ಅರಣ್ಯ ಮಾರ್ಗದಲ್ಲಿ ಅದಿರು ಸಾಗಣೆಗಿಲ್ಲ ಅನುಮತಿ

| Published : Jan 17 2024, 01:45 AM IST

ಸಾರಾಂಶ

ಅರಣ್ಯ ಪ್ರದೇಶದಲ್ಲಿನ ಮಾರ್ಗದ ಮೂಲಕ ಕಬ್ಬಿಣದ ಅದಿರು ಸಾಗಾಣೆಗೆ ಅನುಮತಿ ನೀಡಲು ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಖಾಸಗಿ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅರಣ್ಯ ಪ್ರದೇಶದಲ್ಲಿನ ಮಾರ್ಗದ ಮೂಲಕ ಕಬ್ಬಿಣದ ಅದಿರು ಸಾಗಾಣೆಗೆ ಅನುಮತಿ ನೀಡಲು ಸರ್ಕಾರ ಮತ್ತು ಅರಣ್ಯ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಖಾಸಗಿ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತಂತೆ ಹೊಸಪೇಟೆಯ ಮೆರ್ಸಸ್‌ ಠಾಕೂರ್ ಇಂಡಸ್ಟ್ರೀಸ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಅರಣ್ಯ ಪ್ರದೇಶದಲ್ಲಿ ತೆಗೆದ ಅದಿರು ಸಾಗಾಣೆಗೆ ಮಾತ್ರ ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾಗುತ್ತದೆ. ತಾನು ಬೇರೆಡೆ ತೆಗೆದಿರುವ ಅದಿರು ಸಾಗಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯವಿಲ್ಲ ಎಂಬ ಅರ್ಜಿದಾರರ ಕಂಪನಿಯ ವಾದವನ್ನು ತಳ್ಳಿಹಾಕಿರುವ ನ್ಯಾಯಾಲಯ, ‘ಕರ್ನಾಟಕ ಅಕ್ರಮ ಗಣಿಗಾರಿಕೆ, ಸಾಗಾಣೆ, ದಾಸ್ತಾನು ನಿಯಮ- 2011’ರ ನಿಯಮ 3 ಪ್ರಕಾರ ಅನುಮತಿ ಅಗತ್ಯವಾಗಿ ಪಡೆಯಲೇಬೇಕು ಎಂದು ಸ್ಪಷ್ಟಪಡಿಸಿದೆ.ಅಲ್ಲದೆ, ಅರಣ್ಯೇತರ ಪ್ರದೇಶದಲ್ಲಿ ತೆಗೆದ ಅದಿರನ್ನು ಅರಣ್ಯ ಮಾರ್ಗದಲ್ಲಿ ಸಾಗಣೆ ಮಾಡಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು ಎಂಬ ಸರ್ಕಾರದ ಆದೇಶವನ್ನು ಎತ್ತಿಹಿಡಿದಿರುವ ವಿಭಾಗೀಯ ಪೀಠ, ಖನಿಜ ಸಾಗಾಣೆಯಿಂದ ಆಗಬಹುದಾದ ಸಂಭವನೀಯ ಹಾನಿ ಅಥವಾ ನಷ್ಟವನ್ನು ತಪ್ಪಿಸುವುದೂ ಸಹ ಅರಣ್ಯ ಸಂರಕ್ಷಣೆಯ ಭಾಗವಾಗಿದೆ ಎಂದು ಹೇಳಿ ಅರ್ಜಿ ವಜಾಗೊಳಿಸಿದೆ. ಹೊಸಪೇಟೆಯಲ್ಲಿ ಮೆರ್ಸಸ್‌ ಠಾಕೂರ್‌ ಇಂಡ್ರಸ್ಟ್ರೀಸ್‌ ಗಣಿಗಾರಿಕೆ ಚಟುವಟಿಕೆ ನಡೆಸುತ್ತಿದೆ. 20203ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದ ಕಂಪನಿ, ಪಕ್ಕದ ರೈಲ್ವೇ ನಿಲ್ದಾಣದಿಂದ ಕೈಗಾರಿಕೆ ಆವರಣಕ್ಕೆ ಅರಣ್ಯ ಮಾರ್ಗದಡಿ ಅದಿರು ಸಾಗಣೆ ಮಾಡಲು ತನ್ನಿಂದ ಅನುಮತಿ ಪಡೆಯಬೇಕು ಎಂಬುದಾಗಿ ಒತ್ತಾಯಿಸದಂತೆ ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿತ್ತು.