ಅರೇಹಳ್ಳಿ ಬಳಿ ಮತ್ತೆ ಕಳಚಿದ ಸಾರಿಗೆ ಬಸ್‌ ಚಕ್ರ: ಅದೃಷ್ಟವಶಾತ್ ಪ್ರಯಾಣಿಕರು ಪಾರು

| Published : Jan 20 2025, 01:30 AM IST

ಅರೇಹಳ್ಳಿ ಬಳಿ ಮತ್ತೆ ಕಳಚಿದ ಸಾರಿಗೆ ಬಸ್‌ ಚಕ್ರ: ಅದೃಷ್ಟವಶಾತ್ ಪ್ರಯಾಣಿಕರು ಪಾರು
Share this Article
  • FB
  • TW
  • Linkdin
  • Email

ಸಾರಾಂಶ

ಬಸ್ ನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದು ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅಪಾಯ ತಪ್ಪಿದೆ. ಪ್ರಯಾಣಿಕರನ್ನು ಬೇರೆ ವಾಹನದಲ್ಲಿ ತೆರಳಲು ಅವಕಾಶ ಕಲ್ಪಿಸಲಾಯಿತು.

ಕನ್ನಡಪ್ರಭ ವಾರ್ತೆ ಬೇಲೂರು

ಬೇಲೂರು- ಸಕಲೇಶಪುರ ಮಾರ್ಗದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಡಕೋಟಾ ಬಸ್ಸುಗಳನ್ನು ಓಡಿಸುತ್ತಿದ್ದು ಪ್ರತಿನಿತ್ಯ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವುದರ ಜೊತೆಗೆ ಸ್ವಚ್ಛತೆಯ ಕೊರತೆ ಮತ್ತು ಆಮೆ ವೇಗದಲ್ಲಿ ಚಲುಸುವಂತಹವಾಗಿವೆ. ತುರ್ತು ಕೆಲಸಕ್ಕೆ ತೆರಳುವ ನಾಗರಿಕರು ಸರಿಯಾದ ಸಮಯಕ್ಕೆ ತಲುಪಲಾಗದೆ ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಬ್ಯಾದನೆ ಗ್ರಾಮದ ಬಳಿ ಸಾರಿಗೆ ಬಸ್ ನಿಂದ ಹಿಂಬದಿ ಟೈರ್ ಕಳಚಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಚಿಕ್ಕಮಗಳೂರಿಗೆ ಸೇರಿದ ಸಾರಿಗೆ ಘಟಕ ಬಸ್ ಸಕಲೇಶಪುರದಿಂದ ಬೇಲೂರಿಗೆ ತೆರಳುತ್ತಿದ್ದಾಗ ಬ್ಯಾದನೆ ಗ್ರಾಮದಲ್ಲಿ ಹಿಂಬದಿ ಚಕ್ರ ಕಳಚಿ ಬಿದ್ದಿದೆ. ಚಾಲಕನ ನಿಯಂತ್ರಣ ತಪ್ಪಿದ್ದು ತಕ್ಷಣ ಎಚ್ಚೆತ್ತ ಚಾಲಕ ಕೂಡಲೇ ಬಸ್ಸನ್ನು ನಿಲ್ಲಿಸಿದ್ದಾನೆ. ಬಸ್ ನಲ್ಲಿ ಸುಮಾರು 40 ಜನ ಪ್ರಯಾಣಿಕರಿದ್ದು ಚಾಲಕನ ಸಮಯಪ್ರಜ್ಞೆಯಿಂದ ಹೆಚ್ಚಿನ ಅಪಾಯ ತಪ್ಪಿದೆ. ಪ್ರಯಾಣಿಕರನ್ನು ಬೇರೆ ವಾಹನದಲ್ಲಿ ತೆರಳಲು ಅವಕಾಶ ಕಲ್ಪಿಸಲಾಯಿತು.

ಪ್ರಯಾಣಿಕರ ಅಕ್ರೋಶ:

ಸಕಲೇಶಪುರ ಡಿಪೋ ಮ್ಯಾನೇಜರ್ ಹಾಗೂ ಚಿಕ್ಕಮಗಳೂರು ವಿಭಾಗದ ನಿಯಂತ್ರಣ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ, ಹಳೆಯ ಗಾಡಿಗಳನ್ನು ಬೇಲೂರು- ಸಕಲೇಶಪುರ ಮಾರ್ಗದಲ್ಲಿ ಪ್ರತಿನಿತ್ಯ ಓಡಿಸುತ್ತಿದ್ದಾರೆ. ಸಾವಿರಾರು ಜನ ಪ್ರಯಾಣಿಕರು ಈ ಮಾರ್ಗದಲ್ಲೇ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಸುತ್ತಾರೆ. ಈ ವೇಳೆ ಏನಾದರೂ ಹೆಚ್ಚಿನ ಅವಘಡ ಸಂಭವಿಸಿದರೆ ಯಾರು ಹೊಣೆ? ಈ ಹಿಂದೆ 2013ರಲ್ಲಿ ಬೇಲೂರು- ವಿಷ್ಣುಸಮುದ್ರ ಕೆರೆಗೆ ಬಸ್ ಬಿದ್ದ ಪ್ರಕರಣ ಮತ್ತೆ ಮರುಕಳಿಸದ ಹಾಗೆ ಎಚ್ಚರಿಕೆ ವಹಿಸದಿದ್ದರೆ ಚಿಕ್ಕಮಂಗಳೂರು ವಿಭಾಗ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ. ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಹಾಗೂ ಈ ಮಾರ್ಗಗಳಿಗೆ ನೂತನ ಬಸ್ ಗಳನ್ನು ಬಿಡಬೇಕು

ಎಂದು ಕಡೇ ಗರ್ಜೆ ಗ್ರಾಮದ ದುಷ್ಯಂತ್ ದೂರಿದ್ದಾರೆ.