ಸಾರಿಗೆ ಬಸ್‌ ಸುಟ್ಟ ಪ್ರಕರಣ: 29ಕ್ಕೆ ವಿಚಾರಣೆ ಮುಂದೂಡಿಕೆ

| Published : Feb 02 2024, 01:01 AM IST

ಸಾರಿಗೆ ಬಸ್‌ ಸುಟ್ಟ ಪ್ರಕರಣ: 29ಕ್ಕೆ ವಿಚಾರಣೆ ಮುಂದೂಡಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶಂಕಿತ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಅವರ ಶಿವಮೊಗ್ಗ ಜಿಲ್ಲೆಯಲ್ಲಿನ ಮೂರನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಪುನಃ ಅವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮುಂದಿನ ವಿಚಾರಣೆಯನ್ನು ಫೆ.29ಕ್ಕೆ ಮುಂದೂಡಲಾಗಿದ್ದು, ಈ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. 2009ರಲ್ಲಿ ತೀರ್ಥಹಳ್ಳಿ ತಾಲೂಕು ಹೊಸಗದ್ದೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿನ ಮೂರನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಅವರನ್ನು ಗುರುವಾರ ಪುನಃ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮುಂದಿನ ವಿಚಾರಣೆಯನ್ನು ಫೆ.29ಕ್ಕೆ ಮುಂದೂಡಲಾಗಿದ್ದು, ಈ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

2009ರಲ್ಲಿ ತೀರ್ಥಹಳ್ಳಿ ತಾಲೂಕು ಹೊಸಗದ್ದೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಜಿ. ಕೃಷ್ಣಮೂರ್ತಿಯನ್ನು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಿದರು. ಈ ಪ್ರಕರಣದಲ್ಲಿ ಕೃಷ್ಣಮೂರ್ತಿ 3ನೇ ಆರೋಪಿ ಆಗಿದ್ದಾರೆ. ಈ ವೇಳೆ ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧಿಸಿದಿಂತೆ ಆರೋಪಿ ವಿರುದ್ಧ ಚಾರ್ಜ್ ಮಾಡಿದರು. ಆರೋಪಿ ಕೃಷ್ಣಮೂರ್ತಿ ತಮ್ಮ ಮೇಲಿನ ಆರೋಪ ನಿರಾಕರಿಸಿದರು. ಮುಂದಿನ ವಿಚಾರಣೆಯನ್ನು ಫೆಬ್ರವರಿ 29ಕ್ಕೆ ಮುಂದೂಡಿ ಆದೇಶಿಸಿದರು.

ಬಳಿಕ ಪೊಲೀಸರು ಆರೋಪಿ ಕೃಷ್ಣಮೂರ್ತಿಯನ್ನು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದು, ಅಲ್ಲಿ ಅಗತ್ಯ ಪ್ರಕ್ರಿಯೆಗಳನ್ನು ಪೂರೈಸುತ್ತಿದ್ದು, ಶುಕ್ರವಾರ ಕೇರಳದತ್ತ ಕೃಷ್ಣಮೂರ್ತಿಯನ್ನು ಕರೆದೊಯ್ದಲಿದ್ದಾರೆ.

ಬುಧವಾರ ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಮುಂದೆ ಪೊಲೀಸರು ಶಂಕಿತ ನಕ್ಸಲ್ ಕೃಷ್ಣಮೂರ್ತಿಯನ್ನು 2007ರಲ್ಲಿ ಆಗುಂಬೆ ಸಮೀಪ ಫಾರೆಸ್ಟ್‌ ಗೇಟ್ ಧ್ವಂಸ ಪ್ರಕರಣ, ತೀರ್ಥಹಳ್ಳಿಯ ಬಿದರಗೋಡು ಗ್ರಾಮದಲ್ಲಿ ಅರುಣಕುಮಾರ ಎಂಬುವರ ಮನೆಯಲ್ಲಿ ದರೋಡೆ, ಜೀಪ್‌ ಸುಟ್ಟ ಪ್ರಕರಣ ಹಾಗೂ ಇದೇ ತಾಲೂಕಿನ ಹೊಸಗದ್ದೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಸುಟ್ಟ ಪ್ರಕರಣ ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹಾಜರುಪಡಿಸಿದ್ದರು.

ಇವುಗಳಲ್ಲಿ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಕೃಷ್ಣಮೂರ್ತಿ ತಮ್ಮ ವಿರುದ್ಧದ ಆರೋಪ ನಿರಾಕರಿಸಿದರು. 3ನೇ ಪ್ರಕರಣವಾದ ಹೊಸಗದ್ದೆ ಬಳಿ ಕೆಎಸ್‌ಆರ್‌ಟಿಸಿ ಬಸ್‌ ಸುಟ್ಟ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಗುರುವಾರಕ್ಕೆ ಮುಂದೂಡಿ ನ್ಯಾಯಾಧೀಶರು ಆದೇಶಿಸಿದ್ದರು.

ಚೇತರಿಕೆ:

ಬಿ.ಜಿ.ಕೃಷ್ಣಮೂರ್ತಿ ಪರ ವಕೀಲ ಕೆ.ಪಿ. ಶ್ರೀಪಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಸದ್ಯ ಬಿ.ಜಿ.ಕೃಷ್ಣಮೂರ್ತಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಅವರನ್ನು ಶುಕ್ರವಾರ ಕೇರಳದ ತ್ರಿಶೂರ್ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

- - - -ಫೋಟೋ: ಬಿ.ಜಿ. ಕೃಷ್ಣಮೂರ್ತಿ