ಕನ್ನಡಪ್ರಭ ವಾರ್ತೆ ಸುತ್ತೂರುಅಡಿಕೆಯು ರೈತರಿಗೆ ಉತ್ತಮ ಆದಾಯ ತಂದು ಕೊಡುವ ಪ್ರಮುಖ ವಾಣಿಜ್ಯ ಬೆಳೆಯಾಗಿದೆ ಎಂದು ಮೈಸೂರಿನ ಕೇಂದ್ರ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಮಹದೇವಸ್ವಾಮಿ ಹೇಳಿದರು.ಐಸಿಎಆರ್- ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರಿನಲ್ಲಿ ಎಸ್ಸಿಎಸ್ಪಿ ಯೋಜನೆಯಡಿಯಲ್ಲಿ ಅಡಿಕೆ ಆಧಾರಿತ ಮಿಶ್ರ ಬೆಳೆ ಪದ್ಧತಿಗಳು ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅಡಿಕೆಯು ರೈತರಿಗೆ ಉತ್ತಮ ಆದಾಯ ತಂದು ಕೊಡುವ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನೀರಿನ ಲಭ್ಯತೆಯನ್ನು ಪರಿಗಣಿಸಿ ಯೋಜಿತವಾಗಿ ಬೆಳೆಯಬೇಕು ಎಂದರು.ಅಡಿಕೆ ತೋಟಗಳಲ್ಲಿ ಮಣ್ಣಿನ ತೇವಾಂಶವನ್ನು ಕಾಪಾಡಲು ಮಲ್ಚಿಂಗ್ ಅಳವಡಿಸಿಕೊಳ್ಳುವುದು, ಮಳೆ ನೀರು ಸಂಗ್ರಹಣೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು. ಅಡಿಕೆ ತೋಟದಲ್ಲಿ ಕೇವಲ ಏಕಬೆಳೆ ಪದ್ಧತಿಯನ್ನು ಅನುಸರಿಸದೆ ಅಂತರ ಬೆಳೆ ಹಾಗೂ ಮಿಶ್ರ ಬೆಳೆಗಳನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚುವರಿ ಆದಾಯದ ಜೊತೆಗೆ ಭೂಮಿಯ ಫಲವತ್ತತೆ, ಜೈವಿಕ ವೈವಿಧ್ಯತೆ ಹಾಗೂ ತೋಟದ ಸುಸ್ಥಿರತೆ ಹೆಚ್ಚುತ್ತದೆ ಎಂದು ಅವರು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಐಸಿಎಆರ್‌ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ತೋಟಗಾರಿಕಾ ಬೆಳೆಗಳಲ್ಲಿ ಅಡಿಕೆಯುಅತ್ಯಂತ ಲಾಭದಾಯಕ ಬೆಳೆಯಾಗಿದ್ದರೂ, ಏಕಬೆಳೆ ಪದ್ಧತಿಯಿಂದ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ರೈತರು ಅಂತರ ಹಾಗೂ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಅರ್ಥಿಕ ನಷ್ಟವನ್ನು ಕಡಿಮೆ ಮಾಡಿಕೊಂಡು ನಿರಂತರ ಆದಾಯವನ್ನು ಪಡೆಯಬಹುದು ಎಂದು ತಿಳಿಸಿದರು.ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದ ಕಾರಣ ಗಿಡಗಳಿಗೆ ಹೊದಿಕೆ ಮಾಡುವುದು ರೂಢಿಸಿಕೊಳ್ಳಬೇಕು. ಇದರಿಂದ ಗಿಡಗಳ ಸುತ್ತಾಮಣ್ಣಿನ ತೇವಾಂಶವನ್ನು ಸಂರಕ್ಷಿಸುವುದಲ್ಲದೇ, ಸೂರ್ಯನ ಬೆಳಕನ್ನು ತಡೆಯುವ ಮೂಲಕ ಕಳೆಗಳನ್ನು ನಿಗ್ರಹಿಸುತ್ತದೆ. ಮಲ್ಚಿಂಗ್ ನಿಂದ ಮಣ್ಣಿನ ತಾಪಮಾನವನ್ನು ನಿಯಂತ್ರಿಸುವುದಲ್ಲದೇ, ಸಾವಯವ ಪದಾರ್ಥಗಳು ಕೊಳೆಯುತ್ತಿದ್ದಂತೆ ಮಣ್ಣಿನ ಫಲವತ್ತತೆಯನ್ನು ಉತ್ಕೃಷ್ಟಗೊಳಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ರೈತರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನ ಹಾಗೂ ವೈಜ್ಞಾನಿಕ ಶಿಫಾರಸುಗಳನ್ನು ಅನುಸರಿಸಿ ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.ಮೈಸೂರಿನ ಪ್ರಗತಿಪರ ರೈತ ಚಂದ್ರಚೂಡ ಹಾಗೂ ನಿವೃತ್ತ ಪ್ರಾದೇಶಿಕ ಅರಣ್ಯ ಅಧಿಕಾರಿ ಹುಚ್ಚಯ್ಯ ಅತಿಥಿಗಳಾಗಿದ್ದರು.ಸಂಪನ್ಮೂಲ ವ್ಯಕ್ತಿಯಾಗಿದ್ದ ಅರಸೀಕೆರೆಯ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಹಾಗೂ ತೋಟಗಾರಿಕಾ ವಿಜ್ಞಾನಿ ಡಾ. ಎಂ.ವಿ. ಭರತ್ ಕುಮಾರ್ ಮಾತನಾಡಿ, ಅಡಿಕೆ ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ರೈತರಿಗೆ ಭಾರತೀಯ ಕೃಷಿ ಸಂಶೋಧನಾ ಪರಿಷತ್ (ಐಸಿಎಆರ್) ಅಭಿವೃದ್ಧಿ ಪಡಿಸಿರುವ "ಕಿಸಾನ್ ಸಾರಥಿ " ಮೊಬೈಲ್ ಅಪ್ಲಿಕೇಶನ್ ಕುರಿತು ವಿಶೇಷ ಮಾಹಿತಿ ನೀಡಲಾಯಿತು.ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ವಿನಯ್, ಡಾ. ಪ್ರಸಾದ್, ಡಾ. ದೀಪಕ್, ಡಾ. ರಕ್ಷಿತ್, ದಿವ್ಯಾ ಹಾಗೂ ಶಾಮರಾಜ್ ಇದ್ದರು. ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ರೈತರು ಮತ್ತು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವೈಜ್ಞಾನಿಕ ಮಾಹಿತಿ ಪಡೆದು ತರಬೇತಿಯ ಸದುಪಯೋಗವನ್ನು ಪಡೆದುಕೊಂಡರು.
ಅಡಿಕೆ ಉತ್ತಮ ಆದಾಯ ತರುವ ವಾಣಿಜ್ಯ ಬೆಳೆ
- ಐಸಿಎಆರ್-ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.