ಸಾರಾಂಶ
ನೂತನ ಶಿಲಾಮಯ ದೇವಾಲಯದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಮಾರೋಪ ನಡೆಯಿತು.
ಯಲ್ಲಾಪುರ: ಸಮಾಜಮುಖಿಯಾಗಿ ಕೆಲಸ ಮಾಡುವವರನ್ನು ಸಮಾಜ ಗೌರವಿಸುವಂತಾಗಬೇಕು. ಇದರಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗುತ್ತದೆ ಎಂದು ಹವ್ಯಕ ಸಂಘದ ತಾಲೂಕಾಧ್ಯಕ್ಷ ಡಿ. ಶಂಕರ ಭಟ್ಟ ತಿಳಿಸಿದರು.
ಮೇ ೭ರಂದು ಪಟ್ಟಣದ ಹುಲ್ಲೋರಮನೆಯ ಗಜಾನನ ಮಾರುತಿ ದೇವಸ್ಥಾನದಲ್ಲಿ ೫ ದಿನಗಳ ಕಾಲ ನಡೆದ ನೂತನ ಶಿಲಾಮಯ ದೇವಾಲಯದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ, ಮಾತನಾಡಿದರು.ದೇವಮಂದಿರಗಳು ಸನಾತನ ಪರಂಪರೆಯನ್ನು ಸಂರಕ್ಷಿಸುವ ಜತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತವೆ. ಸತ್ಕಾರ್ಯ ಮಾಡಿದವರನ್ನು ಸಮಾಜ ಗುರುತಿಸುತ್ತದೆ ಎಂಬುದಕ್ಕೆ ಈ ದೇವಾಲಯದ ಉನ್ನತಿಗೆ ಕಾರಣರಾದ ವಿ.ಎಸ್. ಭಟ್ಟ ಮುಂಡಗೋಡಿಮನೆ, ನರಸಿಂಹ ಭಟ್ಟ ಕುಂಟೇಜಡ್ಡಿ, ಶಂಕರ ಅನಂತ ಭಟ್ಟ ಅವರು ಉದಾಹರಣೆಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗೋಕರ್ಣದ ತಾಂತ್ರಿಕರಾದ ವೇ.ಮೂ. ಗಜಾನನ ಹಿರೇ ಮಾತನಾಡಿ, ಈ ಮಂದಿರವನ್ನು ವಾಸ್ತುಶಾಸ್ತ್ರದ ಪ್ರಕಾರ ನಿರ್ಮಿಸಲಾಗಿದ್ದು, ಆಗಮೋಕ್ತ ರೀತಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ನಮ್ಮ ಎಲ್ಲ ಪುರೋಹಿತರೂ ನಿಷ್ಠೆಯಿಂದ ಪ್ರತಿಷ್ಠಾ ಮಹೋತ್ಸವದ ಎಲ್ಲ ವಿಧಿ- ವಿಧಾನಗಳನ್ನು ನೆರವೇರಿಸಿದ್ದಾರೆ ಎಂದರು.ಪ್ರಧಾನ ಅರ್ಚಕ ನಾರಾಯಣ ಭಟ್ಟ ಮಾತನಾಡಿ, ಕಳೆದ ೩ ವರ್ಷ ನಮ್ಮ ಸಮಿತಿಯವರ ಜತೆಗೂಡಿ, ಹಗಲು-ರಾತ್ರಿ ಎನ್ನದೇ ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದ್ದೇವೆ ಎಂದರು.
ಕಟ್ಟಡ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶ್ರೀಧರ ಭಟ್ಟ, ಕಾರ್ಯಾಧ್ಯಕ್ಷ ದತ್ತಾತ್ರೇಯ ಭಟ್ಟ, ಗೌರವಾಧ್ಯಕ್ಷ ವೆಂಕಟರಮಣ ಭಟ್ಟ, ಮೊಕ್ತೇಸರರಾದ ನರಸಿಂಹ ಭಟ್ಟ ಹೊನ್ನಶೀಗೇಪಾಲ, ರಾಮಕೃಷ್ಣ ಭಟ್ಟ ಬಾಳಗೀಮನೆ ಮತ್ತಿತರರು ಉಪಸ್ಥಿತರಿದ್ದರು. ವಿಘ್ನೇಶ್ವರ ಭಟ್ಟ ಮುಂಡಗೋಡಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.