ಶ್ರೀಗಂಧ ಮರದ ತುಂಡುಗಳ ಸಾಗಣೆ: ನಾಲ್ವರು ಕಳ್ಳರ ಬಂಧನ

| Published : Mar 27 2024, 01:02 AM IST

ಶ್ರೀಗಂಧ ಮರದ ತುಂಡುಗಳ ಸಾಗಣೆ: ನಾಲ್ವರು ಕಳ್ಳರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸಪೇಟೆ ನಗರದ ಎಚ್‌ಎಲ್‌ಸಿ ಕಾಲುವೆ ಮೂಲಕ ಬಳ್ಳಾರಿ ರಸ್ತೆ ಕಡೆಗೆ ಶ್ರೀಗಂಧದ ಮರದ ತುಂಡುಗಳನ್ನು ಕಾರು ಮತ್ತು ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಶ್ರೀಗಂಧ ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಶ್ರೀಗಂಧದ ತುಂಡುಗಳನ್ನು ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಪಟ್ಟಣ ಠಾಣೆ ಪೊಲೀಸರು, ಬಂಧಿತರಿಂದ ₹ 30.45 ಲಕ್ಷ ಬೆಲೆಬಾಳುವ 203 ಕೆಜಿ ಶ್ರೀಗಂಧ ಮತ್ತು ₹7 ಲಕ್ಷ ಬೆಲೆ ಬಾಳುವ ಎರಡು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಲ್‌. ಗಂಗಾ ನಾಯ್ಕ (41), ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಹಾರಕನಾಳು ಗ್ರಾಮದ ಮಹಾಂತೇಶ (24), ಬಾಗಲಕೋಟ ಜಿಲ್ಲೆಯ ಕಂದಗಲ್ಲು ಗ್ರಾಮದ ಎಚ್‌. ಚೆನ್ನಪ್ಪ (49), ಎಚ್. ರಾಮಣ್ಣ (61) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಅಂತಾರಾಜ್ಯ ಆರೋಪಿಗಳನ್ನು ಪತ್ತೆ ಮಾಡಬೇಕಿರುವ ಹಿನ್ನೆಲೆಯಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಎಸ್ಪಿ ಶ್ರೀಹರಿಬಾಬು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಗರದ ಎಚ್‌ಎಲ್‌ಸಿ ಕಾಲುವೆ ಮೂಲಕ ಬಳ್ಳಾರಿ ರಸ್ತೆ ಕಡೆಗೆ ಶ್ರೀಗಂಧದ ಮರದ ತುಂಡುಗಳನ್ನು ಕಾರು ಮತ್ತು ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಮಾ.22ರ ಮಧ್ಯಾಹ್ನ 12:30ಕ್ಕೆ ಪಟ್ಟಣ ಠಾಣೆ ಪಿಐ ಲಖನ್‌ ಆರ್‌. ಮಸಗುಪ್ಪಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಶ್ರೀಗಂಧದ ತುಂಡು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದರು. ಈ ವೇಳೆ ಆರೋಪಿಗಳು ಪರಾರಿಯಾಗಿದ್ದರು. ಎಸ್ಪಿ ಶ್ರೀಹರಿಬಾಬು ವಿಶೇಷ ತಂಡ ರಚಿಸಿದ್ದರು. ಎಎಸ್ಪಿ ಸಲೀಮ್ ಪಾಷಾ, ಡಿವೈಎಸ್ಪಿ ಶರಣಬಸವೇಶ್ವರ, ಪಿಐ ಲಖನ್‌ ಆರ್‌. ಮಸಗುಪ್ಪಿ, ಪಿಎಸ್‌ಐ ಅಶೋಕ್‌ ಬೇವೂರು, ಶರಣಪ್ಪ ಕಟ್ಟಿಮನಿ, ಎಎಸ್‌ಐ ಕೆ. ಮಲ್ಲೇಶಪ್ಪ, ಮುಖ್ಯಪೇದೆಗಳಾದ ಶ್ರೀರಾಮರೆಡ್ಡಿ, ಪ್ರಕಾಶ ಕಳಕರೆಡ್ಡಿ, ಬಿ. ರಾಘವೇಂದ್ರ, ಲಿಂಗರಾಜ್‌, ನಾಗರಾಜ್‌, ಪೇದೆಗಳಾದ ಪರಶು ನಾಯ್ಕ, ಜಿ. ಕೊಟ್ರೇಶ್, ಗೋವರ್ಧನ, ಜೆ. ಫಕ್ಕೀರಪ್ಪ, ದೇವೇಂದ್ರ, ಮಲಕಾಜಪ್ಪ, ಕುಮಾರ ನಾಯ್ಕ, ಮಹೇಶ್‌ ಜೋಳದ ಅವರು ಕಾರ್ಯಾಚರಣೆ ನಡೆಸಿ ಮಾ. 24ರಂದು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಎಸ್ಪಿ ಶ್ರೀಹರಿಬಾಬು ಅವರು ಪ್ರಶಂಸಿಸಿದ್ದಾರೆ. ಜತೆಗೆ ಬಹುಮಾನ ಘೋಷಿಸಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.