ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ- ಸಂಸ್ಥೆಗಳು ಹಾಗೂ ಸ್ಥಳೀಯ ನಿವಾಸಿಗಳು,

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ ಸ್ವಾತಂತ್ರ್ಯೋತ್ಸವ ಸ್ವಚ್ಛತಾ ಅಭಿಯಾನ–2026: 80 ತ್ಯಾಜ್ಯಮುಕ್ತ ತಾಣಗಳು ಕಾರ್ಯಕ್ರಮದ ಅಂಗವಾಗಿ ಗುರುವಾರ ನಗರದ ವಿವಿಧ ವಲಯಗಳಲ್ಲಿನ 8 ತ್ಯಾಜ್ಯ ಸುರಿಯುವ ಸ್ಥಳಗಳನ್ನು (ಜಿವಿಪಿ) ಸ್ವಚ್ಛಗೊಳಿಸಿ ಸುಂದರ ತಾಣಗಳನ್ನಾಗಿ ಪರಿವರ್ತಿಸಲಾಯಿತು.ವಲಯ–1ರ ಸಾಂದೀಪನಿ ಪ್ರದೇಶ, ವಲಯ–2ರ ಜೆ.ಪಿ. ನಗರದ 18ನೇ ಅಡ್ಡರಸ್ತೆ, ವಲಯ–6ರ ಸಯ್ಯಾಜಿ ಮಸೀದಿ ಸಮೀಪ ಹಾಗೂ ನಜರ್‌ ಬಾದ್ ಮುಖ್ಯರಸ್ತೆ, ವಲಯ–7ರ ನಾಡನಹಳ್ಳಿಯ ಗಣಪತಿ ದೇವಸ್ಥಾನದ ಸಮೀಪ, ವಲಯ–9ರ ಸುಮನಾ ಶಾಲೆಯ ಎದುರು ಹಾಗೂ ಕಲ್ಯಾಣಗಿರಿಯ ಆರ್‌ ಜಿಎ ಶಾಲೆಯ ಸಮೀಪ ಮತ್ತು ವಲಯ–8ರ ರಾಜೀವ್‌ ನಗರ 2ನೇ ಹಂತದ ಈಡನ್ ಗಾರ್ಡನ್ ಪ್ರದೇಶದಲ್ಲಿರುವ ತ್ಯಾಜ್ಯ ಸುರಿಯುವ ಸ್ಥಳಗಳನ್ನು ಪರಿವರ್ತಿಸಲಾಯಿತು.ಈ ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ- ಸಂಸ್ಥೆಗಳು ಹಾಗೂ ಸ್ಥಳೀಯ ನಿವಾಸಿಗಳು ಸೇರಿದಂತೆ ಒಟ್ಟು 568 ಜನರು ಭಾಗವಹಿಸಿದ್ದು, 39 ಮಾನವ ಗಂಟೆಗಳ ಕಾರ್ಯಾಚರಣೆಯಲ್ಲಿ 173.66 ಮೆಟ್ರಿಕ್ ಟನ್ ತ್ಯಾಜ್ಯವನ್ನು ತೆರವುಗೊಳಿಸಲಾಯಿತು.ಸ್ವಚ್ಛಗೊಳಿಸಿದ ಸ್ಥಳಗಳಲ್ಲಿ ಬಣ್ಣ ಬಳಿಯುವುದು, ಸೌಂದರ್ಯೀಕರಣ, ಗಿಡಗಳನ್ನು ನೆಡುವುದು ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳನ್ನು ಕೈಗೊಳ್ಳಲಾಯಿತು.ಈ ಅಭಿಯಾನದಡಿ ಇದುವರೆಗೆ ಒಟ್ಟು 40 ತ್ಯಾಜ್ಯ ಸುರಿಯುವ ಸ್ಥಳಗಳನ್ನು ಪರಿವರ್ತಿಸಲಾಗಿದ್ದು, ಉಳಿದ 40 ಸ್ಥಳಗಳನ್ನು ನಿಗದಿತ ಅವಧಿಯೊಳಗೆ ಪರಿವರ್ತಿಸುವ ಗುರಿ ಹೊಂದಲಾಗಿದೆ. ಪರಿವರ್ತಿತ ಸ್ಥಳಗಳಲ್ಲಿ ಮತ್ತೆ ತ್ಯಾಜ್ಯ ಸುರಿಯದಂತೆ 30 ದಿನಗಳ ಕಾಲ ನಿರಂತರ ಮೇಲ್ವಿಚಾರಣೆ ನಡೆಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತ್ಯಾಜ್ಯ ಸುರಿಸುವವರ ವಿರುದ್ಧ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಎಚ್ಚರಿಸಿದೆ.ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ, ಸ್ವಚ್ಛತಾ ರಾಯಭಾರಿ ಸೂರಜ್, ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.----ಕೋಟ್...ಪರಿವರ್ತಿಸಲಾದ ಸ್ಥಳಗಳಲ್ಲಿ ಪುನಃ ತ್ಯಾಜ್ಯ ಸುರಿಯದಂತೆ ನಿರಂತರ ನಿಗಾ ವಹಿಸಬೇಕು. ಸ್ಥಳೀಯ ನಿವಾಸಿಗಳು ಹಾಗೂ ಸಂಘ- ಸಂಸ್ಥೆಗಳು ಈ ತಾಣಗಳ ಸ್ವಚ್ಛತೆ ಮತ್ತು ಸೌಂದರ್ಯವನ್ನು ಸುಸ್ಥಿರವಾಗಿ ಕಾಪಾಡಲು ಪಾಲಿಕೆಯೊಂದಿಗೆ ಕೈಜೋಡಿಸಬೇಕು.- ಎಂ.ಕೆ. ಸವಿತಾ, ಆಯುಕ್ತರು, ಮೈಸೂರ ಮಹಾನಗರ ಪಾಲಿಕೆ