ಸಾರ್ವಜನಿಕ ವೃತ್ತಿಯಲ್ಲಿರುವವರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ: ನ್ಯಾ. ಶಾಂತಣ್ಣ ಆಳ್ವಾ

| Published : May 16 2024, 12:46 AM IST

ಸಾರ್ವಜನಿಕ ವೃತ್ತಿಯಲ್ಲಿರುವವರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ: ನ್ಯಾ. ಶಾಂತಣ್ಣ ಆಳ್ವಾ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಜಿಲ್ಲಾ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾರ್ಯನಿರ್ವ ಹಿಸಿ ವರ್ಗಾವಣೆಗೊಂಡ ನ್ಯಾಯಾಧೀಶರಾದ ಶಾಂತಣ್ಣ ಆಳ್ವಾ, ಆರ್.ಪಿ.ನಂದೀಶ್, ಎ.ಎಸ್. ಸೋಮ, ಎ.ಕಾಜಲ್ ಹಾಗೂ ಬಿ.ಪುಷ್ಪಾಂಜಲಿ ಅವರಿಗೆ ಬುಧವಾರ ಜಿಲ್ಲಾ ವಕೀಲರ ಸಂಘದಿಂದ ಬೀಳ್ಕೊಡಲಾಯಿತು.

ಜಿಲ್ಲಾ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ಬೀಳ್ಕೊಡುಗೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಿಲ್ಲಾ ನ್ಯಾಯಾಲಯದಲ್ಲಿ ಮೂರು ವರ್ಷಗಳ ಕಾರ್ಯನಿರ್ವ ಹಿಸಿ ವರ್ಗಾವಣೆಗೊಂಡ ನ್ಯಾಯಾಧೀಶರಾದ ಶಾಂತಣ್ಣ ಆಳ್ವಾ, ಆರ್.ಪಿ.ನಂದೀಶ್, ಎ.ಎಸ್. ಸೋಮ, ಎ.ಕಾಜಲ್ ಹಾಗೂ ಬಿ.ಪುಷ್ಪಾಂಜಲಿ ಅವರಿಗೆ ಬುಧವಾರ ಜಿಲ್ಲಾ ವಕೀಲರ ಸಂಘದಿಂದ ಬೀಳ್ಕೊಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ಮತ್ತು ತ್ವರಿತಗತಿ ನ್ಯಾಯಾಲಯ ನ್ಯಾಯಾಧೀಶ ಶಾಂತಣ್ಣ ಆಳ್ವಾ ಅವರು, ಸಾರ್ವಜನಿಕ ವೃತ್ತಿಯಲ್ಲಿ ಕಾರ್ಯನಿರ್ವಹಿಸುವ ನ್ಯಾಯಾಧೀಶರಿಗೆ ವರ್ಗಾವಣೆ ಸಹಜ ಪ್ರಕ್ರಿಯೆ. ಆ ನಡುವೆ ಕೈಗೊಂಡ ನ್ಯಾಯ ಸಮ್ಮತ ತೀರ್ಪುಗಳು ವೃತ್ತಿ ಬದುಕಿನಲ್ಲಿ ಬಹಳಷ್ಟು ಪ್ರಭಾವ ಬೀರಲಿವೆ ಎಂದು ಹೇಳಿದರು.

ಓರ್ವ ಉತ್ತಮ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಲು ವಕೀಲರ ಸಹಕಾರ ಅತ್ಯಮೂಲ್ಯ, ಪ್ರತಿ ಕೇಸುಗಳಲ್ಲಿ ವಕೀಲರು ಸಾಕ್ಷಿ, ದಾಖಲೆಗಳನ್ನು ಸಮರ್ಪಕವಾಗಿ ಒದಗಿಸಿದರೆ ನ್ಯಾಯಯುತ ತೀರ್ಮಾನ ಕೈಗೊಳ್ಳಲು ಸಾಧ್ಯ ಎಂದ ಅವರು, ಮೂರು ವರ್ಷಗಳು ಜಿಲ್ಲೆಯಲ್ಲಿ ಕೈಗೊಂಡ ಸೇವೆ ತೃಪ್ತಿ ತಂದಿದೆ ಎಂದು ಹೇಳಿದರು.

ಆರೋಗ್ಯ ಸೇವೆ ನೀಡುವ ಆಸ್ಪತ್ರೆಗಳಲ್ಲಿ ಅನ್ಯಾಯ, ಅಕ್ರಮ ಅಥವಾ ಇನ್ಯಾವುದೇ ಸಮಾಜದಲ್ಲಿ ವಂಚನೆಗೆ ಒಳಗಾಗಿದ್ದಲ್ಲಿ ಸಾರ್ವಜನಿಕರು ಮುಕ್ತವಾಗಿ ನ್ಯಾಯಾಲಯ ಕೇಸು ದಾಖಲಿಸಿ ನ್ಯಾಯಕ್ಕಾಗಿ ಹೋರಾಡಬೇಕು. ನೊಂದವರ ಪಾಲಿಗೆ ನ್ಯಾಯಾಲಯ ಸಮರ್ಪಕ ವಿಚಾರಣೆ ನಡೆಸಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಲಿದೆ ಎಂದರು.

ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಆರ್.ಪಿ.ನಂದೀಶ್ ಮಾತನಾಡಿ, ಜಿಲ್ಲೆಯಲ್ಲಿ ನಿರ್ವಹಿಸಿದ ಪ್ರತಿ ಕೇಸುಗಳಲ್ಲಿ ತಾಳ್ಮೆಯಿಂದ ಆಲಿಸಿ ನೊಂದ ಸಾರ್ವಜನಿಕರಿಗೆ ಸ್ಪಂದಿಸುವ ಕೆಲಸ ಮಾಡಲಾಗಿದೆ. ಜೊತೆಗೆ ವಕೀಲ ಮಿತ್ರರ ಬಾಂಧವ್ಯದಿಂದ ನ್ಯಾಯಾಲಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಅನೇಕ ವರ್ಷಗಳಿಂದ ಪರಿಪೂರ್ಣ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರತಿ ಪ್ರಕರಣಗಳಲ್ಲಿ ಅಂಜಿಕೆ ಇಲ್ಲದೇ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ನ್ಯಾಯ ಒದಗಿಸಿದ್ದಾರೆ. ಅಲ್ಲದೇ ಕೆಲವು ಪ್ರಕರಣಗಳಲ್ಲಿ ಎಂತಹ ಒತ್ತಡಗಳಿಗೂ ಮಣಿಯದೇ ನೊಂದವರ ಪಾಲಿಗೆ ಆಶಾದಾಯಕವಾಗಿ ಕರ್ತವ್ಯ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.

ಸಂಸಾರದಲ್ಲಿ ಗಂಡ ಹೆಂಡತಿ ಸಹಬಾಳ್ವೆ ಜೀವನವನ್ನು ಸುಂದರಗೊಳಿಸಿದಂತೆ, ನ್ಯಾಯಾಲಯದಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಹೊಂದಾಣಿಕೆಯಿಂದ ಇದ್ದರೆ ಪ್ರಕರಣಗಳು ತ್ವರಿತಗತಿಯಲ್ಲಿ ಇತ್ಯರ್ಥವಾಗುವುದರಲ್ಲಿ ಸಂಶಯವಿಲ್ಲ. ಹೀಗಾಗಿ ವರ್ಗಾವಣೆಗೊಂಡ ನ್ಯಾಯಾಧೀಶರು ಕಹಿ ಘಟನೆಗಳನ್ನು ಮರೆತು ವಕೀಲರು, ಸಹಪಾಠಿಗಳ ಸಿಹಿ ನೆನಪು ಗಳನ್ನು ಮೆಲುಕು ಹಾಕುತ್ತಾ ಮುನ್ನೆಡೆಯಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ , ನ್ಯಾಯಾಧೀಶರಾದ ಎ.ಎಸ್.ಸೋಮ, ಎರಡನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಎ.ಕಾಜಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ, ನ್ಯಾಯಾಧೀಶರಾದ ಶುಭ ಗೌಡರ್, ವಕೀಲರ ಸಂಘದ ಕಾರ್ಯದರ್ಶಿ ಆರ್.ಅನಿಲ್‍ಕುಮಾರ್, ಖಜಾಂಚಿ ಡಿ.ಬಿ. ದೀಪಕ್, ಮಾಜಿ ಅಧ್ಯಕ್ಷ ಸುಧಾಕರ್, ವಕೀಲರಾದ ಕೆ.ಸಿ.ಶಿವು, ಎಚ್.ಟಿ.ನಟರಾಜ್, ರಾಘವೇಂದ್ರ, ಎ.ಎಂ.ಮಹೇಶ್, ಪಿ.ಪರಮೇಶ್, ಎಚ್. ಎಂ.ರಘುನಾಥ್, ಅಬ್ದುಲ್‍ ಮಜೀದ್‍ಖಾನ್, ಮಂಜುನಾಥ್ ಇದ್ದರು.ಪೋಟೋ ಪೈಲ್‌ ನೇಮ್‌ 15 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ವರ್ಗಾವಣೆಗೊಂಡ ನ್ಯಾಯಾಧೀಶರಿಗೆ ವಕೀಲರ ಸಂಘದಿಂದ ಬೀಳ್ಕೊಡ ಲಾಯಿತು. ನ್ಯಾಯಾಧೀಶರಾದ ಶುಭ ಗೌಡರ್‌, ಶಾಂತಣ್ಣ ಆಳ್ವಾ, ಎ.ಎಸ್‌. ಸೋಮ, ಎ. ಕಾಜಲ್‌, ವಕೀಲರಾದ ಸುಜೇಂದ್ರ, ಅನಿಲ್‌ಕುಮಾರ್‌, ದೀಪಕ್‌ ಇದ್ದರು.