ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ತಾಲೂಕಿನ ಕೊರಲಕೊಪ್ಪದಿಂದ ಕುದುರೆಗುಂಡಿವರೆಗಿನ ಮಾರ್ಗ ಮದ್ಯೆ ಬರುವ ಎಲ್ಲಾ ಬಸ್ಸು ನಿಲ್ದಾಣದಲ್ಲೂ ಸರ್ಕಾರಿ ಬಸ್ಸಿಗೆ ನಿಲುಗಡೆ ಮಾಡಲು ಶಿವಮೊಗ್ಗ ಜಿಲ್ಲಾ ರಸ್ತೆ ಸಾರಿಗೆ ನಿಗಮದ ವಿಭಾಗಾಧಿಕಾರಿ ಆದೇಶ ಮಾಡಿದ್ದಾರೆ ಎಂದು ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಚಂದ್ರಮ್ಮ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರಸಿಂಹರಾಜಪುರ ತಾಲೂಕಿಗೆ ಶಿವಮೊಗ್ಗದಿಂದ ನರಸಿಂಹರಾಜಪುರದ ಮಾರ್ಗವಾಗಿ ಶೃಂಗೇರಿಗೆ 2 ಬಸ್ಸುಗಳು ಹಾಗೂ ಶಿಕಾರಿಪುರದಿಂದ ನರಸಿಂಹರಾಜಪುರ ಮಾರ್ಗವಾಗಿ ಶೃಂಗೇರಿಗೆ 2 ಬಸ್ಸುಗಳು ಇದುವರೆಗೆ ಬರುತ್ತಿದ್ದವು. ಆದರೆ, ಎಕ್ಷಪ್ರೆಸ್ ಬಸ್ಸು ಆಗಿರುವುದಿಂದ ನಿರ್ದಿಷ್ಟ ಬಸ್ಸು ವಿಲ್ದಾಣದಲ್ಲಿ ಮಾತ್ರ ನಿಲುಗಡೆ ಮಾಡ ಲಾಗುತ್ತಿತ್ತು. ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ಸು ಪ್ರಯಾಣಕ್ಕೆ ಅವಕಾಶ ನೀಡಿದ್ದರೂ ನರಸಿಂಹರಾಜಪುರ ತಾಲೂಕಿನ ಮಹಿಳೆಯರಿಗೆ ಹೆಚ್ಚು ಪ್ರಯೋಜನವಾಗುತ್ತಿರಲಿಲ್ಲ.
ಇದನ್ನು ಮನಗಂಡ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯವರು ಚರ್ಚೆ ನಡೆಸಿ ತಾಲೂಕಿನ ಮಹಿಳೆಯರಿಗೆ ಹೆಚ್ಚು ಉಪಯೋಗವಾಗಬೇಕು ಎಂಬ ಉದ್ದೇಶದಿಂದ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯರಾದ ರಘು, ಬೇಸಿಲ್ ಅವರ ತಂಡ ಶಿವಮೊಗ್ಗಕ್ಕೆ ತೆರಳಿ ಶಿವಮೊಗ್ಗ ಜಿಲ್ಲಾ ರಸ್ತೆ ಸಾರಿಗೆ ನಿಗಮದ ವಿಭಾಗಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಇಲ್ಲಿನ ಸಮಸ್ಯೆ ಮನವರಿಕೆ ಮಾಡಿದ್ದಾರೆ. ನಮ್ಮ ಮನವಿಗೆ ಸ್ಪಂದಿಸಿದ ರಸ್ತೆ ಸಾರಿಗೆ ವಿಭಾಗಾಧಿಕಾರಿಗಳು ನರಸಿಂಹರಾಜಪುರ ತಾಲೂಕಿನಲ್ಲಿ ಬರುವ ಎಲ್ಲಾ ಬಸ್ ನಿಲ್ದಾಣದಲ್ಲೂ ನಿಲುಗಡೆ ಮಾಡುವಂತೆ ಆದೇಶ ಮಾಡಿದ್ದು ಈ ಆದೇಶ ಗುರುವಾರ ದಿಂದಲೇ ಜಾರಿಗೆ ಬಂದಿದೆ ಎಂದು ವಿವರಿಸಿದರು.ರಸ್ತೆ ಸಾರಿಗೆ ನಿಗಮದ ಬಗ್ಗೆ ಯಾವುದೇ ದೂರು ಬಂದಲೂ ತಕ್ಷಣ ಸ್ಪಂದಿಸುತ್ತೇವೆ ಎಂದು ಶಿವಮೊಗ್ಗ ರಸ್ತೆ ಸಾರಿಗೆ ವಿಭಾಗಾಧಿಕಾರಿಗಳು ಭರವಸೆ ನೀಡಿದ್ದಾರೆ.
ನರಸಿಂಹರಾಜಪುರ ತಾಲೂಕಿನಲ್ಲಿ ಸರ್ಕಾರಿ ಬಸ್ಸುಗಳ ಓಡಾಟ ಕಡಿಮೆ ಇರುವುದರಿಂದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯು ನರಸಿಂಹರಾಜಪುರ ತಾಲೂಕಿನ ಮಹಿಳೆಯರಿಗೆ ಹೆಚ್ಚು ಉಪಯೋಗ ವಾಗಿರಲಿಲ್ಲ. ಶಿವಮೊಗ್ಗದಿಂದ 2 ಬಸ್ಸು ಹಾಗೂ ಶಿಕಾರಿಪುರದಿಂದ 2 ಬಸ್ಸು ಪ್ರತಿ ದಿನ 3 ಟ್ರಿಪ್ ಓಡಾಡುತ್ತಿದ್ದು ಒಟ್ಟು 12 ಟ್ರಪ್ ಓಡಾಟ ಮಾಡುತ್ತಿದ್ದರೂ ಎಲ್ಲಾ ಕಡೆ ಬಸ್ಸು ನಿಲುಗಡೆ ಇಲ್ಲದೆ ಇರುವುದು ಸಮಸ್ಯೆಯಾಗಿತ್ತು. ಈಗ ರಸ್ತೆ ಸಾರಿಗೆ ನಿಗಮದ ಉಪ ವಿಭಾಗಾಧಿಕಾರಿಗಳು ಬಸ್ಸು ನಿಲುಗಡೆಗೆ ಒಪ್ಪಿಗೆ ನೀಡಿರುವುದರಿಂದ ಮುಂದೆ ತಾಲೂಕಿನ ಮಹಿಳೆಯರಿಗೆ ಅನುಕೂಲ ವಾಗಲಿದೆ. ಎಲ್ಲಾ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಓಡಾಡಿ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಸುದ್ದಿ ಗೋಷ್ಠಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಎಸ್.ರಘು, ಬೇಸಿಲ್, ಟಿ.ಟಿ.ಇಸ್ಮಾಯಿಲ್, ಎನ್.ಎ. ಹೂವಮ್ಮ, ಜಿ.ನಾಗರಾಜ ಇದ್ದರು. ಗ್ಯಾರಂಟಿ ಯೋಜನೆಗಳ ಸಮಸ್ಯೆ ಬಂದರೆ ಸಾರ್ವಜನಿಕರು ಕೆಳಕಂಡ ದೂ. ಸಂಪರ್ಕಿಸಬಹುದು. ಮೊ.9663791987, 9591181096, 8310261734