ಸಾರಾಂಶ
ಕುಮಟಾ: ಸಾರಿಗೆ ನಿಗಮದ ನಮ್ಮ ವಿಭಾಗಕ್ಕೆ ₹೨೮೭ ಕೋಟಿಯನ್ನು ಸರ್ಕಾರ ಭರಿಸಬೇಕಿದೆ. ಸರ್ಕಾರದ ಬಳಿ ದುಡ್ಡಿಲ್ಲ, ಶಕ್ತಿ ಯೋಜನೆಯಿಂದ ಎಲ್ಲ ಹದಗೆಟ್ಟಿದೆ. ಹೊಸ ಬಸ್‌ಗಳಿಲ್ಲ, ಸಾರಿಗೆ ಘಟಕಗಳು ಅಸಹಾಯಕವಾಗಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಪುರಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನಿಗಮ ನಷ್ಟದಲ್ಲಿದೆ, ಸಿಬ್ಬಂದಿ, ಬಿಡಿಭಾಗ, ನಿರ್ವಹಣೆ ವೆಚ್ಚ ಸರಿದೂಗಿಸಲಾಗುತ್ತಿಲ್ಲ. ಶಿರಗುಂಜಿಗೆ ಮಣಕೋಣ ಮೂಲಕ ಪ್ರತಿನಿತ್ಯ ಮಧ್ಯಾಹ್ನ ೩;೪೫ಕ್ಕೆ ಹೊಸ ಬಸ್ ಬಿಡಲಾಗುವುದು, ಆದರೆ, ಘಟಕದಲ್ಲಿ ೨೬ ಮಂದಿ ಚಾಲಕ, ನಿರ್ವಾಹಕರ ಕೊರತೆಯಿಂದಾಗಿ ಜನರ ಬೇಡಿಕೆಯಂತೆ ದೀವಗಿಗೆ ಪ್ರತ್ಯೇಕ ಬಸ್ ಬಿಡಲಾಗದು ಎಂದು ಸಾರಿಗೆ ಘಟಕದ ಅಧಿಕಾರಿ ತಿಳಿಸಿದರು. ಜಿ.ಐ. ಹೆಗಡೆ ತೊರ್ಕೆಯಲ್ಲಿ ಸ್ಥಳೀಯರ ಅವಶ್ಯಕತೆಗೆ ತಕ್ಕಂತೆ ಬಸ್ ನಿಲುಗಡೆ ಮಾಡುವಂತೆ ಕೋರಿದರು.
ಗ್ರಾಮ ಪಂಚಾಯಿತಿಗಳಲ್ಲಿ ೧೫ನೇ ಹಣಕಾಸು ಅನುದಾನ ಬಳಕೆಯಾಗದೇ ಉಳಿದಿದೆ. ಡಿಸೆಂಬರ್‌ನಲ್ಲಿ ಅಂದಾಜು ಮಾಡಿ ಮಾರ್ಚ್‌ನಲ್ಲಿ ಮುಗಿಸುವ ತರಾತುರಿಯಿಂದಾಗಿ ಹೀಗಾಗುತ್ತಿದೆ. ಇದನ್ನು ಶೀಘ್ರ ಬಳಸುವಂತಾಗಲಿ ಎಂದರು.ಈ ವೇಳೆ ಹಾಜರಿದ್ದ ಪಿಡಿಒಗಳನ್ನು ವಿಚಾರಿಸಲಾಗಿ ₹೮ ಕೋಟಿಗೂ ಹೆಚ್ಚು ೧೫ನೇ ಹಣಕಾಸು ಅನುದಾನ ಇರುವುದು ಬೆಳಕಿಗೆ ಬಂತು.
ಬಗ್ಗೋಣ ಗಣೇಶ ಭಟ್ಟ ಮಾತನಾಡಿ, ತಾಲೂಕಾಸ್ಪತ್ರೆಯಲ್ಲಿ ಪ್ರಯೋಗಾಲಯ ಸುಸಜ್ಜಿತವಾಗೇನೋ ಇದೆ. ಆದರೆ, ತಂತ್ರಜ್ಞರೇ ಇಲ್ಲ, ಎಕ್ಸರೇಗೆ ಒಬ್ಬರೇ ಇದ್ದಾರೆ. ಬಡವರು ದುಬಾರಿ ಲ್ಯಾಬ್‌ಗಳನ್ನೇ ಅವಲಂಬಿಸಬೇಕಿದೆ. ಸಮಸ್ಯೆ ಪರಿಹರಿಸಿ ಎಂದರು.ಪ್ರತಿಕ್ರಿಯಿಸಿದ ಶಾಸಕ ಶೆಟ್ಟಿ, ಸಿಬ್ಬಂದಿ ಕೊರತೆ ಇದೆ, ವೈದ್ಯರು ಬರಲು ಸಿದ್ಧರಿಲ್ಲ. ಸರ್ಕಾರದ ಹಣಕಾಸು ವಿಭಾಗದ ಮಂಜೂರಿಯಿಲ್ಲದೇ ತಂತ್ರಜ್ಞರನ್ನು ಹೊಂದುವುದು ಸಾಧ್ಯವಿಲ್ಲ. ಹುಬ್ಬಳ್ಳಿಯ ಕೆಎಂಸಿಯಿಂದ ವೈದ್ಯರ ಡೆಪ್ಯೂಟ್ ಸಾಧ್ಯತೆಯನ್ನು ಪರಿಶೀಲಿಸಲಾಗುತ್ತಿದೆ. ಇಲ್ಲಿ ಕಷ್ಟಪಟ್ಟು ಟ್ರಾಮಾ ಸೆಂಟರ್ ಕಟ್ಟಲಾಗುತ್ತಿದೆ. ಇದಕ್ಕೂ ವೈದ್ಯರು, ಸಿಬ್ಬಂದಿ ಸಮಸ್ಯೆ ಎದುರಾಗಿದ್ದು ಪ್ರಯತ್ನ ಮಾಡುತ್ತಿದ್ದೇನೆ. ಸರ್ಕಾರದ ಹಣಕಾಸು ವಿಭಾಗದ ಅನುಮತಿಯಿಲ್ಲದೇ ಅಸಾಧ್ಯ ಎಂದರು.
ಹೆಸ್ಕಾಂನವರು ಮುಂಗಾರಿಗೆ ಮುಂಚೆ ಜಂಗಲ್ ಕಟಿಂಗ್ ಮಾಡದಿರುವುದೇ ಇಂದಿನ ವಿದ್ಯುತ್ ಅವ್ಯವಸ್ಥೆಗೆ ಕಾರಣವಾಗುತ್ತಿದೆ ಎಂದಾಗ, ಹೆಸ್ಕಾಂ ಎಇಇ ರಾಜೇಶ ಮಡಿವಾಳ ಉತ್ತರಿಸಿ, ಸಿಬ್ಬಂದಿ ಕೊರತೆಯ ನಡುವೆಯೂ ಸಾಕಷ್ಟು ಉತ್ತಮ ಸೇವೆ ನೀಡುತ್ತಿದ್ದೇವೆ. ಮಳೆಗಾಲದಲ್ಲಿ ಸಮಸ್ಯೆ ಉದ್ಭವಿಸುತ್ತದೆ. ಹೀಗಾಗಿ, ಗ್ಯಾಂಗ್‌ಮನ್‌ಗಳ ಪೂರೈಕೆಯ ಬೇಡಿಕೆ ಕಳುಹಿಸಲಾಗಿದೆ ಎಂದರು.ಸರ್ಕಾರದ ಇಲಾಖೆಗಳಲ್ಲಿ ಏಜೆಂಟಗಿರಿಗೆ ಕಡಿವಾಣ ಹಾಕಿ ಜನಸಾಮಾನ್ಯರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅಧಿಕಾರಿಗಳು ಸದುಪಯೋಗಪಡಿಸಿಕೊಂಡು ಜನರ ಕೆಲಸ ಮಾಡಿಕೊಡಬೇಕಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಆಕಸ್ಮಿಕ ಮರಣವನ್ನಪ್ಪಿದವರ ಕುಟುಂಬದ ಪರಮೇಶ್ವರ ಗಾವಡಿ, ಶಾಂತಿ ಆಗೇರ, ಮಂಜುನಾಥ ನಾಯ್ಕ, ಭಾರತಿ ಎಚ್. ಗೌಡ ಅವರಿಗೆ ತಲಾ ₹೨ ಲಕ್ಷದಂತೆ ಪರಿಹಾರ ವಿತರಿಸಿದರು.ಸಂಧ್ಯಾ ಸುರಕ್ಷಾ, ವಿಧವಾ ವೇತನದ ಆದೇಶ ಪತ್ರ, ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ವಿತರಿಸಿದರು. ತಾಪಂ ಇಒ ರಾಜೇಂದ್ರ ಭಟ್ ಸ್ವಾಗತಿಸಿದರು. ಯೋಗೇಶ ಕೋಡ್ಕಣಿ ನಿರ್ವಹಿಸಿದರು. ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಸಿಪಿಐ ತಿಮ್ಮಪ್ಪ ನಾಯ್ಕ, ಪುರಸಭೆ ಸದಸ್ಯರಾದ ಮಹೇಶ ನಾಯ್ಕ, ಸಂತೋಷ ನಾಯ್ಕ, ಮೋಹಿನಿ ಗೌಡ, ಸುಮತಿ ಭಟ್, ದಿವಗಿ ಪಂಚಾಯಿತಿ ಅಧ್ಯಕ್ಷ ಜಗದೀಶ ಭಟ್ ಇನ್ನಿತರರು ಇದ್ದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ವಿಚಾರವೇ ಚರ್ಚೆಯ ಮೆನ್ನೆಲೆಗೆ ಬಂದಿದ್ದರಿಂದ ಆರಂಭದಿಂದ ಜನಸ್ಪಂದನಾ ಕಾರ್ಯಕ್ರಮದಡಿ ಜನರ ಅರ್ಜಿ ವಿಚಾರಣೆಗೆ ಮೂರು ತಾಸಿಗೂ ಹೆಚ್ಚು ವಿಳಂಬವಾಯಿತು. ತಹಸೀಲ್ದಾರ್ ಪ್ರವೀಣ ಕರಾಂಡೆ ಮೂರ್ನಾಲ್ಕು ಬಾರಿ ಅರ್ಜಿಗಳನ್ನು ಕೈಗೆತ್ತಿಕೊಂಡು ಅರ್ಜಿ ವಿಚಾರಣೆಗೆ ಸಭೆಯ ಗಮನಸೆಳೆದರು.ಅರ್ಜಿದಾರರ ಹೊರತಾದ ವಿಚಾರಗಳಿಗೂ ಬಳಿಕ ಅವಕಾಶವಿದೆ ಎಂದು ಹಲವು ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲ. ಜನರ ಅರ್ಜಿಗಳ ವಿಚಾರಣೆ ನಡೆಯುವಾಗಲೇ ಜನರು ಗುಂಪುಗುಂಪಾಗಿ ಮುಂದೆ ಬಂದು ಶಾಸಕರನ್ನು ಮಾತಿಗೆಳೆಯುತ್ತಿದ್ದರು. ಅಂತೂ ಜನರಿಂದ ಒಟ್ಟು ೩೭ ಅರ್ಜಿಗಳು ಬಂದಿದ್ದು ಪರಿಶೀಲಿಸಿ ಆಯಾ ಇಲಾಖೆಗಳಿಗೆ ಕ್ರಮಕ್ಕೆ ಸೂಚಿಸಲಾಯಿತು. ಸಂತೆಗುಳಿಯಲ್ಲಿ ರಸ್ತೆ ಅತಿಕ್ರಮಣ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕರು ತಹಸೀಲ್ದಾರರಿಗೆ ಸೂಚಿಸಿದರು. ಸಿದ್ದನಬಾವಿಯಲ್ಲಿ ರಸ್ತೆ ನಿರ್ಮಾಣಕ್ಕೆ ಶ್ರೀಧರ ಭಟ್ ಆಗ್ರಹಿಸಿದರು. ತಹಸೀಲ್ದಾರ್ ಪ್ರವೀಣ ಕರಾಂಡೆ, ಜನಸ್ಪಂದನದಲ್ಲಿ ಪರಿಶೀಲಿಸಿದ ಅರ್ಜಿಗಳು ಜುಲೈ ೧೫ ರೊಳಗೆ ಇತ್ಯರ್ಥಗೊಳ್ಳಬೇಕು ಎಂದರು.