ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡು ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಟ್ರ್ಯಾಕ್ಟರ್ ಚಾಲಕ ಅಪ್ಪಾಜಿ ಗಂಭೀರವಾಗಿ ಗಾಯಗೊಂಡರು. ಬಸ್‌ನಲ್ಲಿದ್ದ 7 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ನಾಗಮಂಗಲ: ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸಾರಿಗೆ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿ ಟ್ರ್ಯಾಕ್ಟರ್ ಚಾಲಕ ಸೇರಿ ಬಸ್‌ನಲ್ಲಿದ್ದ ಏಳು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ದೇವಿಹಳ್ಳಿ ಗೇಟ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮಾಕವಳ್ಳಿಯ ಶೇಖರ್(47) ಘಟನೆಯಲ್ಲಿ ಸಾವನ್ನಪ್ಪಿದ ಸಾರಿಗೆ ಬಸ್ ಚಾಲಕ. ತಾಲೂಕಿನ ಮೈಲನಹಳ್ಳಿಯ ಅಪ್ಪಾಜಿ ಗಂಭೀರವಾಗಿ ಗಾಯಗೊಂಡಿರುವ ಟ್ರ್ಯಾಕ್ಟರ್ ಚಾಲಕ.

ತಮ್ಮ ಜಮೀನಿನಲ್ಲಿ ತೆಂಗಿನ ಕಾಯಿಗಳನ್ನು ದಾಸ್ತಾನು ಮಾಡಲು ಶೆಡ್ ನಿರ್ಮಿಸುವ ಸಲುವಾಗಿ ತಾಲೂಕಿನ ಮೈಲನಹಳ್ಳಿಯ ಅಪ್ಪಾಜಿ ಅವರು ತಮ್ಮ ಟ್ರ್ಯಾಕ್ಟರ್‌ನಲ್ಲಿ ಕಬ್ಬಿಣದ ರಾಡುಗಳನ್ನು ತುಂಬಿಕೊಂಡು ಬೆಳ್ಳೂರು ಕ್ರಾಸ್‌ನಿಂದ ದೇವಿಹಳ್ಳಿ ಮಾರ್ಗವಾಗಿ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಇದೇ ವೇಳೆ ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎ 13 ಎಫ್ 2340 ಸಂಖ್ಯೆಯ ಸಾರಿಗೆ ಬಸ್ ಟ್ರ್ಯಾಕ್ಟರ್ ಹಿಂಬದಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡು ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಟ್ರ್ಯಾಕ್ಟರ್ ಚಾಲಕ ಅಪ್ಪಾಜಿ ಗಂಭೀರವಾಗಿ ಗಾಯಗೊಂಡರು. ಬಸ್‌ನಲ್ಲಿದ್ದ 7 ಮಂದಿ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬೆಳ್ಳೂರು ಪೊಲೀಸ್ ಠಾಣೆ ಪಿಎಸ್‌ಐ ನರೇಶ್‌ಕುಮಾರ್ ನೇತೃತ್ವದ ಪೊಲೀಸ್ ಸಿಬ್ಬಂದಿ ಗಾಯಾಳುಗಳನ್ನು ಸಮೀಪದ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ, ಶೇಖರ್ ಮೃತದೇಹವನ್ನು ಇದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದರು.

ಸ್ಥಳೀಯರು ಮತ್ತು ಹೆದ್ದಾರಿ ಸಿಬ್ಬಂದಿ ನೆರವಿನಿಂದ ಬಸ್ ಮತ್ತು ಟ್ರ್ಯಾಕ್ಟರ್‌ಅನ್ನು ತೆರವುಗೊಳಿಸಿದ ಪೊಲೀಸರು ಹೆದ್ದಾರಿಯ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ವಹಿಸಿದ್ದಾರೆ.