ಚುನಾವಣೆಯಲ್ಲಿ ಪಾರದರ್ಶಕತೆ ಅವಶ್ಯಕ

| Published : Dec 08 2024, 01:15 AM IST

ಸಾರಾಂಶ

ಮತದಾನ ನಡೆಯುವ ಪ್ರತಿಯೊಂದು ಮತಕ್ಷೇತ್ರದಲ್ಲಿ ಮತಗಳನ್ನು ಮತ ಮೂಲಕ ನೀಡತಕ್ಕದ್ದು, ಚುನಾವಣೆಯಲ್ಲಿ ಮತ ನೀಡುವ ಎಲ್ಲ ಮತದಾರರು ಖುದ್ದಾಗಿ ಮತಗಟ್ಟೆಗೆ ಹಾಜರಾಗಿ ಮತ ನೀಡತಕ್ಕದ್ದು

ಗದಗ: ಸಹಕಾರ ಸಂಘಗಳ ಚುನಾವಣೆ ಕಾನೂನು ಬದ್ಧವಾಗಿ, ಪಾರದರ್ಶಕತೆಯಿಂದ ಜರುಗಿಸುವುದು ಅತೀ ಅವಶ್ಯಕವಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕಿ ಎಸ್.ಎಸ್. ಕಬಾಡೆ ಹೇಳಿದರು.

ನಗರದ ದಿ.ಕೆ.ಸಿ.ಸಿ. ಬ್ಯಾಂಕ್ ಸಭಾ ಭವನದಲ್ಲಿ ಶನಿವಾರ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲೆಯಲ್ಲಿ ಚುನಾವಣೆ ಜರುಗಲಿರುವ ಸಹಕಾರ ಸಂಘಗಳ ರಿಟರ್ನಿಂಗ್ ಅಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ನಡೆದ ಒಂದು ದಿನದ ವಿಶೇಷ ಸಹಕಾರ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ–1959 ಹಾಗೂ ನಿಯಮಗಳು–1960 ಕ್ಕೆ 2013ನೇ ಇಸ್ವಿಯಲ್ಲಿ ತಿದ್ದುಪಡಿ ತರುತ್ತಾ ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಚುನಾಯಿಸುವ ಸಲುವಾಗಿ ಕರ್ನಾಟಕ ಸಹಕಾರ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತು. ನಂತರ 6.9.2014 ರಿಂದ ಆಯೋಗವು ಪ್ರಾಧಿಕಾರವಾಗಿ ಮರು ನಾಮಕರಣಗೊಂಡಿತು. ಈಗ, ಪ್ರತಿಯೊಂದು ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಹಾಗೂ ಪದಾಧಿಕಾರಿಗಳ ಚುನಾವಣೆ ಕರ್ನಾಟಕ ಚುನಾವಣಾ ಪ್ರಾಧಿಕಾರದ ಸುಪರ್ದಿಯಲ್ಲಿ ನಡೆಸಲಾಗುತ್ತಿದೆ ಎಂದರು.

ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಬೆಂಗಳೂರ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಮಾತನಾಡಿ, ಚುನಾವಣಾ ದಿನಾಂಕದ ಅರವತ್ತು ದಿವಸಗಳ ಪೂರ್ವದಲ್ಲಿ ಕರಡು ಅರ್ಹ ಮತದಾರರು, ಅಂತಿಮ ಮತದಾರರ ಪಟ್ಟಿ ತಯಾರಿಕೆಗೆ ಮುನ್ನ ಸಾಲ ಮರುಪಾವತಿಯ ದಿನಾಂಕವಿದ್ದಲ್ಲಿ, ಈ ಮಾಹಿತಿ ಒಳಗೊಂಡ ಪಟ್ಟಿ, ಸುಸ್ತಿದಾರರ ಪಟ್ಟಿ, ಅನರ್ಹ ಮತದಾರರ ಪಟ್ಟಿ ಮತ್ತು ಅನರ್ಹತೆಗೆ ಇರುವ ಕಾರಣಗಳೊಂದಿಗೆ ಪಟ್ಟಿ ತಯಾರಿಸಿ ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಬೇಕು. ಈ ರೀತಿ ಕಾನೂನಿಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಂಡು ಚುನಾವಣೆ ಜರುಗಿಸಬೇಕು ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಫ್. ಕಲಗುಡಿ ಮಾತನಾಡಿ, ಎಲ್ಲ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ರ ನಿಯಮ 13ಡಿ(4)ರ ರೀತ್ಯಾ ಚುನಾವಣಾ ಪ್ರಾಧಿಕಾರದಿಂದ ನೇಮಕಾತಿ ಮಾಡಲ್ಪಟ್ಟ ಚುನಾವಣಾಧಿಕಾರಿಯು ಪ್ರಾಧಿಕಾರದ ನಿರ್ದೇಶನದಂತೆ ಸರಿಯಾದ ಮತದಾರರ ಪಟ್ಟಿ ತಯಾರಿಸಿ ಅನುಮೋದಿಸಲು ಅನುವಾಗುವಂತೆ ಸಮರ್ಪಕ ಮಾಹಿತಿ ಒದಗಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಕಾರಣ ಹೆಚ್ಚಿನ ಮುಂಜಾಗೃತೆ ವಹಿಸಿ ಕೆಲಸ ನಿರ್ವಹಿಸುವುದು ಅತೀ ಮುಖ್ಯವಾಗಿದೆ ಎಂದರು.

ಜಿಲ್ಲಾ ಸಹಕಾರ ಯೂನಿಯನ್‌ದ ಅಧ್ಯಕ್ಷ ಸಿ.ಎಂ. ಪಾಟೀಲ ಮಾತನಾಡಿ, ಮತದಾನ ನಡೆಯುವ ಪ್ರತಿಯೊಂದು ಮತಕ್ಷೇತ್ರದಲ್ಲಿ ಮತಗಳನ್ನು ಮತ ಮೂಲಕ ನೀಡತಕ್ಕದ್ದು, ಚುನಾವಣೆಯಲ್ಲಿ ಮತ ನೀಡುವ ಎಲ್ಲ ಮತದಾರರು ಖುದ್ದಾಗಿ ಮತಗಟ್ಟೆಗೆ ಹಾಜರಾಗಿ ಮತ ನೀಡತಕ್ಕದ್ದು, ಆದರೇ ಪ್ರಾಕ್ಸಿ ಮೂಲಕ ಮತ ಚಲಾಯಿಸಲು ಅನುಮತಿ ಇರುವುದಿಲ್ಲ ಸಹಕಾರ ಸಂಘಗಳ ಚುನಾವಣೆಗಳು ವಿಶ್ವಾಸ ಹಾಗೂ ಅನ್ಯೋನ್ಯವಾಗಿ ನಡೆಸಿದರೆ ಎಲ್ಲ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೇ ಸಂಘದ ಆರ್ಥಿಕತೆಗೆ ಧಕ್ಕೆಯಾಗುವುದಿಲ್ಲ ಎಂದರು.

ಈ ವೇಳೆ ನಿರ್ದೇಶಕ ಸಿ.ಬಿ. ದೊಡ್ಡಗೌಡ್ರ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ಎಸ್.ಕೆ. ಕುರಡಗಿ, ಎಸ್.ವಿ. ಸುರಕೋಡ, ಡಾ. ಪ್ರಸನ್ನ ಪಟ್ಟೇದ ಹಾಗೂ ಹಾಲು ಒಕ್ಕೂಟದ ಮುಂಡರಗಿ, ರೋಣ, ನರಗುಂದ, ಶಿರಹಟ್ಟಿ ಹಾಗೂ ಗದಗ ತಾಲೂಕುಗಳ ವಿಸ್ತರಣಾಧಿಕಾರಿಗಳು ಇದ್ದರು.

ತರಬೇತಿ ಕಾರ್ಯಾಗಾರದಲ್ಲಿ ಸಹಕಾರ ಸಂಘಗಳ ಆಡಳಿತ ಮಂಡಳಿ ಚುನಾವಣೆ ಜರುಗಿಸುವ ವಿಧಿ ವಿಧಾನಗಳ ಕುರಿತು, ಧಾರವಾಡ ನಿವೃತ್ತ ಸಹಕಾರ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಹಕಾರ ಸಂಘಗಳ ಪದಾಧಿಕಾರಿಗಳ ಚುನಾವಣೆ ಜರುಗಿಸುವ ಕುರಿತು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಉಪನ್ಯಾಸ ನೀಡಿದರು. ಚಂದ್ರಶೇಖರ ಎಸ್.ಕರಿಯಪ್ಪನವರ ಸ್ವಾಗತಿಸಿ ನಿರೂಪಿಸಿದರು. ರಶೀದಾಬಾನು ಸಿ.ಯಲಿಗಾರ ವಂದಿಸಿದರು.