ಠಿಕಾಣಿ ಹೂಡಿದ ಸಿಬ್ಬಂದಿ ವರ್ಗಾಯಿಸಿ

| Published : Oct 17 2023, 12:46 AM IST

ಸಾರಾಂಶ

ಜನರ ಕೆಲಸ ಮಾಡದ ಸಿಬ್ಬಂದಿ ಇರುವುದಕ್ಕಿಂತ ಇಲ್ಲದೆ ಇರುವುದೇ ಲೇಸು. ನಮ್ಮ ಜಾತಿ, ಊರಿನವನು ಎಂಬುವುದನ್ನು ಬಿಟ್ಟು ಒಳ್ಳೆ ಕೆಲಸ ಮಾಡುವರಿಗೆ ಬೆಂಬಲ ಕೊಡಬೇಕು. ಯಾವ ಕುರ್ಚಿ ಕೂಡ ಯಾರಪ್ಪನ ಆಸ್ತಿಯಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಮುಂಡಗೋಡ:

ಪಟ್ಟಣದ ಸರ್ಕಾರಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ ಸಿಬ್ಬಂದಿಗಳನ್ನು ಮೊದಲು ಕಳಿಸಿಕೊಡಬೇಕಿದೆ. ಯಾರನ್ನಾದರೂ ವರ್ಗಾವಣೆ ಮಾಡಿದರೆ ನಮ್ಮ ಊರಿನವನು, ನಮ್ಮ ಜಾತಿಯವನು ಎಂದು ವಹಿಸಿಕೊಂಡು ಬರುವುದನ್ನು ಮೊದಲು ನಿಲ್ಲಿಸಬೇಕು. ಆವಾಗ ಮಾತ್ರ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಸೋಮವಾರ ಪಟ್ಟಣ ಪಂಚಾಯಿತಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಫಾರ್ಮ್‌-3 ಸಮಸ್ಯೆಯಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಪಪಂ ಸಿಬ್ಬಂದಿಗೆ ಬಡವರ ಪರವಾಗಿ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ. ಇದ್ದಷ್ಟು ದಿನ ಎಲ್ಲ ದೋಚಿಕೊಳ್ಳುವ ಮನಸ್ಸಿದ್ದು ವ್ಯವಸ್ಥೆಯನ್ನು ಹದಗೆಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನರ ಕೆಲಸ ಮಾಡದ ಸಿಬ್ಬಂದಿ ಇರುವುದಕ್ಕಿಂತ ಇಲ್ಲದೆ ಇರುವುದೇ ಲೇಸು ಎಂದ ಅವರು, ನಮ್ಮ ಜಾತಿ, ಊರಿನವನು ಎಂಬುವುದನ್ನು ಬಿಟ್ಟು ಒಳ್ಳೆ ಕೆಲಸ ಮಾಡುವರಿಗೆ ಬೆಂಬಲ ಕೊಡಬೇಕು. ಯಾವ ಕುರ್ಚಿ ಕೂಡ ಯಾರಪ್ಪನ ಆಸ್ತಿಯಲ್ಲ. ನಾವು ಹೋದರೆ ಬೇರೆಯವನು ಬಂದು ಕೆಲಸ ಮಾಡುತ್ತಾನೆ. ಯಾವುದೇ ಕಚೇರಿಯಲ್ಲಿ ಒಬ್ಬನು ಹೋದರೆ ಬೇರೆಯವನು ಬರುತ್ತಾನೆ. ಕೆಲಸ ಮಾಡಲು ಅವನೇ ಬೇಕು, ಇವನೇ ಬೆಂಕೆಂದಿಲ್ಲ ಎಂದ ಅವರು, ತಕ್ಷಣ ಪಪಂ ಕಂದಾಯ ವಿಭಾಗದ ಸಿಬ್ಬಂದಿ ಮಂಜುನಾಥ ಮುಚ್ಚಂಡಿಯನ್ನು ಬದಲಾಯಿಸಿ ಬೇರೆಯವರನ್ನು ನೇಮಿಸುವಂತೆ ಠರಾವು ಹೊರಡಿಸಲಾಯಿತಲ್ಲದೇ. ಈ ಬಗ್ಗೆ ಆದೇಶ ಮಾಡಿ ನನಗೆ ಮಾಹಿತಿ ನೀಡುವಂತೆ ಪಪಂ ಮುಖ್ಯಾಧಿಕಾರಿ ಚಂದ್ರಶೇಖರಗೆ ಸೂಚಿಸಿದರು.