ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ನಗರದಲ್ಲಿ ಸುಸಜ್ಜಿತ, ಅತ್ಯಾಧುನಿಕ ಟ್ರಾಮಾ ಕೇರ್‌ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಸೂಕ್ತ ಪ್ರಸ್ತಾವನೆಯನ್ನು ತುರ್ತಾಗಿ ಕಳಿಸಿಕೊಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ನಗರದಲ್ಲಿ ಸುಸಜ್ಜಿತ, ಅತ್ಯಾಧುನಿಕ ಟ್ರಾಮಾ ಕೇರ್‌ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಸೂಕ್ತ ಪ್ರಸ್ತಾವನೆಯನ್ನು ತುರ್ತಾಗಿ ಕಳಿಸಿಕೊಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

2025 ಜುಲೈ 11ರಂದೇ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು, ಮಂಡ್ಯದಲ್ಲಿ ತುರ್ತು ಚಿಕಿತ್ಸಾ ಘಟಕ (ಟ್ರಾಮಾ ಸೆಂಟರ್) ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ತುರ್ತು ಅಗತ್ಯವಿದೆ. ಇದಕ್ಕಾಗಿ ಕ್ರೋಢೀಕೃತ ಯೋಜನೆಯೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಕೂಡಲೇ ಕಳಿಸುವಂತೆ ಕೋರಿದ್ದರು.

ಸಚಿವ ಕುಮಾರಸ್ವಾಮಿ ಅವರು ಈಗಾಗಲೇ ತಾವು ಪ್ರತಿನಿಧಿಸುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಜನರ ಅನುಕೂಲಕ್ಕಾಗಿ ಟ್ರಾಮಾ ಕೇಂದ್ರ ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣದ ಅಗತ್ಯವನ್ನು ಮನಗಂಡಿದ್ದು, ಈ ಮೊದಲೇ ಜಿಲ್ಲೆಯ ಉನ್ನತ ಅಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇದೀಗ ಪ್ರಸ್ತಾವನೆ ಕಳಿಸುವುದರ ಜೊತೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವಂತೆ ಹೇಳಿದ್ದಾರೆ.

ಹೃದಯಾಘಾತ, ರಸ್ತೆ ಅಪಘಾತ ಸೇರಿ ಯಾವುದೇ ತುರ್ತು ಆರೋಗ್ಯ ಸಮಸ್ಯೆಗೆ ಇಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ದೊರೆಯಬೇಕು. ಯೋಜನೆಗೆ ಆಗುವ ಅಷ್ಟೂ ವೆಚ್ಚದ ಅನುದಾನವನ್ನು ಕೇಂದ್ರದಿಂದಲೇ ತರುವ ಪ್ರಯತ್ನ ಮಾಡಲಾಗುವುದು. ರಾಜ್ಯ ಸರ್ಕಾರ ಸೂಕ್ತ ಜಾಗ ನೀಡಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದ್ದಾರೆ.ಮಂಡ್ಯ ಜನರ ಬಹುದಿನಗಳ ನಿರೀಕ್ಷೆ

ಮಂಡ್ಯದಲ್ಲಿ ಸೂಪರ್ ಸ್ಪೆಶಾಲಿಟ ಆಸ್ಪತ್ರೆ ಸ್ಥಾಪನೆ ಮಾಡಬೇಕು ಎಂಬುದು ಜನರ ಬಹುದಿನಗಳ ಬೇಡಿಕೆಯಾಗಿದೆ. ನಾನು ಸಂಸದನಾದ ಮೇಲೆ ಈ ಬಗ್ಗೆ ಕಾರ್ಯೋನ್ಮುಖನಾಗಿದ್ದು, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಯಾವುದೇ ತುರ್ತು ಚಿಕಿತ್ಸೆಗೆ ಜಿಲ್ಲೆಯ ಜನರು ಮೈಸೂರು ಅಥವಾ ಬೆಂಗಳೂರಿಗೆ ಹೋಗಬೇಕಾಗುತ್ತದೆ. ಇದನ್ನು ತಪ್ಪಿಸಲು ಮಂಡ್ಯ ನಗರದಲ್ಲಿಯೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲೇಬೇಕಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದ್ದಾರೆ.

ಮಂಡ್ಯ ವೈದ್ಯಕೀಯ ವಿಜ್ಙಾನ ಸಂಸ್ಥೆ (ಮಿಮ್ಸ್) ಆವರಣದಲ್ಲಿಯೇ ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವುದು ಜಿಲ್ಲೆಯ ಜನರ ಬಯಕೆಯಾಗಿದೆ. ಅಲ್ಲೇ ನಿರ್ಮಿಸುವುದು ಸೂಕ್ತ ನಿರ್ಧಾರವಾಗಲಿದೆ. ಹೀಗಾಗಿ ಮಿಮ್ಸ್ ಆವರಣದಲ್ಲಿಯೇ ಸರ್ಕಾರ ಸೂಕ್ತ ಜಾಗ ನೀಡಬೇಕು ಎಂದು ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.

ಸದ್ಯದ ಸ್ಥಿತಿಯಲ್ಲಿ ಪ್ರತಿ ದಿನ ಮಿಮ್ಸ್‌ನಲ್ಲಿ 2000 ರಿಂದ 2500 ಜನರು ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಈ ಭಾರೀ ಸಂಖ್ಯೆಯಿಂದ ಆಸ್ಪತ್ರೆ, ವೈದ್ಯರ ಮೇಲೆ ಒತ್ತಡ ಹೆಚ್ಚಾಗಿದೆ. ಜತೆಗೆ, ಈ ದಿನಗಳಲ್ಲಿ ಉದ್ಭವವಾಗುತ್ತಿರುವ ಕಠಿಣ ಆರೋಗ್ಯ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ನೀಡುವುದಕ್ಕೆ ಅಗತ್ಯವಿರುವ ವೈದ್ಯಕೀಯ ಪರಿಕರಗಳು, ಕಟ್ಟಡದ ಸೌಲಭ್ಯ, ಶಸ್ತ್ರಚಿಕಿತ್ಸಾ ಸೌಲಭ್ಯಗಳು ಲಭ್ಯವಿಲ್ಲ ಎಂದು ಜನರಿಂದ ನನಗೆ ದೂರುಗಳು ಬಂದಿವೆ. ನಾನು ಸ್ವತಃ ಮಿಮ್ಸ್ʼಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರೋಗಿಗಳು ದೂರು ನೀಡಿದ್ದಾರೆ. ಹೀಗಾಗಿ ಜಿಲ್ಲೆಯ ಜನರ ಉತ್ತಮ ಆರೋಗ್ಯಕ್ಕಾಗಿ ಮಂಡ್ಯ ನಗರದಲ್ಲಿ ಸುಸಜ್ಜಿತ ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಲೆಶಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಅಗತ್ಯವಿದೆ. ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಸೂಕ್ತ ಅಗತ್ಯ ಸಹಕಾರ ಬೇಕಿದೆ ಎಂದು ಕೇಂದ್ರ ಸಚಿವರು ಹೇಳಿದರು.ವಿವಾದ ಬಗೆಹರಿಸಲಿ

ತಮಿಳು ಕಾಲೋನಿ ವಿವಾದ ಬಗೆಹರಿದು ಜಾಗ ಸಿಕ್ಕರೆ ಪಿಎಂಎಸ್ಎಸ್‌ವೈ ಯೋಜನೆಯಡಿ ಕೇಂದ್ರದಿಂದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ತರಬಹುದು ಎಂದು ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ ಅವರು ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ. ಕೂಡಲೇ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲಿ ಎಂದು ಸಚಿವರು ತಿಳಿಸಿದ್ದಾರೆ.