ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ಆದರ್ಶ ಶಿಕ್ಷಕ ಎನಿಸಿಕೊಳ್ಳಬೇಕೆಂದರೆ ಸಮಾಜದಲ್ಲಿರುವ ಒಳ್ಳೆಯದನ್ನು ತಾನು ತೆಗೆದುಕೊಂಡು, ಅದನ್ನು ತನ್ನ ಶಿಷ್ಯವೃಂದಕ್ಕೆ ಪಾಠ, ಪ್ರವಚನಗಳ ಮೂಲಕ ವರ್ಗಾಯಿಸಬೇಕು. ಆ ಮೂಲಕ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ಕೊಡುಗೆ ನೀಡಬೇಕು ಎಂದು ಬೆಳ್ಳಾವೆ ಶ್ರೀಕಾರದ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.ನಗರದ ಶ್ರೀಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ವಯೋನಿವೃತ್ತಿ ಹೊಂದಿದ ಬೆಳ್ಳಾವಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎನ್.ಸಿದ್ದೇಶ್ವರ ಅವರಿಗೆ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ತಮ್ಮಿಂದ ಕಲಿತ ಶಿಷ್ಯರ ಬಾಳಿಗೆ ಬಂಗಾರದಂತಹ ಮಾರ್ಗದರ್ಶನ ನೀಡಿದವರೇ ನಿಜವಾದ ಶಿಕ್ಷಕರು, ಪ್ರೊ.ಎನ್.ಸಿದ್ದೇಶ್ವರ ಅವರು ಈ ಕೆಲಸವನ್ನು ಕಾಯಾ, ವಾಚಾ, ಮನಸಾ ನಿರ್ವಂಚನೆಯಿಂದ ಮಾಡಿದ್ದಾರೆ. ಅದಕ್ಕೆಇಂದು ಅವರ ಶಿಷ್ಯ ಬಳಗ ನೀಡುತ್ತಿರುವ ಗುರುವಂದನೆಯೇ ಸಾಕ್ಷಿ ಎಂದರು.ನಿವೃತ್ತ ಪ್ರಾಂಶುಪಾಲ ಡಾ.ಟಿ.ಆರ್.ಲೀಲಾವತಿ ಮಾತನಾಡಿ, ಪ್ರೊ.ಎನ್.ಸಿದ್ದೇಶ್ವರ ಅವರು ಅಕಾಡೆಮಿಕ್ ಆಗಿ ಯಾವುದೇ ಕೆಲಸವನ್ನು ಅವರಿಗೆ ವಹಿಸಿದರೂ ಅದನ್ನುಅತ್ಯಂತ ಸಮರ್ಥವಾಗಿ ನಿರ್ವಹಿಸುವ ಗುಣವನ್ನು ಹೊಂದಿದ್ದವರು. ತನ್ನ ವೃತ್ತಿಜೀವನದುದ್ದಕ್ಕೂ ಯಾರಿಗೂ ತೊಂದರೆ ಕೊಡದೆ, ತನ್ನ ಕೆಲಸವನ್ನು ನಿರ್ವಹಿಸಿದ ಆದರ್ಶ ಶಿಕ್ಷಕ. ಅವರ ನಿವೃತ್ತಿಜೀವನ ಸುಖಃಕರವಾಗಿರಲಿ ಎಂದು ಶುಭ ಹಾರೈಸಿದರು.ಪಾವಗಡ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಿವಾನಂದಯ್ಯ ಮಾತನಾಡಿ, ಹಿರಿಯರು, ಕಿರಿಯರೆನ್ನದೆ ಎಲ್ಲರನ್ನು ಗೌರವದಿಂದ ಕಾಣುತ್ತಿದ್ದ ಪ್ರೊ.ಎನ್.ಸಿದ್ದೇಶ್ವರ ಅವರು,ತಾವು ಕೆಲಸ ಮಾಡಿದ ಎಲ್ಲಾ ಜಾಗಗಳಲ್ಲಿಯೂ ಒಳ್ಳೆಯ ಹೆಸರು ಪಡೆದಿದ್ದಾರೆ. ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ ಎಂದರು.ಸಿದ್ದಗಂಗಾ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ದಕ್ಷಿಣಮೂರ್ತಿ ಮಾತನಾಡಿ, ಓರ್ವ ಒಳ್ಳೆಯ ಶಿಕ್ಷಕ ಎನಿಸಿಕೊಳ್ಳುವುದು ಇಂದಿನ ದಿನಗಳಲ್ಲಿ ಕಷ್ಟ.ಅದು ನಮ್ಮಿಂದ ಕಲಿತ ವಿದ್ಯಾರ್ಥಿಗಳ ಬೆಳವಣಿಗೆಯ ಮೇಲೆ ನಿಂತಿರುತ್ತದೆ. ಪ್ರೊ,ಎನ್.ಸಿದ್ದೇಶ್ವರ ಒಳ್ಳೆಯ ಶಿಕ್ಷಕ ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ ಎಂದರು.ಕಾದಂಬರಿಕಾರ, ಕನ್ನಡ ಪ್ರಾಧ್ಯಾಪಕ ಡಾ.ಓ.ನಾಗರಾಜು ಮಾತನಾಡಿ, ಶಿಕ್ಷಣವೆಂಬುದು ವ್ಯಾಪಾರವಾಗಿ, ನೈತಿಕತೆಯನ್ನು ಕಳೆದುಕೊಳ್ಳುತ್ತಿರುವ ಇಂದಿನ ಕಾಲದಲ್ಲಿ, ನಮ್ಮ ವೃತ್ತಿಜೀವನದುದ್ದಕ್ಕೂ ಮಕ್ಕಳಿಗೆ ಉತ್ತಮ ನೈತಿಕ ಮೌಲ್ಯಗಳನ್ನು ಬೋಧಿಸಿಕೊಂಡು ಬಂದಿದ್ದ ಪ್ರೊ.ಎನ್.ಸಿದ್ದೇಶ್ವರ ಓರ್ವಆದರ್ಶ ಶಿಕ್ಷಕರು. ಬೋಧಕರಿಗೆ ಕೊರಳಿನ ಜೊತೆಗೆ, ಎಲ್ಲರನ್ನು ಒಳಗೊಳ್ಳುವ ತಾಯಿ ಕರುಳು ಇದ್ದಾಗ ಮಾತ್ರ ಉತ್ತಮ ಶಿಕ್ಷಕನಾಗಬಲ್ಲ ಎಂದರು.ಪ್ರಾಸ್ತಾವಿಕ ನುಡಿಗಳನ್ನಾಡಿದ ತುಮಕೂರು ವಿವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಜಿ.ತಿಪ್ಪೇಸ್ವಾಮಿ, 1992-93ರಲ್ಲಿ ನಾನು ಪ್ರೊ,ಎನ್.ಸಿದ್ದೇಶ್ವರ ಅವರ ಶಿಷ್ಯ.ಅವರಿಂದ ಕಲಿತ ಅನೇಕರು ಇಂದು ನನ್ನಂತೆಯೇ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಸದಾ ವಿದ್ಯಾರ್ಥಿ ಹಿತ ಬಯಸುವ,ದುರ್ಗುಣಗಳೇ ಇಲ್ಲದ ಓರ್ವ ಆದರ್ಶ ಶಿಕ್ಷಕರು. ಹತ್ತಾರು ವರ್ಷಗಳ ಕಾಲ ಪಾಠ ಮಾಡಿ ವಯೋ ನಿವೃತ್ತಿ ಹೊಂದುವ ಶಿಕ್ಷಕರನ್ನು ಗೌರವಿಸಿ, ಬಿಳ್ಕೋಡುವ ಪರಿಪಾಠ ಬೆಳೆಯಬೇಕೆಂದರು.ಗುರುವಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಎನ್.ಸಿದ್ದೇಶ್ವರ,ನಾನು ವೃತ್ತಿಯಲ್ಲಿ ಆರ್ಥಶಾಸ್ತ್ರ ಉಪನ್ಯಾಸಕನಾದರೂ, ಪ್ರವೃತ್ತಿಯಲ್ಲಿ ಕನ್ನಡ ಸಾಹಿತ್ಯಓದುಗ. ನಾನು ಐದನೇ ತರಗತಿಯಲ್ಲಿದ್ದಾಗ ವೃತ್ತ ಪತ್ರಿಕೆಗಳನ್ನು ಓದಲು ಆರಂಭಿಸಿದ್ದು, ಇಂದಿಗೂ ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ವೃತ್ತಪತ್ರಿಕೆಗಳು ಅದೆಷ್ಟೋ ಸಂದರ್ಭಗಳಲ್ಲಿ ಪಾಠೋಪಕರಣವಾಗಿ ಬಳಕೆಯಾಗಿವೆ. ಓರ್ವ ಶಿಕ್ಷಕ ಪ್ರತಿ ದಿನ ಬದಲಾವಣೆಗೆ ತಕ್ಕಂತೆ ನನ್ನನ್ನು ಅಪ್‌ಡೆಟ್ ಮಾಡಿಕೊಳ್ಳದಿದ್ದರೆ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ನನ್ನ ವೃತ್ತಿ ಜೀವನದಲ್ಲಿ ಯಾರಿಗೂ ನಂಬಿಕೆ ದ್ರೋಹ ಮಾಡಿಲ್ಲ. ಯಾರೊಂದಿಗೂ ಜಗಳವಾಡಿಲ್ಲ.ಅನುಚಿತವಾಗಿ ವರ್ತಿಸಿಲ್ಲ. ನಾನು ಕಲಿತ ಸಿದ್ದಗಂಗಾ ಶಿಕ್ಷಣ ಸಂಸ್ಥೆ ನನಗೆ ನೀಡಿದ ಸಂಸ್ಕಾರದಿಂದ ಇದು ಸಾಧ್ಯವಾಯಿತು ಎಂದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಪ್ರಸನ್ನ,ಡಾ.ಆರ್.ಪುಟ್ಟರಾಜು,ಡಾ.ಬಸವರಾಜು ಕೆ.ಸಿ ಸೇರಿದಂತೆ ಹಲವರು ಪ್ರೊ.ಎನ್.ಸಿದ್ದೇಶ್ವರ ಅವರ ಕುರಿತು ಮಾತುಗಳನ್ನಾಡಿದರು. ವೇದಿಕೆಯಲ್ಲಿ ಡಾ.ಬಿ.ಆರ್.ರೇಣುಕಾ ಪ್ರಸಾದ್,ಡಾ.ಎಂ.ಎಸ್.ನಾಗರಾಜು, ಮೈತ್ರಿ ಬಳಗದ ಓ.ಕೆ.ವೀಣಾ, ಮೇ.ನಾ.ತರಂಗಣಿಮತ್ತಿತರರು ಉಪಸ್ಥಿತರಿದ್ದರು.