ಸಾರಾಂಶ
ಜಮಖಂಡಿ ತಾಲೂಕಿನ ಚಿಕ್ಕಜಂಬಗಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಚಿರತೆಯ ಸೆರೆಗೆ ಕಸರತ್ತು ನಡೆಸಿದ್ದಾರೆ. ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಓಡಾಟ ನಡೆಸಿದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಅದರಂತೆ ಬೋನ್‌ಗಳನ್ನು ಇರಿಸಲಾಗಿದ್ದು, ಚಿರತೆ ಸೆರೆ ಹಿಡಿಯಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಡಿಎಫ್‌ಓ ಮಹೇಶ ಗುಡಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಚಿಕ್ಕಜಂಬಗಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹ ಚಿರತೆಯ ಸೆರೆಗೆ ಕಸರತ್ತು ನಡೆಸಿದ್ದಾರೆ. ಶುಕ್ರವಾರ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಓಡಾಟ ನಡೆಸಿದ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದೆ. ಅದರಂತೆ ಬೋನ್‌ಗಳನ್ನು ಇರಿಸಲಾಗಿದ್ದು, ಚಿರತೆ ಸೆರೆ ಹಿಡಿಯಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಡಿಎಫ್‌ಓ ಮಹೇಶ ಗುಡಿ ತಿಳಿಸಿದ್ದಾರೆ.ತಾಲೂಕಿನ ಚಿಕ್ಕಜಂಬಗಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ತೋಟದ ಮನೆಗಳಲ್ಲಿ ವಾಸವಾಗಿರುವ ರೈತ ಕುಟುಂಬಗಳು ಸಾಕು ಪ್ರಾಣಿ, ಜಾನುವಾರು ರಕ್ಷಿಸಿಕೊಳ್ಳಲು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುತ್ತಿದ್ದಾರೆ ಎಂದಿದ್ದಾರೆ.
ಚಿರತೆ ಪರಿವಾರ ಸಮೇತ ವಾಸವಾಗಿರುವ ಶಂಕೆ ವ್ಯಕ್ತವಾಗಿದ್ದು, ಮೂರು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಹಾಗೂ ಎರಡು ಸ್ಥಳದಲ್ಲಿ ಬೋನ್‌ಗಳನ್ನು ಅಳವಡಿಸಲಾಗಿದೆ. ತೋಟದ ಮನೆಗಳಲ್ಲಿ ವಾಸವಾಗಿರುವ ರೈತ ಕುಟುಂಬಗಳಿಗೆ ರಾತ್ರಿ ಹೊತ್ತು ಒಂಟಿಯಾಗಿ ಸಂಚರಿಸದಂತೆ ಸೂಚನೆ ನೀಡಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಒಬ್ಬರಿಗಿಂತ ಹೆಚ್ಚು ಜನ ಸೇರಿಕೊಂಡು ಸಂಚರಿಸಲು ತಿಳಿಸಲಾಗಿದೆ. ಆತ್ಮ ರಕ್ಷಣೆಗೆ ಬಡಿಗೆ ಬ್ಯಾಟರಿಗಳನ್ನು ಹಿಡಿದುಕೊಂಡು ಸಂಚರಿಸಲು ಹೇಳಲಾಗಿದೆ. ಮೇಕೆ, ಟಗರು, ನಾಯಿ, ಹಸು ಹಾಗೂ ಎಮ್ಮೆಯ ಕರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಹೇಳಲಾಗಿದೆ. ಗ್ರಾಮಸ್ಥರಿಗೂ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಚಿರತೆಗಳು ಪ್ರತಿದಿನ 3 ರಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ಸಂಚಾರ ನಡೆಸುತ್ತವೆ. ಹೆಚ್ಚಾಗಿ ಆಹಾರ ಅನ್ವೇಷಣೆಗೆ ಹೊರಡುತ್ತವೆ. ಆದ್ದರಿಂದ 6 ಕಿಮೀ ವ್ಯಾಪ್ತಿಯಲ್ಲಿ ಜನರು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.