ಸಾರಾಂಶ
ಪ್ರವಾಸಿ ಮಾರ್ಗದರ್ಶಿಗಳಿಗೆ ಸಲಹೆ । ವರ್ಷದೊಳಗೆ ಕಮಲಾಪುರ ಕೆರೆಯಲ್ಲಿ ಸಮುದ್ರ ವಿಮಾನ ವ್ಯವಸ್ಥೆ
ಕನ್ನಡಪ್ರಭ ವಾರ್ತೆ ಹೊಸಪೇಟೆಪ್ರವಾಸಿಗಳೇ ದೇವರು ಆಗಿದ್ದಾರೆ. ಹಾಗಾಗಿ ಅವರು ಎಷ್ಟೇ ಗಲಾಟೆ ಮಾಡಿದರೂ ತಾಳ್ಮೆಯಿಂದ ನಡೆದುಕೊಳ್ಳಬೇಕು. ಈ ಮೂಲಕ ಹಂಪಿ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರವಾಸಿ ಮಾರ್ಗದರ್ಶಿಗಳು (ಗೈಡ್‌ಗಳು) ಸಹಕರಿಸಬೇಕು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.
ವಿಜಯನಗರ ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಚಿಕ್ಕಬಳ್ಳಾಪುರದ ಅಕರ್ವ ಎಂಟರ್‌ಪ್ರೈಸಸ್ ವತಿಯಿಂದ ನಗರದ ಮಲ್ಲಿಗಿ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರವಾಸಿ ಮಾರ್ಗದರ್ಶಿ ತರಬೇತುದಾರರಿಗೆ ಒಂದು ದಿನದ ಪುನಶ್ಚೇತನ ತರಬೇತಿ ಕಾರ್ಯಾಗಾರ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಾವು ಈ ಹಿಂದೆ ಹೆಂಡ, ಸಾರಾಯಿ ಮಾರುತ್ತಿದ್ದಾಗ, ಸಾರಾಯಿಯನ್ನೇ ಎಲ್ಲಮ್ಮದೇವಿ ಎಂದು ಆರಾಧಿಸುತ್ತಿದ್ದೇವು. ಹಾಗಾಗಿ ಪ್ರವಾಸಿ ಮಾರ್ಗದರ್ಶಿಗಳು ಪ್ರವಾಸಿಗರನ್ನು ದೇವರು ಎಂದು ಕಾಣಬೇಕು. ಅವರು ದೂರದಿಂದ ಬಂದು ಇಲ್ಲಿ ಹಣ ಖರ್ಚು ಮಾಡಿ, ನಮಗೆ ಜೀವನಕ್ಕೆ ಅನುಕೂಲ ಮಾಡಿಕೊಡುತ್ತಾರೆ. ಪ್ರವಾಸಿಗರನ್ನು ನಾವು ಅವಲಂಬಿಸಿದ್ದೇವೆ ಎಂಬುದನ್ನು ಮರೆಯಬಾರದು ಎಂದರು.ಹಂಪಿ ಧಾರ್ಮಿಕ ಕ್ಷೇತ್ರ ಆಗಿದೆ. ತುಂಗಭದ್ರಾ ನದಿ, ಭುವನೇಶ್ವರಿ ತಾಯಿ, ಪಂಪಾ ವಿರೂಪಾಕ್ಷೇಶ್ವರ ದೇವರ ಬಗ್ಗೆ ತಿಳಿಯಪಡಿಸಬೇಕು. ನೆಲದಲ್ಲಿ ಸಾಕ್ಷಾತ್ ಶಿವ ತಪ್ಪಸ್ಸು ಮಾಡಿದ್ದಾನೆ. ಇದನ್ನು ಪ್ರವಾಸಿಗರಿಗೆ ಮನದಟ್ಟು ಮಾಡಬೇಕು. ಪ್ರವಾಸಿ ಮಾರ್ಗದರ್ಶಿಗಳು ಅಧ್ಯಯನ ಮಾಡಬೇಕು. ನಾವು ಈ ನೆಲದ ಬಗ್ಗೆ ಸಂಶೋಧನೆ ಮಾಡುತ್ತಿದ್ದೇವೆ. ಈಗ ನಮಗೆ 1600 ದೇವಾಲಯಗಳು, 12 ಲಿಂಗಗಳು ದೊರೆತಿವೆ. ಇನ್ನೂ ಅಧ್ಯಯನ ನಡೆಯುತ್ತಿದೆ ಎಂದರು.
ಹಂಪಿಯನ್ನು ನಾವು ಕಟ್ಟುವ ಕೆಲಸ ಮಾಡಬೇಕು. ಇದನ್ನು ನಾವು ಮುಂದಿನ ಪೀಳಿಗೆಗೆ ಸಂರಕ್ಷಣೆ ಮಾಡಬೇಕಿದೆ. ಹಾಗಾಗಿ ಈ ನೆಲದ ಮಹತ್ವ ಅರಿತುಕೊಂಡು ಸಂರಕ್ಷಣೆ ಮಾಡುವ ಕಾರ್ಯ ಮಾಡೋಣ ಎಂದರು.ಹಂಪಿಯ ಅಚ್ಯುತರಾಯ ದೇವಾಲಯದಿಂದ ಕೃಷ್ಣ ಬಜಾರ, ಅಚ್ಯುತರಾಯದಿಂದ ವಿಜಯ ವಿಠಲ ದೇವಾಲಯ, ಕೃಷ್ಣ ಬಜಾರದಿಂದ ಕಮಲ ಮಹಲ್ ವರೆಗೆ ಟ್ರಕಿಂಗ್ ರೂಟ್ ಶೋಧಿಸಲಾಗಿದೆ. ಇದರಿಂದ ಪ್ರವಾಸಿಗರು ಬೇಗನೆ ಹಂಪಿ ನೋಡಬಹುದು. ಹಂಪಿಯಲ್ಲಿ ಆಹಾರ ಮಳಿಗೆಗಳನ್ನು ತೆರೆಯಬೇಕಿದೆ. ಪ್ರವಾಸಿಗರಿಗೆ ಅವರಿಗೆ ಇಷ್ಟವಾದ ಆಹಾರ ದೊರೆಯಬೇಕಿದೆ ಎಂದರು.
ಕಮಲಾಪುರ ಕೆರೆಯಲ್ಲಿ ಸಮುದ್ರ ವಿಮಾನ!:ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಕಮಲಾಪುರ ಕೆರೆಯಲ್ಲಿ ಸಮುದ್ರ ವಿಮಾನ (Sea plain) ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. 1 ವರ್ಷದೊಳಗೆ ಈ ಕಾರ್ಯಪೂರ್ಣಗೊಳಿಸಲಾಗುವುದು. ಇದರಿಂದ ಪ್ರವಾಸಿಗರಿಗೂ ಅನುಕೂಲ ಆಗಲಿದೆ ಎಂದರು.
ಈಗಾಗಲೇ 140 ಗೈಡ್‌ಗಳಿಗೆ ಸರ್ಕಾರದ ಗೌರವಧನ ಲಭಿಸುತ್ತಿದೆ. ಈ ಹಿಂದೆ ಉಳಿದಿರುವ ಗೈಡ್‌ಗಳಿಗೂ ಗೌರವ ಧನ ನೀಡಲಾಗುವುದು. ಈಗ ತರಬೇತಿ ಪಡೆದಿರುವ 95 ಗೈಡ್‌ಗಳಿಗೂ ಗೌರವ ಧನ ಒದಗಿಸಲು ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸುವೆ ಎಂದರು.ಹೋಟೆಲ್ ಉದ್ಯಮಿ ಶ್ರೀಪಾದ್ ಮಾತನಾಡಿ, ಗೈಡ್‌ಗಳು ನಿಜವಾದ ಹಂಪಿ ರಾಯಭಾರಿಗಳಾಗಿದ್ದಾರೆ. ಪ್ರವಾಸೋದ್ಯಮ ಹಸಿರು ಉದ್ಯಮ ಆಗಿದೆ. ಇದು ಪರಿಸರ ಹಾಗೂ ಮಾನವಸ್ನೇಹಿ ಉದ್ಯಮ ಆಗಿದೆ. ಇದನ್ನು ಬೆಳೆಸುವ ಹಾಗೂ ಸಂರಕ್ಷಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ನಗರಸಭೆ ಅಧ್ಯಕ್ಷ ರೂಪೇಶ್‌ಕುಮಾರ, ಸಂಪನ್ಮೂಲ ವ್ಯಕ್ತಿ ಪ್ರೊ. ಚಂದ್ರಶೇಖರ ಶಾಸ್ತ್ರಿ, ಮುಖಂಡ ಎಚ್.ಜಿ. ಗುರುದತ್, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪ್ರಭುಲಿಂಗ ಎಸ್. ತಳಕೇರಿ, ಸತ್ಯನಾರಾಯಣ ಮತ್ತಿತರರಿದ್ದರು. ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರಮಾಣ ಪತ್ರ ಹಾಗೂ ಗುರುತಿನ ಚೀಟಿ ವಿತರಿಸಲಾಯಿತು.