ಜಗಳೂರು ತಾಲೂಕಿನ ಪಲ್ಲಾಗಟ್ಟೆ– ಜಗಳೂರು ಮಾರ್ಗದಲ್ಲಿ ಶಾಲಾ ಅವಧಿಯಲ್ಲಿ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್ ಸಂಚಾರ ಪುನಃ ಆರಂಭಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶಾಸಕರ ನಿವಾಸದೆದುರು ಗುಡ್ಡದಲಿಂಗಣ್ಣನಹಳ್ಳಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಆಗ್ರಹಿಸಿದ್ದಾರೆ.

- ಜಗಳೂರು ಶಾಸಕರ ನಿವಾಸ ಎದುರು ಗುಡ್ಡದಲಿಂಗಣ್ಣನಹಳ್ಳಿ ಗ್ರಾಮಸ್ಥರ ಆಗ್ರಹ । ವಿದ್ಯಾರ್ಥಿಗಳಿಗೂ ಭಾರಿ ಸಮಸ್ಯೆ: ಅಳಲು

- - -

ಕನ್ನಡಪ್ರಭ ವಾರ್ತೆ ಜಗಳೂರು

ತಾಲೂಕಿನ ಪಲ್ಲಾಗಟ್ಟೆ– ಜಗಳೂರು ಮಾರ್ಗದಲ್ಲಿ ಶಾಲಾ ಅವಧಿಯಲ್ಲಿ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್ ಸಂಚಾರ ಪುನಃ ಆರಂಭಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ಶಾಸಕರ ನಿವಾಸದೆದುರು ಗುಡ್ಡದಲಿಂಗಣ್ಣನಹಳ್ಳಿಯ ವಿದ್ಯಾರ್ಥಿಗಳು, ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಅಂಜಿನಪ್ಪ ಈ ಸಂದರ್ಭ ಮಾತನಾಡಿ, ಐದಾರು ಹಳ್ಳಿಗಳಿಂದ ಪ್ರತಿನಿತ್ಯ ೧೫೦ಕ್ಕೂ ಹೆಚ್ಚು ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಜಗಳೂರಿಗೆ ಓಡಾಡುತ್ತಾರೆ. ಇದರಿಂದ ಅನೇಕ ಬಾರಿ ಹೋರಾಟ ಮಾಡಿ ಕೆಎಸ್ಆರ್ಟಿಸಿ ಬಸ್ ಸಂಚರಿಸುವಂತೆ ಮಾಡಲಾಗಿತ್ತು. ಆದರೆ, ಈಗ ಬಸ್‌ ಸಂಚಾರ ಡಿಢೀರನೆ ಸಂಪೂರ್ಣ ಸ್ಥಗಿತಗೊಳಿಸಿದ್ದಾರೆ. ಹೀಗಾದರೆ ಪಟ್ಟಣ, ಜಿಲ್ಲೆಗಳಿಗೆ ಸಂಚರಿಸುವ ಪ್ರಯಾಣಿಕರು, ವಿದ್ಯಾರ್ಥಿಗಳ ಗತಿ ಏನು? ಬಸ್ ಸಂಚಾರ ಮುಂದುವರಿಸಲು ಸಾರಿಗೆ ಡಿಪೋ ಅಧಿಕಾರಿಗಳಿಗೆ ಏನು ಸಮಸ್ಯೆ? ಸಾಕಷ್ಟು ಬಸ್‌ಗಳು ಓಡಾಡದೇ ನಿಲ್ಲುತ್ತವೆ. ಒಂದು ಬಸ್ ಈ ಭಾಗದಲ್ಲಿ ಸಂಚರಿಸುವುದರಿಂದ ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ ಎಂದರು.

ಬೆಳಗ್ಗೆ ೮.೩೦ ರಿಂದ ೧೦ ಗಂಟೆ ಹಾಗೂ ಮಧ್ಯಾಹ್ನ ೩ ಗಂಟೆ, ಸಂಜೆ ೫ರಿಂದ ೬ ಗಂಟೆಯವರೆಗೆ ವಿದ್ಯಾರ್ಥಿಗಳು, ರೈತರು, ವರ್ತಕರು, ಸಾರ್ವಜನಿಕರು ಬಸ್‌ನಲ್ಲಿ ಸಂಚರಿಸುತ್ತಾರೆ. ಕೆಎಸ್ಆರ್ಟಿಸಿ ಡಿಪೋ ಅಧಿಕಾರಿಗಳು ಯಾವುದೇ ಮೀನಾಮೇಷ ಎಣಿಸದೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಕ್ಷಣವೇ ಸರ್ಕಾರಿ ಬಸ್ ಸಂಚಾರಕ್ಕೆ ಅನುಮತಿ ನೀಡಬೇಕು. ಈ ಸಂಬಂಧ ಶಾಸಕರಿಗೂ ಮನವಿ ಮಾಡಲಾಗುತ್ತದೆ ಎಂದರು.

ಬೆಳಗ್ಗೆ ೯ ಗಂಟೆಗೆ ಸಂಚರಿಸುವ ಕೆಎಸ್ಆರ್‌ಟಿಸಿ ಬಸ್ ಪಲ್ಲಾಗಟ್ಟೆ, ತಾರೇಹಳ್ಳಿ, ಗೋಡೆ, ಗುಡ್ಡದಲಿಂಗಣ್ಣನಹಳ್ಳಿ ಐನಹಳ್ಳಿ, ಬೈರನಾಯಕನಹಳ್ಳಿ, ಗಿಡ್ಡನಕಟ್ಟೆ ಮಾರ್ಗವಾಗಿ ಜಗಳೂರು ಪಟ್ಟಣಕ್ಕೆ ಬರುತ್ತದೆ. ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಆದರೆ ಕಳೆದೆರಡು ತಿಂಗಳಿಂದಲೂ ಬಸ್ ಸಂಚರಿಸುತ್ತಿಲ್ಲ. ಇದರಿಂದ ಶಾಲೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ತಕ್ಷಣವೇ ಬಸ್ ಸಂಚಾರ ಪುನಾರಂಭಿಸಲು ಒತ್ತಾಯಿಸಿದರು.

ಗ್ರಾಪಂ ಸದಸ್ಯ ಶಾಂತಕುಮಾರ್, ಮಾಜಿ ಅಧ್ಯಕ್ಷ ಅಂಜಿನಪ್ಪ, ಗೌಡರ ವೀರಬಸಪ್ಪ, ನಾಗರಾಜ್ ಸೇರಿದಂತೆ ವಿದ್ಯಾರ್ಥಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

- - -

-18ಜೆ.ಜಿ.ಎಲ್.1: ಜಗಳೂರು ತಾಲೂಕಿನ ಪಲ್ಲಾಗಟ್ಟೆ– ಜಗಳೂರಿಗೆ ಶಾಲಾ ಅವಧಿಯಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಪುನಃ ಆರಂಭಿಸಲು ಆಗ್ರಹಿಸಿ ಗುಡ್ಡದಲಿಂಗಣ್ಣನಹಳ್ಳಿ ವಿದ್ಯಾರ್ಥಿಗಳು, ಗ್ರಾಮಸ್ಥರು ಡಿಪೋ ಅಧಿಕಾರಿಗಳು, ಶಾಸಕರಿಗೆ ಒತ್ತಾಯಿಸಿದರು.