ಸಾರಾಂಶ
ಲಕ್ಕವಳ್ಳಿಯಲ್ಲಿ 1890 ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆಒಬ್ಬ ವ್ಯಕ್ತಿಯನ್ನು ಪರಿವರ್ತನೆ ಮಾಡಿ ಸಂಸ್ಕಾರ ಕೊಡುವುದು ಕಾರ್ಯಶ್ರೇಷ್ಠ ಹಾಗೂ ಪುಣ್ಯದ ಕಾರ್ಯ ಎಂದು ಹಣ್ಣೆ ಶ್ರೀ ಶೈಲ ಶಾಖಾ ಮಠ ಶ್ರೀ ಷ.ಬ್ರ.ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿ ಹೇಳಿದ್ದಾರೆ.ಲಕ್ಕವಳ್ಳಿ ಶ್ರೀ ಮಹಾಗಣಪತಿ ಸಮುದಾಯ ಭವನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ತರೀಕೆರೆ , ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ ವೇದಿಕೆ ಟ್ರಸ್ಟ್ , ಚಿಕ್ಕಮಗಳೂರು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಲಕ್ಕವಳ್ಳಿ ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ 1890 ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಸಮಾಜದಲ್ಲಿರುವ ಪ್ರತಿಯೊಬ್ಬರಿಗೂ ಸಂಸ್ಕಾರ ಕೊಡುವ ಕಾರ್ಯ ನಡೆಯಬೇಕು. ಇಂತಹ ಶಿಬಿರಗಳು ಸಮಾಜಕ್ಕೆ ಮಾದರಿ. ಆಕಸ್ಮಿಕವಾಗಿ ಕಲಿತ ಕುಡಿತದ ಚಟದಿಂದ ನಿಮ್ಮ ಆರೋಗ್ಯ ಹಾಳಾಗುವ ಜೊತೆಗೆ ನಿಮ್ಮ ಕುಟುಂಬ ಸಂಕಷ್ಟಕ್ಕೆ ಒಳಗಾಗುತ್ತದೆ. ಮದ್ಯವರ್ಜನ ಶಿಬಿರದಲ್ಲಿ 53 ಮಂದಿ ಕುಡಿತ ಬಿಡಿಸಲು ಸಾವಿರಾರು ಮಂದಿ ಕೆಲಸ ಮಾಡಿದ್ದಾರೆ. ಸಮಾಜ ದಲ್ಲಿ ಕುಡುಕರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ. ಇಂದು ನೀವು ನವಜೀವನದ ಹಾದಿಯಲ್ಲಿ ಕಾಲಿಟ್ಟಿದ್ದೀರಿ, ಈ ಸಮಾಜಕ್ಕೆ ಸತ್ಪುರುಷರಾಗಿ ಬದುಕಿ ಇನ್ನೊಬ್ಬರಿಗೆ ಮಾದರಿಯಾಗಿ ಎಂದು ಹೇಳಿದರು.ವ್ಯಸನ ಮುಕ್ತರಾಗಿ ಪುನರ್ಜನ್ಮ ಪಡೆದ ನಿಮ್ಮ ಜೀವನ ಹಸನಾಗಲಿ. ಸಮಾಜದಲ್ಲಿ ಪ್ರೀತಿ, ವಿಶ್ವಾಸದಿಂದ ಬದುಕಿ ತೋರಿಸಿ, ಇಂದು ಸರಕಾರಗಳು ನಡೆಸಲು ಅಸಾಧ್ಯವಾದ ಬಹುದೊಡ್ಡ ಕಾರ್ಯಕ್ರಮ ಯಶಸ್ವಿಯಾಗಿ ಇಲ್ಲಿ ನಡೆದಿದೆ. ಅಂಧ ಕಾರ ದಲ್ಲಿದ್ದ ಬಾಳಿಗೆ ಹೊಸ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸಿದ ಈ ಮದ್ಯವರ್ಜನ ಶಿಬಿರ ಸಮಾಜಕ್ಕೆ ಆದರ್ಶಪ್ರಾಯ ಎಂದರು. ಕುಡಿತದಿಂದ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಈ ಕುಡಿತದಿಂದ ಮುಕ್ತರಾಗಿ ಸುಖ ಜೀವನ ನಡೆಸಿ. ಮಾನವನಿಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಎಂದ ಅವರು ಗ್ರಾಮಾಭಿವೃದ್ಧಿ ಯೋಜನೆ ಸ್ವ ಸಹಾಯ ಸಂಘಗಳ ಸಂಘಟನೆ ಆರ್ಥಿಕ ಶಿಸ್ತು, ಉಳಿತಾಯ ಪ್ರಗತಿ ನಿಧಿ ಕಾರ್ಯಕ್ರಮ ರಾಜ್ಯಕ್ಕೆ ಮಾದರಿ ಎಂದು ಹೇಳಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ ಮಾತನಾಡಿ ಇಂದು ನಿಮಗೆಲ್ಲರಿಗೂ ಸಂತೋಷ ವಾದ ದಿನ. ಮನ ಪರಿವರ್ತನೆಗೊಂಡು ವ್ಯಸನ ಮುಕ್ತ ಹಾದಿಯ ನವ ಜೀವನಕ್ಕೆ ಕಾಲಿಟ್ಟಿದ್ದೀರಿ. ದೇಶದಾದ್ಯಂತ ಮನಶಾಂತಿ ನೀಡುವ ಅದೆಷ್ಟೋ ಧಾರ್ಮಿಕ ಕೇಂದ್ರಗಳಿವೆ. ಆದರೂ ಅದೆಷ್ಟೋ ಜನ ಮದ್ಯದ ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ಶಾಲೆಯಲ್ಲಿ ಸಿಗುವ ಶಿಕ್ಷಣದಲ್ಲಿ ನಾವು ಉತ್ತೀರ್ಣರಾದರೆ ಸಾಲದು ಜೀವನದ ಪರೀಕ್ಷೆಯಲ್ಲಿ ನಾವು ಉತ್ತೀರ್ಣ ರಾಗಿ ಉತ್ತಮ ಜೀವನ ನಡೆಸಬೇಕು. ಈ ನಿಮ್ಮ ನವಜೀವನ ನಾಳೆ ಇನ್ನೊಬ್ಬರಿಗೆ ಮಾದರಿಯಾಗಬೇಕು. ರಾಗ ದ್ವೇಷಗಳಿಲ್ಲದೆ ನೀವೆಲ್ಲರೂ ಪ್ರೀತಿಯಿಂದ ಸಮಾಜಕ್ಕೆ ಉತ್ತಮವಾಗಿ ಬದುಕಿ ತೋರಿಸಿ ಎಂದು ತಿಳಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ. ಸಿ. ಚಂದ್ರಪ್ಪ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುವ ಮದ್ಯವರ್ಜನ ಶಿಬಿರದಿಂದ ಜಿಲ್ಲೆಯಲ್ಲಿ ಅನೇಕರು ಕುಡಿತ ಬಿಟ್ಟು ನೆಮ್ಮದಿ ಬದುಕು ಸಾಗಿಸುತ್ತಿದ್ದಾರೆ. ಇಂದಿನಿಂದ ನೀವೆಲ್ಲರೂ ಸುಖ ಸಂತೋಷದಿಂದ ಸಮೃದ್ಧಿ ಜೀವನ ನಡೆಸಬೇಕು ಎಂದು ತಿಳಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಲ್ಲಪ್ಪ ಮತ್ತು ಅಸ್ಲಾಂ ಖಾನ್ ಶುಭ ಹಾರೈಸಿದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಲ್.ಎನ್. ಪರಮೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರೋಪ ಸಮಾರಂಭದ ಕುಟುಂಬ ದಿನವನ್ನು ಚಿತ್ರದುರ್ಗ ಜನಜಾಗೃತಿ ವಿಭಾಗದ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ನಾಗರಾಜ್ ಕುಲಾಲ್ ನಡೆಸಿಕೊಟ್ಟರು.ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷ ಟಿ. ಎಸ್. ಪ್ರಕಾಶನಂದ, ಲಕ್ಕವಳ್ಳಿ ಗ್ರಾಪಂ ಸದಸ್ಯೆ ಭವಾನಿ, ಶ್ವೇತಾ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಟಿ. ಆರ್. ಶ್ರೀಧರ್, ಮೂಡಲಗಿರಿಯಪ್ಪ,ಕೆ. ಎಸ್. ರಮೇಶ್ ಶಿಬಿರದ ಆರೋಗ್ಯ ಸಹಾಯಕ ವೆಂಕಟೇಶ್, ವಲಯದ ಮೇಲ್ವಿಚಾರಕ ಸುರೇಶ್, ಯೋಜನಾಧಿಕಾರಿ ಕುಸುಮಾಧರ್ .ಕೆ, ಕೃಷಿ ಮೇಲ್ವಿಚಾರಕ ಸಂತೋಷ್, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು, ಶಿಬಿರಾರ್ಥಿಗಳು,ಗ್ರಾಮಸ್ಥರು ಭಾಗವಹಿಸಿದ್ದರು.
7ಕೆಟಿಆರ್.ಕೆ.1ಃತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ನಡೆದ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಹಣ್ಣೆ ಶ್ರೀ ಶೈಲಶಾಖಾ ಮಠ ಶ್ರೀ ಷ.ಬ್ರ.ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿ ಆಶೀರ್ವಚನ ನೀಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಪ್ರಶಾಂತ್ ಚಿಪ್ರಗುತ್ತಿ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಲ್. ಎನ್. ಪರಮೇಶ್, ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ. ಸಿ. ಚಂದ್ರಪ್ಪ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಶ್ರೀ ಮಲ್ಲಪ್ಪ ಮತ್ತು ಅಸ್ಲಾಂ ಖಾನ್ ಮತ್ತಿತರರು ಇದ್ದರು.