ಸಾರಾಂಶ
ಬ್ಯಾಡಗಿ: ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಆರ್ಥಿಕವಾಗಿ ಹಿಂದುಳಿದ ಜನರು ವೈದ್ಯಕೀಯ ಸೇವೆಗಳನ್ನು ಪಡೆಯಲು ಹಿಂದೇಟು ಹಾಕುತ್ತಾರೆ. ಹೀಗಾಗಿ ಮಣಿಪಾಲ ಆರೋಗ್ಯ ಸೇವಾ ಸಂಸ್ಥೆ ರಿಯಾಯತಿ ದರದಲ್ಲಿ ಆರೋಗ್ಯ ಚಿಕಿತ್ಸೆ ನೀಡಲು ಸಿದ್ಧ ಎಂದು ಮಣಿಪಾಲ ಕಸ್ತೂರಬಾ ಆಸ್ಪತ್ರೆ ವ್ಯವಸ್ಥಾಪಕ ಮೋಹನ ಶೆಟ್ಟಿ ತಿಳಿಸಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಡವರು ಸೇರಿದಂತೆ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಮೂಲ ಉದ್ದೇಶ ಸಂಸ್ಥೆ ಹೊಂದಿದೆ. ಹಲವು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿ ಪ್ರಸಿದ್ಧಿಯಾದ ನಮ್ಮ ಮಣಿಪಾಲ ಸಂಸ್ಥೆ ಎಲ್ಲ ಆಸ್ಪತ್ರೆಗಳಿಗಿಂತಲೂ ಹೆಚ್ಚು ಯೋಜನೆಗಳನ್ನು ನೀಡಿದೆ ಎಂದರು.ಕಳೆದ 23 ವರ್ಷಗಳಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು 12ರಿಂದ 13 ಜಿಲ್ಲೆಗಳಲ್ಲಿ ನಮ್ಮ ಆಸ್ಪತ್ರೆ ಆರೋಗ್ಯ ಸೇವೆ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಕಾರ್ಡದಾರರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳ ಕಂಡಿದೆ. ವೈಯಕ್ತಿಕ ಚಿಕಿತ್ಸೆಗೆ ರು. 350 ಒಟ್ಟು ಕುಟುಂಬಕ್ಕೆ ರು. 700 ಹಾಗೂ ಜಂಟಿ ಕೌಟುಂಬಿಕ ಚಿಕಿತ್ಸೆಗೆ ರು.700 ಸೇರಿದಂತೆ ಹಲವು ನಿಯಮಗಳನ್ನು ಒಳಗೊಂಡು ಮಣಿಪಾಲ ಆಸ್ಪತ್ರೆ ಕಾರ್ಡ್ ವಿತರಣೆ ನಡೆಸಿದೆ. ಕಳೆದ ವರ್ಷ 3 ಲಕ್ಷಕ್ಕೂ ಅಧಿಕ ಸಾರ್ವಜನಿಕರು ಕಾರ್ಡ್ ನೋಂದಣಿ ಮಾಡಿಕೊಂಡಿದ್ದು, ರೋಗಿಗಳ ಸಮಾಲೋಚನೆಗೆ ಶೇ.50 ಮಧುಮೇಹ ಆರೈಕೆ ಶೇ.20, ಡಯಾಲಿಸಿಸ್ ಶೇ.100 ರಿಯಾಯತಿ ಒದಗಿಸಿದ್ದು ಚಿಕಿತ್ಸೆ ಬಳಿಕ ಖರೀದಿಸುವ ಔಷಧಿ ಮತ್ತು ಗುಳಿಗೆಗಳ ಮೇಲೂ ಶೇ.10 ರಿಯಾಯ್ತಿ ನೀಡಲಿದ್ದೇವೆ ಎಂದರು.
ಎಲ್ಲೆಲ್ಲಿ ಆಸ್ಪತ್ರೆ ಸೇವೆ: ಕಾರ್ಡದಾರರು ಕಸ್ತೂರಬಾ ಆಸ್ಪತ್ರೆ ಮಣಿಪಾಲ, ಡಾ. ಟಿಎಂವಿ ಆಸ್ಪತ್ರೆ, ಪೈಆಸ್ಪತ್ರೆ ಉಡುಪಿ, ಡಾ. ಟಿಎಂಪೈ ರೋಟರಿ ಆಸ್ಪತ್ರೆ ಕಾರ್ಕಳ, ಕೆಎಂಸಿ ಆಸ್ಪತ್ರೆ ಮಂಗಳೂರು ಮತ್ತು ಅತ್ತಾವರ, ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು, ಮಣಿಪಾಲ ಆಸ್ಪತ್ರೆ ಗೋವಾ ಹಾಗೂ ಮಣಿಪಾಲ ಮಂಗಳೂರಿನಲ್ಲಿ ದಂತ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಗುಣಮಟ್ಟದ ಚಿಕಿತ್ಸೆಯನ್ನು ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದಾರೆ ಎಂದರು.ಪರ್ತಕರ್ತರಿಗೂ ಉಚಿತ ಕಾರ್ಡ: ತಾಲೂಕು ಪ್ರತಿನಿಧಿ ಬಿ.ಪಿ. ಚನ್ನಗೌಡ್ರ ಮಾತನಾಡಿ, ತಾಲೂಕಿನ ಎಲ್ಲ ಪತ್ರಕರ್ತರಿಗೂ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಮಣಿಪಾಲ ಆಸ್ಪತ್ರೆ ವತಿಯಿಂದ ಪತ್ರಕರ್ತರ ಕುಟುಂಬಗಳಿಗೆ ಉಚಿತವಾಗಿ ಕಾರ್ಡಗಳನ್ನು ವಿತರಿಸಲಾಗುತ್ತಿದೆ. ಇದರೊಂದಿಗೆ ಆದ್ಯತೆ ಮೇರೆಗೆ ಯಶಸ್ವಿನಿ ಹಾಗೂ ಆಯುಷ್ಮಾನ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಣಿಪಾಲ ಆಸ್ಪತ್ರೆ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕರಾದ ಪ್ರವೀಣ, ಅನಿಲ ನಾಯ್ಕ ಇದ್ದರು.