ಸಾರಾಂಶ
ನರಗುಂದ: ಪಂಚ ಗ್ಯಾರಂಟಿಗಳ ನೆಪದಲ್ಲಿ ರಾಜ್ಯದ ಖಜಾನೆಯನ್ನು ಕಾಂಗ್ರೆಸ್ ಲೂಟಿ ಮಾಡಲು ಹೊರಟಿದೆ ಎಂದು ಶಾಸಕ ಸಿ.ಸಿ. ಪಾಟೀಲ್ ಆರೋಪಿಸಿದರು.
ತೈಲ ಬೆಲೆ, ಇತರ ಬೆಲೆ ಏರಿಕೆ ಖಂಡಿಸಿ ಸೋಮವಾರ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೂಡಲೇ ತೈಲ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.ವಾಲ್ಮೀಕಿ ನಿಗಮ ಮಂಡಳಿಯಲ್ಲಿ ₹187 ಕೋಟಿ ಹಣ ಲಪಟಾಯಿಸಿ ತೆಲಂಗಾಣ ರಾಜ್ಯದ ಚುನಾವಣೆಗೆ ಕಾಂಗ್ರೆಸ್ ಬಳಸಿಕೊಂಡಿದೆ. ಇಲಾಖೆ ಭ್ರಷ್ಟಾಚಾರದಿಂದ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿರಿಸಿದ್ದ ₹11 ಸಾವಿರ ಕೋಟಿಯನ್ನು ಗ್ಯಾರಂಟಿ ನೆಪದಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಬಸ್ ಸಿಗುತ್ತಿಲ್ಲ. ಬಿತ್ತನೆ ಬೀಜದ ಸಹಾಯಧನ ಬಂದ್ ಆಗಿದೆ. ಪಂಚ ಗ್ಯಾರಂಟಿಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಒಟ್ಟಾರೆ ರಾಜ್ಯದ ಖಜಾನೆ ಹಣ ಎಲ್ಲಿ ಹೋಗುತ್ತಿದೆ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಖಾಲಿ ಖಜಾನೆಯಿಂದಾಗಿ ಕೆಎಸ್‌ಆರ್‌ಟಿಸಿಗೆ ಹಣ ಪಾವತಿಸಿಲ್ಲ. ಹಾಲು ಉತ್ಪಾದಕರ ಪ್ರೋತ್ಸಾಹಧನ 7 ತಿಂಗಳಿಂದ ಪಾವತಿಯಾಗಿಲ್ಲ. 108 ಆ್ಯಂಬುಲೆನ್ಸ್ ನೌಕರರ ಸಂಬಳ ನೀಡಿಲ್ಲ. ಸರ್ಕಾರಿ ನೌಕರರಿಗೆ 3 ತಿಂಗಳಿಗೊಮ್ಮೆ ಸಂಬಳ ನೀಡುತ್ತಿದೆ. ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಕೊಟ್ಟಾಗ್ಯೂ ರಾಜ್ಯದ ಸಾವಿರಾರು ರೈತರ ಖಾತೆಗಳಿಗೆ ಇನ್ನು ಪೂರ್ಣ ಪ್ರಮಾಣದ ಹಣ ಜಮೆಯೇ ಆಗಿಲ್ಲ ಎಂದರು.ಬಿಜೆಪಿ ಆಡಳಿತಾವಧಿಯಲ್ಲಿ ಮಠ-ಮಾನ್ಯಗಳಿಗೆ ಕೊಟ್ಟ ಅನುದಾನವನ್ನು ಈಗಿನ ಸರ್ಕಾರ ಬಂದ್ ಮಾಡಿದೆ. ಅರ್ಚಕರಿಗೆ ನೀಡುತ್ತಿದ್ದ ಗೌರವಧನ ಸ್ಥಗಿತಗೊಳಿಸಿದೆ. ಹಣಕ್ಕಾಗಿ ಸರ್ಕಾರಿ ಆಸ್ತಿ ಮಾರಾಟಕ್ಕೆ ಕಾಂಗ್ರೆಸ್ ಮುಂದಾಗಿದೆ. ಇಲಾಖಾವಾರು ಕಂದಾಯ ಹೆಚ್ಚಳ ಮಾಡಲು ಕ್ರಮಗಳನ್ನು ಸೂಚಿಸಲು ಬೂಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಎನ್ನುವ ಖಾಸಗಿ ಕಂಪನಿಗೆ ಜವಾಬ್ದಾರಿ ಕೊಟ್ಟಿದೆ ಎಂದರು.
ರಾಜ್ಯದಲ್ಲಿ ಭೂಮಿಪೂಜೆ, ಶಂಕುಸ್ಥಾಪನೆ ಮಾಯವಾಗಿವೆ. ಕಾಂಗ್ರೆಸ್ ಶಾಸಕರು ಅನುದಾನವಿಲ್ಲದೇ ಸಪ್ಪೆ ಆಗಿದ್ದಾರೆ. ಬಿಜೆಪಿ ಮೇಲೆ ಮಾಡಿದ ಶೇ. 40 ಭ್ರಷ್ಟಾಚಾರ ಆರೋಪ ಸಾಬೀತು ಮಾಡದೇ ತಾವೇ ಈಗ ಶೇ. 70 ಭ್ರಷ್ಟಾಚಾರಕ್ಕೆ ಇಳಿದ್ದಾರೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡುತ್ತಾರೆಂಬ ನಂಬಿಗೆಯಿತ್ತು. ಆದರೆ ಅವರ ಹೈಕಮಾಂಡ್ ಒತ್ತಾಯದ ಮೇರೆಗೆ ರಾಜ್ಯದ ಕಾಂಗ್ರೆಸ್ ಆಡಳಿತ ದಾರಿ ತಪ್ಪುತ್ತಿದೆ. ಅಧಿವೇಶನದಲ್ಲಿ ನಾನು ಶ್ವೇತಪತ್ರಕ್ಕೆ ಆಗ್ರಹಿಸುತ್ತೇನೆ ಎಂದರು.ಹೊಳೆಆಲೂರ ಮಂಡಲ ಅಧ್ಯಕ್ಷ ಮುತ್ತಣ್ಣ ಜಂಗಣ್ಣವರ, ಚಂದ್ರು ದಂಡಿನ ಹಾಗೂ ವಾಸು ಜೋಗಣ್ಣವರ ಮಾತನಾಡಿದರು. ಅದಕ್ಕೂ ಮುನ್ನ ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ, ಪುರಸಭೆ ಆವರಣದಿಂದ ಬೈಕ್ ಹೊತ್ತ ಎತ್ತಿನ ಗಾಡಿ ಹಾಗೂ ಇಂಧನವಿಲ್ಲದ ಕಾರನ್ನು ತಳ್ಳುತ್ತಾ ಶಿವಾಜಿ ಮಹಾರಾಜ್ ವೃತ್ತದ ವರೆಗೆ ಮೆರವಣಿಗೆಯಲ್ಲಿ ಆಗಮಿಸಿದರು.
ನರಗುಂದ ಮಂಡಲ ಅಧ್ಯಕ್ಷ ಅಜ್ಜನಗೌಡ ಪಾಟೀಲ, ಶಿವಾನಂದ ಮುತವಾಡ, ಉಮೇಶಗೌಡ ಪಾಟೀಲ, ಪ್ರಕಾಶಗೌಡ ತಿರಕನಗೌಡ್ರ, ಬಾಪುಗೌಡ ತಿಮ್ಮನಗೌಡ್ರ, ನೇತಾಜಿಗೌಡ ಕೆಂಪನಗೌಡ್ರ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರು ಪವಾರ, ಕೊಟ್ರೇಶ ಕೊಟ್ರಶೆಟ್ಟರ, ಮಲ್ಲಪ್ಪ ಮೇಟಿ, ಮಂಜು ಮೆಣಸಗಿ, ವಿಠ್ಠಲ ಹವಾಲ್ದಾರ, ಸಿದ್ದೇಶ ಹೂಗಾರ, ಸುರೇಶ ಹುಡೇದಮನಿ, ಈರಪ್ಪ ಮ್ಯಾಗೇರಿ, ಬಿಜೆಪಿ ಪುರಸಭೆ ಸದಸ್ಯರು ಹಾಗೂ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಇದ್ದರು.