ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೇಖಕ್ ನೋಟ್ ಬುಕ್ಸ್ ಮತ್ತು ಮದ್ಯ ಮಾರಾಟ ಮಳಿಗೆಗೆ ಖ್ಯಾತಿ ಗಳಿಸಿರುವ ಸರ್ಕಾರಿ ಸ್ವಾಮ್ಯದ ‘ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್’ (ಎಂಎಸ್‌ಐಎಲ್) ಇನ್ನು ಮುಂದೆ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಬುಕ್ಕಿಂಗ್ ಮೂಲಕ ತನ್ನ ಉದ್ಯಮ ವಿಸ್ತರಣೆಗೆ ಮುಂದಾಗಿದೆ.ದೇಶ-ವಿದೇಶಗಳ ಪ್ರವಾಸಿ ತಾಣಗಳು, ಧಾರ್ಮಿಕ ತಾಣಗಳ ಪ್ಯಾಕೇಜ್ ಟೂರ್ ಜೊತೆಗೆ ಪ್ರವಾಸಿಗರ ‘ಇಚ್ಛೆಯ ತಾಣ’ಗಳಿಗೆ ಕರೆದೊಯ್ಯುವ ಅವಕಾಶಗಳನ್ನು ನೀಡಲಿದೆ.
ಒತ್ತಡವಿಲ್ಲದೇ ಸಂತೋಷದಿಂದ ಪ್ರವಾಸ ಕೈಗೊಳ್ಳಲು ಅನುಕೂಲವಾಗುವಂತೆ ಮನೆಯಿಂದಲೇ ಪ್ರವಾಸಿಗರನ್ನು ಪಿಕಪ್ ಮಾಡಲಾಗುತ್ತದೆ. ಹಿರಿಯ ನಾಗರಿಕರು ಸೇರಿದಂತೆ ಅಗತ್ಯ ಇದೆ ಎನ್ನುವವರಿಗೆ ಪ್ರವಾಸದ ಉದ್ದಕ್ಕೂ ಗೈಡ್ ಮಾದರಿಯಲ್ಲಿ ಒಬ್ಬ ವ್ಯಕ್ತಿಯನ್ನು ನಿಯೋಜಿಸಲಾಗುತ್ತದೆ.ಇಎಂಐ ಅವಕಾಶ, ಲಕ್ಕಿ ಡ್ರಾ:
ಪ್ರವಾಸಕ್ಕೆ ತೆರಳಲು ಬಯಸುವವರು ಹಣ ಹೊಂದಿಸುವ ಚಿಂತೆಯನ್ನು ದೂರ ಮಾಡಲು ಕಂತಿನ ಮೇಲೆ ಪ್ರತಿ ತಿಂಗಳು ಹಣ ಪಾವತಿಸುವ (ಇಎಂಐ) ಅವಕಾಶವನ್ನು ನೀಡಲಾಗುತ್ತದೆ. ಇದರಿಂದ ಗ್ರಾಹಕರಿಗೆ ಹೊರೆಯಾಗುವುದಿಲ್ಲ. ಪ್ರವಾಸದ ಕೆಲವು ತಿಂಗಳು ಮೊದಲು ಲಕ್ಕಿ ಡ್ರಾ ಎತ್ತಲಾಗುತ್ತದೆ. ವಿಜೇತರು ಉಳಿದ ಕಂತುಗಳನ್ನು ಕಟ್ಟುವ ಅಗತ್ಯ ಇರುವುದಿಲ್ಲ. ಸಂಸ್ಥೆಯಿಂದಲೇ ಭರಿಸಲಾಗುತ್ತದೆ ಎಂದು ಎಂಎಸ್‌ಐಎಲ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವಿಭಾಗದ ವ್ಯವಸ್ಥಾಪಕ ರವಿಕುಮಾರ್ ತಿಳಿಸಿದರು.ಸರ್ಕಾರಿ ನೌಕರರಿಗಾಗಿ ವಿಶೇಷ ಇಎಂಐ ಯೋಜನೆಯನ್ನು ರೂಪಿಸಲಾಗುತ್ತಿದೆ. ಪ್ರವಾಸ ಮೊತ್ತದಲ್ಲಿ ಶೇ.25ರಷ್ಟು ಮಾತ್ರ ಮುಂಗಡವಾಗಿ ಕಟ್ಟಿಸಿಕೊಂಡು ಉಳಿದ ಹಣವನ್ನು ಪ್ರವಾಸದ ಬಳಿಕ ಇಎಂಐ ಮೂಲಕ ಪಾವತಿಸಬಹುದು. ಪ್ರವಾಸದ ವೇಳೆ ಹಲವರಿಗೆ ಊಟದ ಸಮಸ್ಯೆ ಕಾಡುತ್ತದೆ. ಅವರಿಗಾಗಿ ಮನೆಯಲ್ಲಿ ಮಾಡಿಕೊಳ್ಳುವಂತೆ ಚಪಾತಿ, ಮುದ್ದೆ, ರೊಟ್ಟಿ ಊಟವನ್ನು ಒದಗಿಸುವ ಯೋಜನೆಯನ್ನು ಕೂಡ ರೂಪಿಸಲಾಗುತ್ತಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಈ ಯೋಜನೆ ಅನುಷ್ಠಾನ ವಿಳಂಬವಾಗಿದ್ದು, ಜೂನ್ ಎರಡನೇ ವಾರದಲ್ಲಿ ಪ್ರವಾಸ ಬುಕ್ಕಿಂಗ್ ಆರಂಭಿಸುವ ಗುರಿ ಇದೆ. ಅದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ರವಿಕುಮಾರ್ ತಿಳಿಸಿದರು.
ಎಂಎಸ್‌ಐಎಲ್ ಟ್ರಿಪ್ ಪ್ರಮುಖಾಂಶಗಳು- ಅಯೋಧ್ಯೆ, ಕಾಶಿ ಸೇರಿದಂತೆ ಕಾಶ್ಮೀರದಿಂದ- ಕನ್ಯಾಕುಮಾರಿವರೆಗಿನ ಪ್ರವಾಸಿ ತಾಣಗಳಿಗೆ ಟ್ರಿಪ್
- ಯುರೋಪ್ ಸೇರಿದಂತೆ ವಿದೇಶ ಪ್ರವಾಸ ಪ್ಯಾಕೇಜ್- ಪ್ರವಾಸಿಗರನ್ನು ಮನೆಯಿಂದ ಪಿಕಪ್ ಮತ್ತು ಡ್ರಾಪ್
- ಪ್ರವಾಸಿಗರ ಇಚ್ಛೆಯಂತೆ ಟ್ರಿಪ್ ಪ್ಲಾನ್ ಪ್ಯಾಕೇಜ್‌ಗಳು- ಹಿರಿಯ ನಾಗರಿಕರು ಸೇರಿದಂತೆ ಅಗತ್ಯ ಇರುವವರಿಗೆ ಪ್ರವಾಸದ ಉದ್ದಕ್ಕೂ ‘ಗೈಡ್’ ನೆರವು
- ಪ್ರವಾಸ ಆಸಕ್ತರಿಗೆ ಆರ್ಥಿಕ ಹೊರೆ ಎನಿಸದಿರಲು ಸುಲಭ ‘ಇಎಂಐ’ ಅವಕಾಶಗಳು