ತಿಂಗಳಾದರೂ ಟ್ರಾನ್ಸ್ ಫಾರ್ಮರ್ ಸರಿಪಡಿಸಿಲ್ಲ: ಅಧಿಕಾರಿಗಳ ಮೇಲೆ ಗರಂ ಆದ ಸಚಿವ ಜಾರ್ಜ್

| Published : Feb 07 2024, 01:49 AM IST

ತಿಂಗಳಾದರೂ ಟ್ರಾನ್ಸ್ ಫಾರ್ಮರ್ ಸರಿಪಡಿಸಿಲ್ಲ: ಅಧಿಕಾರಿಗಳ ಮೇಲೆ ಗರಂ ಆದ ಸಚಿವ ಜಾರ್ಜ್
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಕಾಂನ ಪ್ರತಿ ವಿಭಾಗದಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್‌ಗಳಿದ್ದು, ಅಲ್ಲಿ ಸಾಕಷ್ಟು ಟ್ರಾನ್ಸ್ ಫಾರ್ಮರ್‌ಗಳ ಸಂಗ್ರಹ ಇದೆ. ಗ್ರಾಮೀಣ ಭಾಗದಿಂದ ದೂರು ಬಂದ 72 ಗಂಟೆಗಳಲ್ಲಿ, ನಗರ ಪ್ರದೇಶದಲ್ಲಿ 24 ಗಂಟೆಗಳಲ್ಲಿ ಹಾಳಾದ ಟ್ರಾನ್ಸ್ ಫಾರ್ಮರ್ ಗಳನ್ನು ಬದಲಾಯಿಸಸು ಆದೇಶಿಸಿದೆ, ಇದನ್ನು ಯಾಕೆ ಪಾಲಿಸಿಲ್ಲ ಎಂದು ಅಧಿಕಾರಿಗಳನ್ನು ಕೆ.ಜೆ. ಜಾರ್ಜ್‌ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಬ್ರಹ್ಮಾವರದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್‌ಗಳು ಹಾಳಾಗಿ ತಿಂಗಳಾದರೂ ದುರಸ್ತಿ ಮಾಡಿಲ್ಲ ಎಂಬ ಕುಂದಾಪುರ ಶಾಸಕರ ದೂರಿನಿಂದ ಅಸಮಾಧಾನಗೊಂಡ ಇಂಧನ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಟಿಎಲ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಅವರು ರಜತಾದ್ರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಮೆಸ್ಕಾಂ ಹಾಗೂ ಕೆ.ಪಿ.ಸಿ.ಟಿ.ಎಲ್‌ನ ಪ್ರಗತಿ ಪರೀಶಿಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಸ್ಕಾಂನ ಪ್ರತಿ ವಿಭಾಗದಲ್ಲಿ ಟ್ರಾನ್ಸ್ ಫಾರ್ಮರ್ ಬ್ಯಾಂಕ್‌ಗಳಿದ್ದು, ಅಲ್ಲಿ ಸಾಕಷ್ಟು ಟ್ರಾನ್ಸ್ ಫಾರ್ಮರ್‌ಗಳ ಸಂಗ್ರಹ ಇದೆ. ಗ್ರಾಮೀಣ ಭಾಗದಿಂದ ದೂರು ಬಂದ 72 ಗಂಟೆಗಳಲ್ಲಿ, ನಗರ ಪ್ರದೇಶದಲ್ಲಿ 24 ಗಂಟೆಗಳಲ್ಲಿ ಹಾಳಾದ ಟ್ರಾನ್ಸ್ ಫಾರ್ಮರ್ ಗಳನ್ನು ಬದಲಾಯಿಸಸು ಆದೇಶಿಸಿದೆ, ಇದನ್ನು ಯಾಕೆ ಪಾಲಿಸಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಅಧಿಕಾರಿಗಳು ಹೊಸ ಟ್ರಾನ್ಸ್ ಫಾರ್ಮರ್‌ಗಳನ್ನು ಅಳವಡಿಸಿದರೆ ಅವೂ ಹಾಳಾಗುವ ಸಾಧ್ಯತೆ ಇರುವುದರಿಂದ, ಹೊಸ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸದೇ, ಹಾಳಾದ ಟ್ರಾನ್ಸ್ ಫಾರ್ಮರ್‌ಗಳನ್ನು ದುರಸ್ತಿಗೊಳಿಸುತಿದ್ದೇವೆ. ಅದಕ್ಕೆ ಸಮಯ ತಗಲುತ್ತಿದೆ ಎಂಬ ಸಬೂಬು ಹೇಳಿದಾಗ ಸಚಿವರು ಇನ್ನಷ್ಟು ಅಸಮಾಧಾನಗೊಂಡರು. ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಈ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮೆಸ್ಕಾಂ ಆಡಳಿತ ನಿರ್ದೇಶಕರಿಗೆ ಸೂಚನೆ ನೀಡಿದರು.

* ಹೀಟರ್ ಕಡ್ಡಾಯಗೊಳಿಸಿ

ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಸಬ್ ಸ್ಟೇಷನ್‌ಗಳಿಗೆ ವಾರ್ಷಿಕ ನಿರ್ವಹಣೆಗೆ 6 ಕೋಟಿ ಅನುದಾನ ಬಿಡುಗಡೆ ಮಾಡಬೇಕು, ಹೊಸದಾಗಿ ಮನೆ ನಿರ್ಮಾಣ ಮಾಡಿದಾಗ ಕಡ್ಡಾಯವಾಗಿ ಸೋಲಾರ್ ಹೀಟರ್‌ಗಳನ್ನು ಅಳವಡಿಸಲು ಸೂಚಿಸಬೇಕು ಎಂದು ಸಚಿವರ ಗಮನಕ್ಕೆ ತಂದರು.

* ಲೋವೋಲ್ಟೆಜ್ ಸರಿಪಡಿಸಿ

ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಕುಂದಾಪುರ ತಾಲೂಕಿನ ಹಾಲಾಡಿ ಭಾಗದಲ್ಲಿ ಲೋ ವೋಲ್ಟೇಜ್ ಸಮಸ್ಯೆ ಇದೆ. ಇದನ್ನು ಸರಿಪಡಿಸಬೇಕು ಹಾಗೂ ಹೊಸದಾಗಿ ಸಬ್ ಸ್ಟೇಷನ್ ಗಳನ್ನು ತೆರೆಯಬೇಕೆಂದು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಕೆ.ಪಿ.ಟಿ.ಸಿಎಲ್ ವ್ಯಪಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪದ್ಮಾವತಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.