ಸಾರಾಂಶ
ಚಿಕ್ಕಮಗಳೂರು : ಸರ್ಕಾರಿ ಸೇವೆಗೆ ಸೇರಿದ ಬಳಿಕ ವರ್ಗಾವಣೆ ಅನಿವಾರ್ಯ, ಹಾಗೆಯೇ ನಿವೃತ್ತಿ ಕೂಡ ಪದ್ಧತಿ ಎಂದು ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಹೇಳಿದರು.
ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾಗಿದ್ದ ಶುಭಗೌಡರ್‌ಗೆ ಶನಿವಾರ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಕೀಲರ ಸಂಘ ಸಂಸ್ಕಾರ, ಸಂಪ್ರದಾಯದಂತೆ ನ್ಯಾಯಾಧೀಶರಾಗಿ ಬಂದಾಗ ಸ್ವಾಗತಿಸಿ, ವರ್ಗಾವಣೆ, ನಿವೃತ್ತ ರಾದವರಿಗೆ ಬೀಳ್ಕೊಡುಗೆ ನೀಡುತ್ತಾ ಸಂಪ್ರದಾಯ ಪಾಲನೆ ಮಾಡಿಕೊಂಡು ಬಂದಿದೆ ಎಂದರು. ರಾಜ್ಯದ ವಿವಿಧೆಡೆ ಸುಮಾರು 29 ವರ್ಷಗಳ ಕಾಲ ನ್ಯಾಯಾಧೀಶರಾಗಿದ್ದ ಶುಭ ಗೌಡರ್ ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದು, ಒಟ್ಟು 12 ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದರು.
ಕೋವಿಡ್ ವೇಳೆ ಬಹಳಷ್ಟು ದೂರುಗಳಿಗೆ ಒಳಗಾಗುವ ಪ್ರಸಂಗ ಎದುರಾಯಿತು. ಆ ಸಂದರ್ಭದಲ್ಲಿ ನ್ಯಾಯಾಧೀಶರು ಕಟ್ಟುನಿಟ್ಟಿನ ಕ್ರಮ ವಹಿಸಿದ ಪರಿಣಾಮ ಇಂದು ಎಲ್ಲರೂ ಆರೋಗ್ಯವಂತರಾಗಿ ಜೀವಂತವಾಗಿದ್ದೇವೆ. ಅದಕ್ಕಾಗಿ ನ್ಯಾಯಾಧೀಶರಾದ ಶುಭಗೌಡರವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವಕೀಲರ ಸಂಘ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶುಭಗೌಡರ್, ಎಲ್ಲಾ ವಕೀಲರ ಸಲಹೆ, ಸಹಕಾರದಿಂದ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವುದು ತೃಪ್ತಿ ತಂದಿದೆ. ತಮ್ಮ ಕರ್ತವ್ಯದ ಅವಧಿಯಲ್ಲಿ ಸುಮಾರು 27,500 ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥ ಮಾಡಿದ್ದು, ಇದಕ್ಕೆ ತಂಡದ ರೂಪದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈವರೆಗೆ ತಮ್ಮ ಸೇವಾವಧಿಯಲ್ಲಿ ನೀಡಿದ ಸಹಕಾರ ಮುಂದೆ ಬರುವವರಿಗೂ ಕೊಡಿ ಎಂದು ಮನವಿ ಮಾಡಿದ ಅವರು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದರು.
ಈ ವೇಳೆ 1ನೇ ಹೆಚ್ಚುವರಿ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಭಾನುಮತಿ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ, ವಿವಿಧ ವಿಭಾಗಗಳ ನ್ಯಾಯಾಧೀಶರಾದ ಮಂಜುನಾಥ್, ಪ್ರಕಾಶ್, ರಾಘವೇಂದ್ರ ಗುರು ಪ್ರಸಾದ್ ಕುಲಕರ್ಣಿ, ವೀರಭದ್ರಯ್ಯ, ದ್ಯಾವಪ್ಪ, ಕೃಷ್ಣ, ನಂದಿನಿ, ಮಂಜುಶ್ರೀ, ಹರೀಶ್ ಸೇರಿದಂತೆ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಉಪಾಧ್ಯಕ್ಷ ಶರತ್‌ಚಂದ್ರ, ಖಜಾಂಚಿ ದೀಪಕ್, ಸಹ ಕಾರ್ಯದರ್ಶಿ ಪ್ರಿಯದರ್ಶಿನಿ, ರಾಘವೇಂದ್ರ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.