ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ಹಣ ಶಿಕಾರಿಪುರಕ್ಕೆ ವರ್ಗಾವಣೆ: ಟಿ. ಡಿ.ರಾಜೇಗೌಡ ಆರೋಪ

| N/A | Published : Mar 10 2025, 12:15 AM IST / Updated: Mar 10 2025, 12:42 PM IST

ಶೃಂಗೇರಿ ಕ್ಷೇತ್ರದ ಅಭಿವೃದ್ಧಿ ಹಣ ಶಿಕಾರಿಪುರಕ್ಕೆ ವರ್ಗಾವಣೆ: ಟಿ. ಡಿ.ರಾಜೇಗೌಡ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಸಮ್ಮಿಶ್ರ ಸರ್ಕಾರದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ₹18 ಕೋಟಿ ಅನುದಾನ ಮೀಸಲಿಡಲಾಗಿತ್ತು.ಆ ಹಣವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಶಿಕಾರಿಪುರಕ್ಕೆ ವರ್ಗಾಯಿಸಲಾಯಿತು ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

 ನರಸಿಂಹರಾಜಪುರ : ಸಮ್ಮಿಶ್ರ ಸರ್ಕಾರದಲ್ಲಿ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷನಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗೆ ₹18 ಕೋಟಿ ಅನುದಾನ ಮೀಸಲಿಡಲಾಗಿತ್ತು.ಆ ಹಣವನ್ನು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಶಿಕಾರಿಪುರಕ್ಕೆ ವರ್ಗಾಯಿಸಲಾಯಿತು ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.ಭಾನುವಾರ ಸುಂಕದಕಟ್ಟೆ ಸಮೀಪದ ಕೋಟೆ ಮಾರಿಕಾಂಬ ದೃಷ್ಟಿಕಲ್ಲು ಮಾರಿಗದ್ದುಗೆ ವ್ಯಾಪ್ತಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯಿಂದ ಹಿಂದೆಯೇ ₹25 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಅದು ವಾಪಾಸಾಯಿತು. ಅಭಿವೃದ್ಧಿ ಕಾರ್ಯ ಮಾಡಬಾರದೆಂದು ಅನುದಾನ ಬೇರೆ ಕಡೆ ವರ್ಗಾಯಿಸಿದರು. ಗುತ್ತಿಗೆದಾರರಿಗೂ ಹೆದರಿಸಿದರು. ಆದರೆ, ಮಾರಿಕಾಂಬ ದೇವಿ ಆಶೀರ್ವಾದದಿಂದ ಪುನಃ ನಾನೇ ಗೆದ್ದು ಬಂದಿದ್ದು ಸಮುದಾಯ ಭವನವನ್ನು ಮುಂಬರುವ ಮಾರಿಕಾಂಬ ದೇವಿ ಜಾತ್ರೆಯೊಳಗೆ ಪೂರ್ಣಗೊಳಿಸಿ ಲೋಕಾರ್ಪಡೆ ಮಾಡಲಾಗುವುದು ಎಂದರು.

ಹಿಂದುತ್ವದ ಬಗ್ಗೆ ಮಾತನಾಡುವವರು 15 ವರ್ಷ ಶಾಸಕರಾಗಿದ್ದವರು ಹಿಂದೂ ದೇವಾಲಯಗಳು ಶಿಥಿಲಾವಸ್ಥೆಗೆ ತಲುಪಿ ದ್ದರೂ ಪುನರುಜ್ಜೀವನ ಗೊಳಿಸಿಲ್ಲ. ವಿಪ ಸದಸ್ಯರಾಗಿದ್ದ ಎಂ.ಶ್ರೀನಿವಾಸ್ ಶೇ. 90 ರಷ್ಟು ದೇವಸ್ಥಾನಗಳಿಗೆ ಕಾಯಕಲ್ಪ ಕಲ್ಪಿಸಿ ದರು. ಮಿನಿ ವಿಧಾನ ಸೌಧ ಪಟ್ಟಣದಲ್ಲಿ ನಿರ್ಮಿಸಬೇಕೆಂದು ಜನ ಹೋರಾಟ ಮಾಡಿದ್ದಕ್ಕೆ ಹಾಗೂ ಅದನ್ನು ಬೆಂಬಲಿಸಿದ ರಾವೂರು, ಲಿಂಗಾಪುರ ಗ್ರಾಮಗಳನ್ನು ಬಿಜೆಪಿ ಕೆಲವು ಮುಖಂಡರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಿರು ಅರಣ್ಯ ಎಂದು ಘೋಷಿಸುವ ಕೆಲಸ ಮಾಡಿ ಜನರಿಗೆ ಹಕ್ಕು ಪತ್ರ ನೀಡದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಬಗರ್ ಹುಕುಂ ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕು ಪತ್ರಕೊಡಲು ಅರಣ್ಯ ಇಲಾಖೆ ಒಪ್ಪಿಗೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಮೂಲಕ ಆದೇಶ ಹೊರಡಿಸಿ ಸಮಸ್ಯೆ ಸೃಷ್ಠಿಸಿದರು. ಕೋವಿಡ್ ಕಾಲದಲ್ಲಿ ಜನರ ಸಂಕಷ್ಟಕ್ಕೂ ಬಿಜೆಪಿ ಸ್ಪಂದಿಸಿಲ್ಲ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗೆ ಶಕ್ತಿ ತುಂಬಲು ಗ್ಯಾರಂಟಿ ಯೋಜನೆ, 2016 ರಲ್ಲಿ ರದ್ದಾಗಿದ್ದ ಬಡವರಿಗೆ ಭೂಮಿ ನೀಡುವ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನಾಚನೆ ಮಾಡಿದ್ದು ಇದರಿಂದ ಭೂರಹಿತರಿಗೆ ಭೂಮಿ ಕೊಡಲು ಅನುಕೂಲ ವಾಗಲಿದೆ ಎಂದರು.ಪಟ್ಟಣದ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ನಿವೇಶನಕ್ಕೆ 158 ಫಲಾನುಭವಿಗಳನ್ನು ಗುರುತಿಸಲಾಗಿದೆ. ಬಡಾವಣೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದ ಕೂಡಲೇ ನಿವೇಶನ ಹಂಚಿಕೆ ಮಾಡಲಾಗುವುದು. ಗ್ರಾಮೀಣ ಪ್ರದೇಶ ರಸ್ತೆಗಳ ಅಭಿವೃದ್ಧಿಗೆ ₹10 ಕೋಟಿ ಅನುದಾನ ಬಿಡುಗಡೆಯಾಗಿದ್ದು ಆಯ್ದ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಜೆಟ್ ನಲ್ಲಿ ಆನೆ,ಮಾನವ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹60 ಕೋಟಿ ನೀಡಿದ್ದಾರೆ. ಬಿಜೆಪಿಯರು ಅಲ್ಪ ಸಂಖ್ಯಾತರಿಗೆ ಬಜೆಟ್ ಎಂದು ಟೀಕಿಸುತ್ತಿದ್ದಾರೆ. ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಂರಲ್ಲ. ಜೈನರ ಅಭಿವೃದ್ಧಿ ಯನ್ನು ಬಿಜೆಪಿ ಸಹಿಸುತ್ತಿಲ್ಲ ಎಂದು ದೂರಿದರು. 

ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು. ಬಿಜೆಪಿ ಪ್ರತಿಭಟನೆ ಮಾಡಲಿ. ನಾವು ತಪ್ಪು ಮಾಡಿದ್ದರೆ ತಿದ್ದುಕೊಳ್ಳುತ್ತೇನೆ ಎಂದರು.8 ನೇ ವಾರ್ಡನ ಪಪಂ ಸದಸ್ಯ ಮುಕುಂದ ಮಾತನಾಡಿ, ಅಭಿವೃದ್ಧಿಯೇ ಮೂಲ ಮಂತ್ರ ಎಂಬ ಧ್ಯೇಯದಿಂದ ಶಾಸಕರು ಕಾರ್ಯನಿರ್ವಹಿಸುತ್ತಿದ್ದು ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ₹10 ಲಕ್ಷ ಅನುದಾನ ನೀಡಿದ್ದಾರೆ. ಈ ವಾರ್ಡ್ ವ್ಯಾಪ್ತಿಯ ಬಸ್ತಿಮಠಕ್ಕೆ ವಿವಿಧ ಇಲಾಖೆಗಳಿಂದ ₹1.80 ಕೋಟಿ ಮೊತ್ತದ ಕಾಮಗಾರಿ ಮಾಡಿಸಿದ್ದಾರೆ. 

ಕರ್ನಾಟಕ ಬ್ಯಾಂಕ್ ಸಮೀಪದಿಂದ ಸುಂಕದಕಟ್ಟೆವರೆಗೆ ₹20 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಿಸಲಾಗುವುದು ಎಂದರು.ಕೋಟೆ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಜಾತ್ರೆಯ ಸಮಯದಲ್ಲಿ ದೇವಿಯ ಮೂರ್ತಿ ಕೆತ್ತನೆ ಮಾಡಲು ಬರುವ ಬಡಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಿಸಲಾಗುತ್ತಿದೆ. ಇದಕ್ಕೆ ತಡೆಗೋಡೆ ಮತ್ತು ಇಂಟರ್ ಲಾಕ್ ಅಳವಡಿಸಲು ಅನುದಾನ ಬಿಡುಗಡೆ ಮಾಡಬೇಕು ಎಂದರು.ಪಟ್ಟಣ ಪಂಚಾಯಿತಿ ಸ್ಥಾಯಿ ಅಧ್ಯಕ್ಷ ಪ್ರಶಾಂತ್ ಎಲ್.ಶೆಟ್ಟಿ , ಜಾತ್ರಾ ಸಮಿತಿಯ ಸದಸ್ಯರಾದ ಎಚ್.ಎನ್.ರವಿಶಂಕರ್, ಉಪೇಂದ್ರ, ಸುಮಂತ್,ರಘು, ಪಪಂ ಸದಸ್ಯೆ ಜುಬೇದಾ, ಗ್ರಾಪಂ ಸದಸ್ಯ ರಮೇಶ್ ದೊಡ್ಡಮನಿ, ಸಾಜು, ಮುಖಂಡರಾದ ರಾಮು, ಅಶ್ವಲ್, ಮಂಜುನಾಥ್, ಅಶ್ವಲ್, ಈ.ಸಿ.ಜೋಯಿ, ಬೆನ್ನಿ, ವಿನಾಯಕ ಸೇವಾ ಸಮಿತಿ ಸದಸ್ಯರು ಭಾಗವಹಿಸಿದ್ದರು.