ಬಿಟ್ಟುಹೋಗಿದ್ದ ಚಿನ್ನಾಭರಣದ ಚೀಲ ಮರಳಿಸಿದ ಸಾರಿಗೆ ಸಿಬ್ಬಂದಿ

| Published : Oct 16 2025, 02:01 AM IST

ಸಾರಾಂಶ

ವಾಕರಸಾ ಸಂಸ್ಥೆಯ ಸಾರಿಗೆ ಬಸ್ ಒಂದರಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ೨೦ ಗ್ರಾಂ ಚಿನ್ನದ ಆಭರಣಗಳನ್ನು ಬಸ್ ಚಾಲಕ ಮತ್ತು ನಿರ್ವಾಹಕರು ಮರಳಿಸಿದ್ದಾರೆ.

ಶಿಗ್ಗಾಂವಿ: ವಾಕರಸಾ ಸಂಸ್ಥೆಯ ಸಾರಿಗೆ ಬಸ್ ಒಂದರಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ೨೦ ಗ್ರಾಂ ಚಿನ್ನದ ಆಭರಣಗಳನ್ನು ಬಸ್ ಚಾಲಕ ಮತ್ತು ನಿರ್ವಾಹಕರು ಮರಳಿಸಿದ್ದಾರೆ.

ನಿರ್ವಾಹಕ ನರೇಂದ್ರಕುಮಾರ ಹಾಗೂ ಚಾಲಕ ವಿಜಯಸಿಂಗ್ ಪ್ರಾಮಾಣಿಕತೆ ಮೆರೆದ ಸಿಬ್ಬಂದಿಯಾಗಿದ್ದು, ಹಾವೇರಿ ಘಟಕದ ಕೆಎ ೨೭, ೦೯೦೦ ಬಸ್ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಹೊರಟಿತ್ತು. ಹುಬ್ಬಳ್ಳಿಯಿಂದ ಬಸ್ಸಿನಲ್ಲಿ ಬಂದ ಮಹಿಳೆ ಶಿಗ್ಗಾಂವಿ ಬಸ್ ನಿಲ್ದಾಣದಲ್ಲಿ ತಮ್ಮ ಚಿನ್ನಾಭರಣ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದರು. ಇದನ್ನು ಹಾವೇರಿಯಲ್ಲಿ ಗಮನಿಸಿದ ನಿರ್ವಾಹಕ ಹಾಗೂ ಚಾಲಕರು ಹಾವೇರಿಯ ಕೇಂದ್ರೀಯ ಬಸ್ ನಿಲ್ದಾಣದ ನಿಲ್ದಾಣಾಧಿಕಾರಿ ಕೆ.ಎಂ. ಲಮಾಣಿ ಹಾಗೂ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚೀಲ ಒಪ್ಪಿಸಿದರು.

ಚೀಲದಲ್ಲಿ ಸಿಕ್ಕ ಬಸ್‌ ಟಿಕೆಟ್‌ ಆಧಾರದಲ್ಲಿ ಬಸ್‌ ಪತ್ತೆ ಹಚ್ಚಲಾಯಿತು. ಶಿಗ್ಗಾಂವಿ ನಿಲ್ದಾಣ ನಿಯಂತ್ರಣಾಧಿಕಾರಿ ರಾಜೇಸಾಬ ಪಿ. ನದಾಫ ಅವರಿಗೆ ಮಹಿಳೆ ಪತ್ತೆಹಚ್ಚುವಲ್ಲಿ ಕಡಲೆ ಮಾರುವ ಹುಡುಗ ಹುಸಮಾನ ಮದ್ರಾಸಿ, ಎಗ್ ರೈಸ್ ಅಂಗಡಿ ಮಾಲೀಕ ಇಬ್ರಾಹಿಮ ಮುಬಾರಕ ಸುಳಿವು ನೀಡಿದರು.

ಬಳಿಕ ಚಿನ್ನಾಭರಣ ಕಳೆದುಕೊಂಡಿದ್ದ ಜಾಕಿಯಾ ಸೌದಾಗಾರ ಎಂಬ ಮಹಿಳೆಯನ್ನು ಹಾವೇರಿ ವಿಭಾಗೀಯ ಕಚೇರಿಗೆ ಕರಸಿ, ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜೆ. ಹಾಗೂ ವಿಭಾಗೀಯ ಸಾರಿಗೆ ಅಧಿಕಾರಿ ಅಶೋಕ ಪಾಟೀಲ ಅವರು ಮಹಿಳೆಗೆ ಚೀಲ ಮತ್ತು ಅದರಲ್ಲಿನ್ನ ಚಿನ್ನಾಭರಣಗಳನ್ನು ಮರಳಿಸಿದ್ದಾರೆ.

ಚಾಲಕ ವಿಜಯಸಿಂಗ್, ಸಹಕರಿಸಿದ ನಿಲ್ದಾಣಾಧಿಕಾರಿ ರಾಜೇಸಾಬ ಪಿ. ನದಾಫ, ಇಬ್ರಾಹಿಂ ಮುಬಾರಕ, ಹುಸಮಾನ ಮದ್ರಾಸಿ ಅವರನ್ನು ಪಟ್ಟಣದ ನಿವಾಸಿಗಳು ಸನ್ಮಾನಿಸಿದರು. ಲಕ್ಷ್ಮೀಕಾಂತ ಮಿರಜಕರ, ಗೌಸ್‌ ಅಗಸನಮಟ್ಟಿ, ಅಬ್ದುಲ್‌ ಮಜೀದ ಸೌದಾಗರ, ಆಸಿಫ್‌ ಮಾರಂಬಿಡ, ಹಜರತ್ತಲಿ ತೌಕಲ್ಲಿ ಇತರರಿದ್ದರು.