ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಆಟದ ಮೈದಾನ ಸೇರಿದಂತೆ ಗ್ಯಾಲರಿ ನಿರ್ಮಾಣ ಮತ್ತು ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಂತರ್ ಗೌಡ ತಿಳಿಸಿದ್ದಾರೆ.
ಕುಶಾಲನಗರ: ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಆಟದ ಮೈದಾನ ಸೇರಿದಂತೆ ಗ್ಯಾಲರಿ ನಿರ್ಮಾಣ ಮತ್ತು ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಮಂತರ್ ಗೌಡ ತಿಳಿಸಿದ್ದಾರೆ.
ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ನಾಲ್ಕು ಕೋಟಿ ರು. ಅನುದಾನದಲ್ಲಿ ನಿರ್ಮಾಣವಾದ ನೂತನ ಹೆಚ್ಚುವರಿ ಕಟ್ಟಡ ಹಾಗೂ ಕಾಲೇಜ್ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದ ಮೂಲಕ ಕುಟುಂಬದ ಜೀವನ ಬದಲಾಯಿಸಲು ಸಾಧ್ಯ ಎಂದ ಶಾಸಕರು ಕುಶಾಲನಗರ ಕೈಗಾರಿಕಾ ಬಡಾವಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ನಂತರ ಸ್ವಯಂ ಉದ್ಯಮಗಳನ್ನು ಆರಂಭಿಸಲು ಚಿಂತನೆ ಹರಿಸಬೇಕು ಎಂದರು.ಜಿಲ್ಲಾ ಮಟ್ಟದ ಕ್ಯಾಂಪಸ್ ರಿಕ್ರೂಟ್ಮೆಂಟ್ ಶಿಬಿರಕ್ಕೆ ಸಲಹೆ ನೀಡಿದ ಶಾಸಕರು ವಿದ್ಯಾರ್ಥಿಗಳು ಅವಕಾಶದ ಸದುಪಯೋಗ ಪಡೆಯಬೇಕು ಆರಂಭದಲ್ಲಿ ಸಂಬಳಕ್ಕಿಂತ ಅನುಭವವನ್ನು ಪಡೆಯುವ ಕೆಲಸವಾಗಬೇಕಾಗಿದೆ ಎಂದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್, ಪ್ರಜಾ ಸೌಧ ಕಾಮಗಾರಿ ಅಂದಾಜು ಎಂಟು ಕೋಟಿ ರು. ವೆಚ್ಚದಲ್ಲಿ ನಡೆಯುತ್ತಿದ್ದು ಅತಿ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ನೀರಾವರಿ ಇಲಾಖೆಯಲ್ಲಿ ಸುಮಾರು 200 ಕೋಟಿಗೂ ಅಧಿಕ ಅನುದಾನದಲ್ಲಿ ಯೋಜನಾ ಕಾಮಗಾರಿಗಳು ಚಾಲನೆಯಲ್ಲಿವೆ ಎಂದು ತಿಳಿಸಿದರು. ಕುಶಾಲನಗರ ಹಾರಂಗಿ ರಸ್ತೆಯಲ್ಲಿ 100 ಹಾಸಿಗೆಗಳ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಈಗಾಗಲೇ 42 ಕೋಟಿ ರು. ಗಳನ್ನು ಮೀಸಲಿರಿಸಲಾಗಿದೆ ಎಂದು ವಿವರ ನೀಡಿದ ಶಶಿಧರ್ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕದ ಅಭಿವೃದ್ಧಿ ಕಾಮಗಾರಿಗಳಿಗೆ ಸುಮಾರು 42 ಕೋಟಿ ರು.ಗಳ ಅನುದಾನ ಕಲ್ಪಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಕೆ ಪಿ ಚಂದ್ರಕಲಾ, ಕಳೆದ 25 ವರ್ಷಗಳ ಕಾಲ ಕ್ಷೇತ್ರದಲ್ಲಿ ಕಾಣದ ಅಭಿವೃದ್ಧಿ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದರು.ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಸತೀಶ್ ಕಾಳೇಗೌಡ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಡಾ. ಪರಶಿವಮೂರ್ತಿ, ಡಾ ಸತೀಶ್, ಡಾ ಸೀನಪ್ಪ, ಪಾಲಿಟೆಕ್ನಿಕ್ ನಿವೃತ್ತ ಪ್ರಾಂಶುಪಾಲ ಹೆಚ್ ವಿ ಶಿವಪ್ಪ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಜೋಸೆಫ್ ವಿಕ್ಟರ್ ಸೋನ್ಸ್ ಪ್ರಮುಖರಾದ ನಟೇಶ್ ಗೌಡ, ಸಜಿ, ದಿನೇಶ್ ಬಿ ಎಸ್, ಚಂದ್ರಶೇಖರ್ ದಾಮೋದರ್ ಮತ್ತಿತರರು ಇದ್ದರು. ಪ್ರಾಧ್ಯಾಪಕ ಸುಷ್ಮಾ ಅವರು ಪ್ರಾರ್ಥಿಸಿದರು. ಪ್ರಾಧ್ಯಾಪಕ ಜಯಣ್ಣ ನಿರೂಪಿಸಿದರು.