ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಜೊತೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿದ ಆರೋಗ್ಯ ಸುರಕ್ಷಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು. ತಾಲೂಕಿನಲ್ಲಿರುವ ಎಲ್ಲಾ ಪಿಹೆಚ್‌ಸಿಗಳಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗದಂತೆ ಸೇವೆ ನೀಡಬೇಕು. ವಾರಕ್ಕೊಮ್ಮೆಯಾದರೂ ಎಲ್ಲಾ ವೈದ್ಯರು ಸಭೆ ನಡೆಸಿ ಆಗು ಹೋಗುಗಳ ಬಗ್ಗೆ ಚರ್ಚಿಸಿ ವ್ಯವಸ್ಥಿತವಾಗಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು. ಇದಕ್ಕೂ ಮುನ್ನ ಸಾರ್ವಜನಿಕ ಆಸ್ಪತ್ರೆ ಕೊಠಡಿಗಳನ್ನು ವೀಕ್ಷಿಸಿ ರೋಗಿಗಳ ಆರೋಗ್ಯ ವಿಚಾರಿಸಿದರು. ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಹಾಗೂ ಆಕ್ಸಿಜನ್ ಪೂರೈಕೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು. ಔಷದೋಪಚಾರಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಗೆ ವೈದ್ಯರು ಅಥವಾ ಸಿಬ್ಬಂದಿ ಕೊರತೆ ಇದ್ದಲ್ಲಿ ತಕ್ಷಣ ನನ್ನ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮೋಹನ್, ತಹಸೀಲ್ದಾರ್ ನಯೀಂ ಉನ್ನೀಸಾ, ತಾಪಂ ಇಓ ಚಂದ್ರಮೌಳಿ, ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಜ್ಯೋತಿಲಕ್ಷ್ಮಿ ಸೇರಿದಂತೆ ಎಲ್ಲ ವೈದ್ಯರು, ಆಡಳಿತ ವರ್ಗದ ಸಿಬ್ಬಂದಿ ಇದ್ದರು.