೆ.

ರಹಸ್ಯ ಕಾರ್ಯಾಚರಣೆ ತಂತ್ರಜ್ಞಾನ ಹೊಂದಿರುವ, ಸಾಮಾನ್ಯ ಯುದ್ಧ ವಿಮಾನಗಳಿಗಿಂತ ಹೆಚ್ಚು ಕ್ಷಿಪಣಿ ಮತ್ತು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಎಸ್‌ಯು-57 ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು ವಿಶೇಷವಾಗಿದೆ.

ಎಸ್‌ಯು-57 ಮಾರಾಟ ಮಾಡಲು ರಷ್ಯಾ ಆಸಕ್ತಿ ಹೊಂದಿದ್ದರೆ, ಭಾರತೀಯ ವಾಯುಸೇನೆಯು ಇದನ್ನು ಸೇರ್ಪಡೆಗೊಳಿಸಲು ಯೋಜಿಸಿದೆ ಎಂದು ಹೇಳಲಾಗಿದೆ.

ಮುಂಬರುವ ದಿನಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಅದಕ್ಕೂ ಮೊದಲು ಎಸ್‌ಯು-57 ವಿಮಾನ ಏರೋ ಇಂಡಿಯಾದಲ್ಲಿ ಭಾಗವಹಿಸುತ್ತಿರುವುದರಿಂದ ಸೇನೆಗೆ ಸೇರ್ಪಡೆಗೊಳಿಸುವ ಬಗ್ಗೆ ಚರ್ಚೆಗಳು ನಡೆಯಬಹುದು ಎಂದು ಹೇಳಲಾಗಿದೆ.ಏರ್‌ಶೋ ವೀಕ್ಷಣೆಗಾಗಿ ಪಾಸ್ ಹೀಗೆ ಖರೀದಿಸಿ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಿಸಲು ಬಯಸುವ ಆಸಕ್ತರು ಮೊಬೈಲ್‌ನಲ್ಲಿ ಏರೋ ಇಂಡಿಯಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ www.aeroindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಹೆಸರು ನೋಂದಣಿ ಮಾಡಿಕೊಂಡು 1 ಸಾವಿರ ರು. ಶುಲ್ಕ ಪಾವತಿಸಿ ಪಾಸ್ ಖರೀದಿಸಬಹುದು.

ಫೆ.11ರಿಂದ 14ರ ವರೆಗೆ ಸಾರ್ವಜನಿಕರು ಏರೋ ಇಂಡಿಯಾ ವೀಕ್ಷಣೆಗೆ ಅವಕಾಶವಿದೆ. ವಸ್ತು ಪ್ರದರ್ಶನ ಮತ್ತು ವೈಮಾನಿಕ ಪ್ರದರ್ಶನ ವೀಕ್ಷಿಸಲು ₹2,500 ಮತ್ತು ಬಿಸಿನೆಸ್ ಪಾಸ್ ದರ ₹5,000 ನಿಗದಿಪಡಿಸಲಾಗಿದೆ.