ಸಾರಾಂಶ
ಸಂಸ್ಥೆಯ ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಾರಿಗೆ ಸಂಜೀವಿನಿ ಯೋಜನೆ ಜಾರಿಗೊಳಿಸಲಾಗಿದೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇಲ್ಲಿನ ಗೋಕುಲ ರಸ್ತೆಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ನೌಕರರು ಹಾಗೂ ಅವರ ಅವಲಂಬಿತರಿಗೆ ಸಾರಿಗೆ ಸಂಜೀವಿನಿ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಯೋಜನೆಯ ಅನುಷ್ಠಾನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಬುಧವಾರ ಚಾಲನೆ ನೀಡಿದರು.ಈ ವೇಳೆ ವಾ.ಕ.ರ.ಸಾ. ಸಂಸ್ಥೆಯ, ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾತನಾಡಿ, ಸಂಸ್ಥೆಯ ನೌಕರರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೊಳಿಸಲಾಗಿದೆ. ನೌಕರರು ಅನಾರೋಗ್ಯದಿಂದ ಬಳಲುತ್ತಿರುವಾಗ, ಹಣಕಾಸಿನ ತೊಂದರೆಯಿದ್ದಾಗ ಚಿಕಿತ್ಸೆ ಪಡೆದುಕೊಳ್ಳಲು ಹಿಂದೆ ಸರಿಯಬಾರದು ಎಂಬ ಉದ್ದೇಶದಿಂದ ಕಿಮ್ಸ್ ಸಹಯೋಗದೊಂದಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರು ಕಿಮ್ಸ್‌ಗೆ ಬಂದು ತಮ್ಮ ಗುರುತಿನ ಚೀಟಿ ತೋರಿಸಿ ಅವರ ವಿವರಗಳನ್ನು ತಿಳಿಸಿ ವೈದ್ಯಕೀಯ ಚಿಕಿತ್ಸೆಗಾಗಿ ದಾಖಲಾದರೆ, ಕಿಮ್ಸ್ ಸಂಸ್ಥೆಯವರು ಚಿಕಿತ್ಸೆ ನೀಡಿ, ಅವರನ್ನು ಗುಣಪಡಿಸಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸುತ್ತಾರೆ.ವೈದ್ಯಕೀಯ ಚಿಕಿತ್ಸೆಯನುಸಾರ ಬಿಲ್ಲನ್ನು ನೌಕರರ ಪರವಾಗಿ ಸಾರಿಗೆ ಸಂಸ್ಥೆಯು ಕಿಮ್ಸ್ ಸಂಸ್ಥೆಯವರಿಗೆ ಭರಿಸುತ್ತದೆ. ಈ ರೀತಿಯಾಗಿ ಅನಾರೋಗ್ಯದಿಂದ ಬಳಲುತ್ತಿರುವ ನೌಕರರು ಯಾವುದೇ ರೀತಿಯ ಅಡಚಣೆ ಇಲ್ಲದೇ ಸಂಸ್ಥೆಯ ಗುರುತಿನ ಪತ್ರವನ್ನು ನೀಡಿ ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವ ಯೋಜನೆ ಇದಾಗಿರುತ್ತದೆ. ಈ ಯೋಜನೆಯನ್ನು ಸಂಸ್ಥೆಯ ನೌಕರರು ಹಾಗೂ ಅವರ ಅವಲಂಬಿತರು ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಈ ವೇಳೆ ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಪ್ರಾಂಶುಪಾಲ ಡಾ. ಈಶ್ವರ ಹೊಸಮನಿ, ಡಾ. ಲಕ್ಮೀಕಾಂತ ಲೋಕರೆ, ಸಂಸ್ಥೆಯ ಇಲಾಖಾ ಮುಖ್ಯಸ್ಥರು, ವಿವಿಧ ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು, ಸಂಸ್ಥೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.