ಪ್ರಾದೇಶಿಕ ತಿಳುವಳಿಕೆಯನ್ನು ಜಾಗತಿಕಗೊಳಿಸುವ ಶಕ್ತಿ ಅನುವಾದಕ್ಕಿದೆ

| Published : Oct 16 2025, 02:00 AM IST

ಸಾರಾಂಶ

ಪ್ರಾದೇಶಿಕ ತಿಳುವಳಿಕೆಯನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯಗೊಳಿಸುವ ಶಕ್ತಿ ಅನುವಾದಕ್ಕಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದರು.

ಚಿತ್ರದುರ್ಗ: ಪ್ರಾದೇಶಿಕ ತಿಳುವಳಿಕೆಯನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯಗೊಳಿಸುವ ಶಕ್ತಿ ಅನುವಾದಕ್ಕಿದೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಹೇಳಿದರು.

ನಗರದ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ವಿಭಾಗದ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ಮತ್ತು ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಭಾಷಾಂತರ ಪ್ರಸ್ತುತತೆ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನುವಾದ ಎಂಬ ಮಾಧ್ಯಮ ಮೂಲಕ ನಮ್ಮ ಕನ್ನಡ ನೆಲದ ಸಂಸ್ಕೃತಿ, ತಿಳುವಳಿಕೆ, ಅರಿವು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಲು ಸಾಧ್ಯವಿದೆ. ಸೃಜನಶೀಲ ಲೇಖಕರ ಜೊತೆ ಜೊತೆಗೆ ಅನುವಾದಕರಾಗಿಯೂ ಕೆಲಸ ಮಾಡಬೇಕಾದ ಜರೂರಿದೆ. ಈಗಾಗಲೇ ರಾಜ್ಯದಲ್ಲಿ ಅನುವಾದಕರ ಪಡೆ ಇದೆ. ಇದು ನಿಲ್ಲಬಾರದು. ಮುಂದುವರಿಕೆಯಾಗಬೇಕು ಎಂದರು.

ನಮ್ಮನ್ನು ಒಂದು ಕಡೆ ಸೇರಿಸುವ ಶಕ್ತಿ ಅನುವಾದಕ್ಕಿದೆ. ಶಬ್ದಗಳಿಗೆ ರೆಕ್ಕೆಗಳಿವೆ, ಹಾರುವ ಸಾಮರ್ಥ್ಯವೂ ಇದೆ. ಅದು ಸರಿಯಾದ ದಿಕ್ಕಿಗೆ ನಡೆಯಲು ತಲುಪಿಸಬೇಕಾದ ಕೆಲಸವನ್ನು ಮಾಡಬೇಕಾದವರು ಅನುವಾದಕರು. ಕೇವಲ ಶಾಬ್ಧಿಕ ಅನುವಾದಗಳು ಅಷ್ಟೇ ಅಲ್ಲದೇ ಭಾಷಾಂತರ ವಿಶಾಲಾರ್ಥದಲ್ಲಿ ಮನುಷ್ಯನ ಎಲ್ಲ ಚಟುವಟಿಕೆಗಳು ಅನುವಾದಗಳೇ ಇದ್ದಂತೆ. ಅನುವಾದಕ್ಕೆ ಹೊಸ ಪಡೆ ನಿರ್ಮಾಣ ಮಾಡಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಾರ್ಯಯೋಜನೆ ಹಾಕಿಕೊಂಡಿದೆ ಎಂದು ಹೇಳಿದರು.

ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲರು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯ ಸಂಚಾಲಕ ಡಾ.ಜೆ.ಕರಿಯಪ್ಪ ಮಾಳಿಗೆ ಮಾತನಾಡಿ, ಭಾಷಾಂತರದ ವ್ಯಾಪ್ತಿ ಹಿರಿದು. ನಿತ್ಯ, ಪ್ರತಿಕ್ಷಣ ಅನುವಾದ ಆಗುತ್ತಲೇ ಇದೆ. ಎಲ್ಲರ ಗ್ರಹಿಕೆಗಳು ಒಂದು ರೀತಿಯಲ್ಲಿ ಅನುವಾದವೇ. ಓದುವುದರಲ್ಲಿ, ಕೇಳುವುದರಲ್ಲಿ, ಮಾತಾಡುವುದರಲ್ಲಿಯೂ ಅನುವಾದವಿದೆ. ಮೂಲ ಭಾಷೆಯ ಪಠ್ಯವನ್ನಾಧರಿಸಿ ರೂಪಿಸಿದ ಅನುವಾದಗಳು, ಮೂಲ ಪಠ್ಯವನ್ನು ಅನುಸರಿಸಿ, ಅಗತ್ಯಕ್ಕೆ ತಕ್ಕಂತೆ ಅನುಸೃಷ್ಠಿಯಾದವುಗಳು. ಮೂಲ ಪಠ್ಯದ ಹೂರಣವನ್ನು ಸ್ಥಳೀಯವಾಗಿ ಅಗತ್ಯಕ್ಕೆ ತಕ್ಕಂತೆ ಪೂರಕವಾಗಿ ಬದಲಾಯಿಸಿಕೊಂಡ ರೂಪಾಂತರಗಳು ಹೀಗೆ ಯಾವ ಭಾಷಾಂತರದಲ್ಲೂ ಶ್ರೇಷ್ಠ ಕನಿಷ್ಠವೆಂಬ ತಾರತಮ್ಯವಿಲ್ಲ ಎಂದರು.

ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ಆರ್.ತಾರಿಣಿ ಶುಭದಾಯಿನಿ ಮಾತನಾಡಿ, ಪ್ರತಿ ಭಾಷೆಗೂ ತನ್ನದೇ ಆದ ಅನನ್ಯತೆ ಇದೆ. ಈ ಅನನ್ಯತೆ ಹೇಗೆ ಮುಂದೆ ಭಾಷಾಂತರಕ್ಕೆ ಉಳಿದುಕೊಂಡು ಹೋಗಬಹುದು ಎಂಬ ವಿಷಯ ಬಂದಾಗ ಭಾಷೆಯ ಅನನ್ಯತೆ ತಿಳಿಯಲಿಕ್ಕೆ ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಭಾಷಾಂತರ ಮಾಡಿದ ಸಂದರ್ಭದಲ್ಲಿ ಭಾಷೆಯ ಯಾವ ಗುಣವನ್ನಿಟ್ಟುಕೊಂಡು ಭಾಷಾಂತರಕ್ಕೆ ತೊಡಗಲಾಗುತ್ತಿದೆ ಎಂಬುವುದು ತುಂಬಾ ಮುಖ್ಯ. ಭಾಷಾಂತರ ಮಾಡುತ್ತಾ ಮಾಡುತ್ತಾ ಹೋದಂತೆ ನಾವು ನಮ್ಮದೇ ಆದ ಪ್ರತಿಸೃಷ್ಠಿ, ಸೃಜನಶೀಲವಾದ ಸಾಧ್ಯತೆ ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದರು.

ಭಾಷಾಂತರ ಸಾಧ್ಯತೆಗಳು ಕುರಿತು ವಿಮರ್ಶಕ ಡಾ.ಕೆ.ಕೇಶವ ಶರ್ಮಾ ಮಾತನಾಡಿದರು.

ಈ ಸಂದರ್ಭದಲ್ಲಿ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಎಚ್.ನಾಗವರ್ಮ, ಪರೀಕ್ಷಾ ನಿಯಂತ್ರಕ ಡಾ.ಬಿ.ಸುರೇಶ್, ಸಹಾಯಕ ಪ್ರಾಧ್ಯಾಪಕ ಪ್ರೊ.ಕೆ.ಮಂಜುನಾಥ್, ವಿಮರ್ಶಕರು ಹಾಗೂ ಅನುವಾದಕರಾದ ಡಾ.ಕೇಶವಶರ್ಮ, ಡಾ.ರಾಮಲಿಂಗಪ್ಪ ಟಿ.ಬೇಗೂರು, ಕಥೆಗಾರ ಹಾಗೂ ಅನುವಾದಕ ಪ್ರೊ.ಎಸ್.ಗಂಗಾಧರಯ್ಯ, ಸ್ನಾತಕೋತ್ತರ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಚಿತ್ತಯ್ಯ ಇತರರಿದ್ದರು.