ಸಾರಾಂಶ
ರಾಮನಗರ: ಪ್ರಪಂಚದ ಲಿಪಿ ಇರುವ ಎಲ್ಲಾ ಭಾಷೆಗಳಿಗೂ ಮಹಾಕಾವ್ಯ ರಾಮಾಯಣ ಅನುವಾದಗೊಂಡಿದೆ. ಇದನ್ನು ರಚಿಸಿದ ಆದಿ ಕವಿ ವಾಲ್ಮಿಕಿ ಮಹರ್ಷಿಗಳು ಮಹಾತ್ಮರು ಎಂದು ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅಭಿಪ್ರಾಯಪಟ್ಟರು.
ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಫಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ರಾಮಾಯಣ ಮತ್ತು ಮಹಾಭಾರತ ಈ ದೇಶದ ಎರಡು ಮಹಾ ಕಾವ್ಯಗಳು. ರಾಮನ ಪಾತ್ರ ಮತ್ತು ವ್ಯಕ್ತಿತ್ವವನ್ನು ರಾಮಾಯಣದ ಮೂಲಕ ಕಟ್ಟಿಕೊಟ್ಟು, ಅದನ್ನು ಅದ್ಭುತವಾದ ರೀತಿಯಲ್ಲಿ ವ್ಯಾಖ್ಯಾನಿಸಿದ ವ್ಯಕ್ತಿ ವಾಲ್ಮೀಕಿ ಮಹರ್ಷಿಗಳು.
ರಾಮಾಯಣದಲ್ಲಿ ಬರುವ ಪಾತ್ರಗಳು ನಮ್ಮ ಸಮಾಜದ ಪ್ರತಿಯೊಬ್ಬರ ನಡವಳಿಕೆಯನ್ನು ತೋರಿಸುವ ಒಂದೊಂದು ಪಾತ್ರವಾಗಿದೆ. ರಾಮ, ಸೀತೆ, ರಾವಣ, ಲಕ್ಷ್ಮಣ, ಹನುಮಂತನ ಪಾತ್ರಗಳನ್ನು ಸೃಷ್ಟಿ ಮಾಡಿರುವುದಕ್ಕೆ ವಾಲ್ಮಿಕಿ ಅವರು ಮಹರ್ಷಿಗಳಾದರು ಎಂದು ಹೇಳಿದರು.ತಳ ಸಮುದಾಯಗಳು ಒಂದಾಗಬೇಕು. ಶಿಕ್ಷಣ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು. ಈ ಮೂಲಕ ಸರ್ಕಾರದ ಯೋಜನೆಗಳು ಅರ್ಹರನ್ನು ತಲುಪಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಚಂದ್ರಯ್ಯ ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ಎಚ್. ಷಣ್ಮುಖ ಮಾತನಾಡಿ, ರತ್ನಾಕರನ ಆತ್ಮವಿಕಸನದ ಪ್ರತಿಫಲನವೆ ವಾಲ್ಮೀಕಿ. ಈ ದೇಶದ ಮೊದಲ ಮಹಾಕಾವ್ಯ ರಾಮಾಯಣವನ್ನು ರಚಿಸಿದ ಮಹಾಪುರುಷ, ಬೇಟೆಯಾಡುತ್ತಿದ್ದ ರತ್ನಾಕರ ಬೇಟೆ ಮಾಡುವುದು ಕೇವಲ ದೈಹಿಕ ಹಸಿವನ್ನು ಮಾತ್ರ ನೀಗಿಸುತ್ತದೆ ಎಂದು ಅರ್ಥಮಾಡಿಕೊಂಡು ತಪಸ್ಸು ಮಾಡಿ ತಮ್ಮ ಸ್ವ ಪ್ರತಿಭೆಯಿಂದ ಶ್ರೇಷ್ಠ ವಿದ್ವಾಂಸನಾದರು ಎಂದು ತಿಳಿಸಿದರು.ರಾಮಾಯಣವನ್ನು ಬರೆಯಬೇಕಾದರೆ ಅದ್ಭುತವಾದ ಜ್ಞಾನ ಹೊಂದಿರಬೇಕು, ಜೀವ ಜ್ಞಾನಿ ತತ್ವಜ್ಞಾನಿ ಆಗಿರಬೇಕು, ಅರಣ್ಯ ಪ್ರೇಮಿಯಾಗಿರಬೇಕು, ಕಾನೂನು ಪಂಡಿತನಾಗಿರಬೇಕು.64 ವಿದ್ಯೆ ತಿಳಿದವನಾಗಿರಬೇಕು, ಮಾನವೀಯ ಕಳಕಳಿ, ಜೀವಪರ ಚಿಂತನೆ ಬಂಧು-ಬಳಗ ಅಥವಾ ಕುಟುಂಬ,ಸ್ನೇಹ ಸಂಬಂಧದ ಬಗ್ಗೆ ಎಲ್ಲವನ್ನು ಅರ್ಥಮಾಡಿಕೊಂಡವನಾಗಿರಬೇಕು ಆಗ ಮಾತ್ರ ಅತ್ಯದ್ಭುತ ಗ್ರಂಥವನ್ನು ರಚಿಸುವುದಕ್ಕೆ ಸಾಧ್ಯ ಎಂದರು.
ಸ್ವ ಪ್ರತಿಭೆಯಿದ್ದರೆ ಮಾತ್ರ ಮನುಷ್ಯ ಎನ್ನನ್ನಾದರೂ ಸಾಧಿಸುತ್ತಾನೆ. ನಿಮ್ಮ ಮತ್ತು ನಿಮ್ಮ ಶಕ್ತಿಯನ್ನು ನಂಬುವುದರ ಮೂಲಕ ಕೆಲಸ ಮಾಡಿದರೆ ಅದ್ಭುತ ತಪಸ್ವಿ ಗಳಾಗುತ್ತೀರಿ. ಜ್ಞಾನಿಗಳಾಗುತ್ತಿರಿ ಮತ್ತು ದಾರ್ಶನಿಕರಾಗುತ್ತೀರಿ ಅಂತಹ ಒಬ್ಬ ಸಂತ, ತಪಸ್ವಿ, ಜ್ಞಾನಿ,ದಾರ್ಶನಿಕ, ಸಸ್ಯ ಜ್ಞಾನಿ, ಅರಣ್ಯ ಜ್ಞಾನಿ ಮತ್ತು ಜೀವಶಾಸ್ತ್ರಜ್ಞ ಯಾರೆಂದರೆ ಅವರೇ ವಾಲ್ಮೀಕಿ. ವಾಲ್ಮೀಕಿ ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ ಸಮಾಜದಲ್ಲಿನ ಪ್ರತಿಯೊಂದು ಸಮುದಾಯಕ್ಕೂ ಸಲ್ಲು ವಂತವರು ಹಾಗಾಗಿ ಎಲ್ಲ ಸಮುದಾಯದವರು ರಾಮಾಯಣವನ್ನು ಓದಬೇಕು ಎಂದು ಷಣ್ಮುಖ ಹೇಳಿದರು.ಇದೇ ವೇಳೆ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಅಪರ ಪೋಲಿಸ್ ಅಧೀಕ್ಷಕ ರಾಜೇಂದ್ರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ಜಿಲ್ಲಾ ಜಾಗೃತಿ ಉಸ್ತುವಾರಿ ಸಮಿತಿಯ ಸದಸ್ಯರಾದ ಚೆಲುವರಾಜು, ಸಿ.ಡಿ.ಪಿ.ಐ ಸ್ವಾಮಿ, ಕೆಡಿಪಿ ಸದಸ್ಯರಾದ ಗುರುಮೂರ್ತಿ, ದಲಿತ ಮುಖಂಡರಾದ ಶಿವಕುಮಾರಸ್ವಾಮಿ, ಮುಖಂಡರಾದ ರಾಮಕೃಷ್ಣ, ಜಯಪ್ರಕಾಶ್ ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಿಂದ ಡಾ. ಅಂಬೇಡ್ಕರ್ ಭವನದವರೆಗೆ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಬೆಳ್ಳಿರಥದಲ್ಲಿರಿಸಿ ಕಲಾತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.
7ಕೆಆರ್ ಎಂಎನ್ 3.ಜೆಪಿಜಿರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಚಂದ್ರಯ್ಯ ಉದ್ಘಾಟಿಸಿದರು.