‘ನಾನು ಆತ್ಮಸಾಕ್ಷಿಯನ್ನು ನಂಬಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಪಕ್ಷಕ್ಕೆ ಮುಜುಗರ ತರಲು, ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ಇದ್ದರೆ ಮಾತ್ರ ನಾವು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮಾರ್ಮಿಕವಾಗಿ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಕನಕಪುರ

‘ನಾನು ಆತ್ಮಸಾಕ್ಷಿಯನ್ನು ನಂಬಿದ್ದು, ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ. ಪಕ್ಷಕ್ಕೆ ಮುಜುಗರ ತರಲು, ಪಕ್ಷವನ್ನು ದುರ್ಬಲಗೊಳಿಸಲು ನನಗೆ ಇಷ್ಟವಿಲ್ಲ. ಪಕ್ಷ ಹಾಗೂ ಕಾರ್ಯಕರ್ತರು ಇದ್ದರೆ ಮಾತ್ರ ನಾವು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತೊಮ್ಮೆ ಮಾರ್ಮಿಕವಾಗಿ ನುಡಿದಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆ ನಡೆಸಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಈ ವಿಚಾರ ನನಗೆ ಗೊತ್ತಿಲ್ಲ. ಇದು ನಮ್ಮ ಐದಾರು ಜನರ ನಡುವಿನ ಗುಟ್ಟಿನ ವಿಚಾರ. ಇದನ್ನು ನಾನು ಬಹಿರಂಗ ಮಾಡುವುದಿಲ್ಲ. ಸಿಎಂ ಹಿರಿಯ ನಾಯಕರು, ಅವರು ನಮ್ಮ ಪಕ್ಷದ ಆಸ್ತಿ. ಸಿದ್ದರಾಮಯ್ಯ ಅವರು ಸಿಎಂ ಆಗಿ ಏಳೂವರೆ ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಮುಂದಿನ ಬಜೆಟ್ ನ್ನು ಅವರೇ ಮಂಡಿಸುವುದಾಗಿ ಹೇಳಿದ್ದಾರೆ. ಬಹಳ ಸಂತೋಷ. ಅವರು ವಿರೋಧ ಪಕ್ಷದ ನಾಯಕರಾಗಿ ಶ್ರಮಿಸಿದ್ದಾರೆ, ಪಕ್ಷ ಕಟ್ಟಿದ್ದಾರೆ. ನಾವೆಲ್ಲರೂ ಸೇರಿ 2028 ಹಾಗೂ 2029ರ ಚುನಾವಣೆಯ ಗುರಿಯತ್ತ ಗಮನ ಹರಿಸಬೇಕು’ ಎಂದು ಹೇಳಿದರು.ನನ್ನ ಕಷ್ಟಕಾಲದಲ್ಲಿ ಜನರು ಮಾಡಿದ್ದ ಪ್ರಾರ್ಥನೆ ಮರೆಯುವುದಿಲ್ಲ:

ನೀವು ಸಿಎಂ ಆಗಬೇಕು ಎಂದು ನಿಮ್ಮ ಅಭಿಮಾನಿಗಳು, ಸಾರ್ವಜನಿಕರು ಪೂಜೆ ಮಾಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ನನಗೆ ಅಧಿಕಾರ ಸಿಗಲಿ ಎಂದು ದೇವರಿಗೆ ಈಗ ಪೂಜೆ ಮಾಡುತ್ತಿರುವುದಕ್ಕಿಂತ ನಾನು ಜೈಲಿಗೆ ಹೋದಾಗ ನನ್ನ ತಾಯಂದಿರು, ಯುವಕರು, ಹಿರಿಯರು ದೇವಾಲಯದ ಅರ್ಚಕರು ಮಾಡಿದ ಪ್ರಾರ್ಥನೆಯನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಬಿಜೆಪಿ ಆಡಳಿತದ ಅವಧಿಯಲ್ಲಿ ನಾನು ತಿಹಾರ್ ಜೈಲಿಂದ ಬಿಡುಗಡೆ ಆದಾಗ ಪೊಲೀಸರ ಬೆದರಿಕೆಗೂ ಹಿಂಜರಿಯದೇ ನನ್ನನ್ನು ಜನ ಸ್ವಾಗತಿಸಿದರು. ನಾನು ಜೈಲಲ್ಲಿ ಇದ್ದಾಗ ಕರವೇ ನಾರಾಯಣ ಗೌಡರಿಗೆ ಪ್ರತಿಭಟನೆ ನಡೆಸದಂತೆ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಬೆದರಿಕೆ ಹಾಕಿದ್ದರು. ಕೆಲವು ಸ್ವಾಮೀಜಿಗಳೂ ಬಂದರು. ಆ ವೇಳೆ, ಮಾಜಿ ಸಿಎಂ ಕುಮಾರಸ್ವಾಮಿಯ ಕೂಡ ನನ್ನ ಪರ ಹೇಳಿಕೆ ಕೊಟ್ಟರು. ಅನೇಕರು ನಮ್ಮ ಮನೆಗೆ ಬಂದು ನನ್ನ ಪತ್ನಿ ಹಾಗೂ ಮಕ್ಕಳ ಜೊತೆ ಮಾತನಾಡಿ, ಧೈರ್ಯ ತುಂಬಿದ್ದರು. ಅಂದು ಜನ ಹರಕೆ ಹೊತ್ತು ಪ್ರಾರ್ಥಿಸಿದ್ದರು. ಆಗ ಕಟ್ಟಿಕೊಂಡ ಹರಕೆ ಮುಗಿಸಲು ಇನ್ನೂ ನನಗೆ ಆಗುತ್ತಿಲ್ಲ. ಅನೇಕರು ನಾನು ಜೈಲಿಂದ ಬಿಡುಗಡೆಯಾಗುವವರೆಗೂ ಕಾಲಿಗೆ ಚಪ್ಪಲಿ ಹಾಕಿರಲಿಲ್ಲ. ನಾನು ಇಂದು ಡಿಸಿಎಂ ಆಗಿದ್ದು, ಪಕ್ಷದ ಅಧ್ಯಕ್ಷನಾಗಿದ್ದೇನೆ. ಆದರೆ, ಕಷ್ಟಕಾಲದಲ್ಲಿದ್ದಾಗ ಮಾಡಿದ ಪ್ರಾರ್ಥನೆ, ಆಗ ಅವರು ನನಗೆ ತುಂಬಿದ ಆತ್ಮಸ್ಥೈರ್ಯ ನನಗೆ ಬಹಳ ವಿಶೇಷವಾದುದು ಎಂದರು.

ಹಿಂದಿನ ವಿಧಾನಸಭಾ ಚುನಾವಣೆ ವೇಳೆ ‘ನಿಮ್ಮನ್ನು ಸಿಎಂ ಸ್ಥಾನದಲ್ಲಿ ನೋಡಬೇಕು’ ಎಂದು ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲೂ ಜನ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ನಾನೂ ಕೂಡ ಮಂಡ್ಯ ಸೇರಿ ಎಲ್ಲಾ ಕಡೆಗಳಲ್ಲಿ ನನ್ನ ಮುಖ ನೋಡಿ ಮತ ಹಾಕಿ ಎಂದು ಜನರಲ್ಲಿ ಮನವಿ ಮಾಡಿದ್ದೆ. ಜನ ನಮ್ಮ ಸಾಮೂಹಿಕ ನಾಯಕತ್ವಕ್ಕೆ ಮತ ಹಾಕಿದ್ದಾರೆ. ನನ್ನೊಬ್ಬನಿಗಾಗಿ ಮತ ಹಾಕಿದ್ದಾರೆ ಎಂದು ನಾನು ಹೇಳುವುದಿಲ್ಲ. 224 ಕ್ಷೇತ್ರಗಳಲ್ಲಿ ನಮಗಿಂತ ನಮ್ಮ ಕಾರ್ಯಕರ್ತರು ಹೆಚ್ಚು ಶ್ರಮ ಹಾಕಿದ್ದು, ಅವರ ಋಣ ನನ್ನ ಹಾಗೂ ಪಕ್ಷದ ಮೇಲಿದೆ. ಅವರಿಗೆ ದ್ರೋಹ ಬಗೆಯುವ ಕೆಲಸವನ್ನು ಎಂದೂ ಮಾಡುವುದಿಲ್ಲ ಎಂದು ಹೇಳಿದರು.

ಒಂದೇ ಕಾರಲ್ಲಿ ಖರ್ಗೆ-ಡಿಕೆ:

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿದ್ದರೂ ಅವರನ್ನು ಭೇಟಿಯಾಗದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಕಾರಿನಲ್ಲಿ ಪ್ರಯಾಣಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಶುಕ್ರವಾರ ರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸದಾಶಿವನಗರದಲ್ಲಿನ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ಅವರನ್ನು ಭೇಟಿಯಾಗಿ ಒಂದೂವರೆ ಗಂಟೆ ಚರ್ಚೆ ನಡೆಸಿದ್ದರು. ಅದಾದ ನಂತರ ಭಾನುವಾರ ಡಿ.ಕೆ.ಶಿವಕುಮಾರ್‌ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗುತ್ತಾರೆ ಎಂದು ಹೇಳಲಾಗುತ್ತಿದ್ದಾರೂ ಆ ಭೇಟಿ ನಡೆದಿರಲಿಲ್ಲ.

ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ದೆಹಲಿಗೆ ಹೊರಟ ಸಂದರ್ಭದಲ್ಲಿ ಸದಾಶಿವನಗರದ ನಿವಾಸಕ್ಕೆ ಬಂದ ಡಿ.ಕೆ.ಶಿವಕುಮಾರ್‌ ಅವರು, ಖರ್ಗೆ ಅವರೊಂದಿಗೆ ಅವರ ಕಾರಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ತೆರಳಿದರು. ಈ ವೇಳೆ ಯಾವುದೇ ನಾಯಕರು ಜತೆಗಿರಲಿಲ್ಲ.ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲೇ ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚಿನ ಕಾಲ ಚರ್ಚೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಡಿ.ಕೆ.ಶಿವಕುಮಾರ್‌ ಅವರ ಈ ಭೇಟಿ ಕಾಂಗ್ರೆಸ್‌ ಪಾಳಯದಲ್ಲಿ ಸಾಕಷ್ಟು ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.