ಶಿಬಿರಾರ್ಥಿಗಳಿಗೆ ಔಷಧಿ ಮೂಲಿಕೆಗಳ ಮಹತ್ವ ಮತ್ತು ಚಿಕಿತ್ಸಾ ವಿಧಾನ ತರಬೇತಿ

| Published : May 29 2024, 01:00 AM IST

ಸಾರಾಂಶ

ವೈದ್ಯ ಸೋಮೇಗೌಡ ಅವರು ವಂಶಪಾರಂಪರ್‍ಯದಿಂದ ಹಾವು ಕಡಿತಕ್ಕೆ ಬಳಸುತ್ತಿದ್ದ ಇತ್ತೀಚಿನ ಜನರು ನೋಡದೆ ಇರುವಂತಹ ಪಚ್ಚೆ ಮಣಿಯನ್ನು ಶಿಬಿರಾರ್ಥಿಗಳಿಗೆ ಮತ್ತು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಶ್ರೀಗಳಿಗೆ ತೋರಿಸುವ ಮೂಲಕ ಪಚ್ಚೆ ಮಣಿ ಪರಿಚಯಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ತಪೋವನದಲ್ಲಿ ನಡೆಯುತ್ತಿರುವ ಗುರು ಶಿಷ್ಯ ಪರಂಪರೆ ತರಬೇತಿ ಶಿಬಿರದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ್ದ ನುರಿತ ಪಾರಂಪರಿಕ ವೈದ್ಯರು ಹಲವು ಬಗೆಯ ಔಷಧಿ ಮೂಲಿಕೆಗಳ ಮಹತ್ವ ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಾರ್ವೆ ಪೇಟೆಯ ಖ್ಯಾತ ಪಾರಂಪರಿಕ ವೈದ್ಯ ಸೋಮೇಗೌಡ ಅವರು ತಲೆ ಮತ್ತು ಮೀಸೆಯ ಜಾಗದಲ್ಲಿ ಕ್ಷೌರಿಕ ಹುಳ ನಿಯಂತ್ರಣ ವಿಧಾನ, ಗ್ಯಾಸ್ಟ್ರಿಕ್ ಸಮಸ್ಯೆ, ಹಲ್ಲು ಜುಮ್ ಎನ್ನುವ ವೇಳೆ ಬಳಸುವ ವಿಧಾನ, ಹಳೆ ಗಾಯಗಳಿಗೆ ಔಷಧೋಪಚಾರ, ಹೊಟ್ಟೆಯ ಭಾಗದಲ್ಲಿ ಭಟ್ಟಿ ಜಾರಿದ ವೇಳೆ ಸರಿಪಡಿಸುವ ವಿಧಾನ, ಸರ್ಪ ಸುತ್ತು, ಮಹಿಳೆಯರ ಬಿಳಿ ಮುಟ್ಟು ಔಷಧೋಪಚಾರ ಮಾಡುವ ವಿಧಾನಗಳನ್ನು ಔಷಧಿ ಮೂಲಿಕೆಗಳನ್ನು ತಂದು ಶಿಬಿರಾರ್ಥಿಗಳಿಂದಲೇ ಪ್ರಾಯೋಗಿಕವಾಗಿ ಮಾಡಿಸಿ ಶಿಬಿರಾರ್ಥಿಗಳಿಗೆ ಹಸ್ತಾಂತರಿಸಿದರು.

ವೈದ್ಯ ಸೋಮೇಗೌಡ ಅವರು ವಂಶಪಾರಂಪರ್‍ಯದಿಂದ ಹಾವು ಕಡಿತಕ್ಕೆ ಬಳಸುತ್ತಿದ್ದ ಇತ್ತೀಚಿನ ಜನರು ನೋಡದೆ ಇರುವಂತಹ ಪಚ್ಚೆ ಮಣಿಯನ್ನು ಶಿಬಿರಾರ್ಥಿಗಳಿಗೆ ಮತ್ತು ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಶ್ರೀಗಳಿಗೆ ತೋರಿಸುವ ಮೂಲಕ ಪಚ್ಚೆ ಮಣಿ ಪರಿಚಯಿಸಿದರು.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜುಟ್ಟನಹಳ್ಳಿ ಗ್ರಾಮದ ಹಿರಿಯ ಪಾರಂಪರಿಕ ವೈದ್ಯ ಕೃಷ್ಣಗೌಡ ಅವರು ಕೊಳಕಮಂಡಲ ಹಾವು ಕಡಿದು ಕೊಳೆತ ವೇಳೆ ಗಿಡ ಮೂಲಕೆಗಳನ್ನು ಬಳಸಿ ಮಣ್ಣಿನ ಮಡಿಕೆಯಲ್ಲಿ ಹುರಿದು ಬಸ್ಮ ತೆಗೆಯುವ ಚಿಕಿತ್ಸಾ ವಿಧಾನವನ್ನು ಔಷಧಿ ಮೂಲಿಕೆಗಳನ್ನು ತಂದು ಶಿಬಿರಾರ್ಥಿಗಳಿಂದಲೇ ಪ್ರಾಯೋಗಿಕವಾಗಿ ಮಾಡಿಸಿ ಶಿಬಿರಾರ್ಥಿಗಳಿಗೆ ಹಸ್ತಾಂತರಿಸಿದರು.