ಸಾರಾಂಶ
ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೆಲ್ತ್ ಚೆಕಪ್ ಕ್ಯಾಂಪ್ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗುತ್ತಿದೆ. ಕ್ಯಾಂಪ್‌ನಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಮತ್ತು ತಪಾಸಣೆ ಮಾಡುತ್ತಿಲ್ಲ. ಆದರೆ, ಪ್ರತಿ ಕಾರ್ಮಿಕರ ಹೆಸರಿನಲ್ಲಿ ₹3500 ಖರ್ಚು ಹಾಕಲಾಗುತ್ತದೆ. ಆದರೆ, ಆರೋಗ್ಯ ತಪಾಸಣೆ ಶಿಬಿರಕ್ಕೆ ಕಾರ್ಮಿಕರೇ ಬಂದಿರುವುದಿಲ್ಲ.
ಕೊಪ್ಪಳ:
ಸರ್ಕಾರಿ ಆಸ್ಪತ್ರೆಯಲ್ಲಿ ಕೇವಲ ₹ 5ಗೆ ದೊರೆಯಬಹುದಾದ ಚಿಕಿತ್ಸೆ ನೀಡಲು ಕಾರ್ಮಿಕ ಇಲಾಖೆ ಬರೋಬ್ಬರಿ ₹3000 ವೆಚ್ಚ ಮಾಡುತ್ತಿದೆ. ಇದನ್ನು ಖುದ್ದು ಕಾರ್ಮಿಕ ಇಲಾಖೆ ಸಚಿವರನ್ನು ಪ್ರಶ್ನಿಸಲು ಕಾರ್ಮಿಕರು ನಿರ್ಧರಿಸಿದ್ದಾರೆ.ಕಲ್ಯಾಣ ಕರ್ನಾಟಕ ಜಿಲ್ಲೆಗಳ ನೋಂದಾಯಿತ ಕಾರ್ಮಿಕ ಸಂಘಟನೆಗಳ ಒಕ್ಕೂಟ ಈ ಕುರಿತು ಸಮಗ್ರ ದಾಖಲೆಗಳೊಂದಿಗೆ ಕೊಪ್ಪಳಕ್ಕೆ ಶುಕ್ರವಾರ ಆಗಮಿಸುತ್ತಿರುವ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಿ, ಕಾರ್ಮಿಕರ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ತಡೆಯುವಂತೆ ಮನವಿ ಮಾಡಲು ನಿರ್ಧರಿಸಿದೆ.
ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಜಿ. ಘೋರ್ಪಡೆ ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿ, ಸಚಿವರಿಗೆ ಅಕ್ರಮ ತಿಳಿಸುತ್ತೇವೆ. ಇದಕ್ಕೆ ಅವಕಾಶ ನೀಡುವಂತೆ ಕೋರುತ್ತೇವೆ ಎಂದಿದ್ದಾರೆ.ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೆಲ್ತ್ ಚೆಕಪ್ ಕ್ಯಾಂಪ್ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ ಮಾಡಲಾಗುತ್ತಿದೆ. ಕ್ಯಾಂಪ್‌ನಲ್ಲಿ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ ಮತ್ತು ತಪಾಸಣೆ ಮಾಡುತ್ತಿಲ್ಲ. ಆದರೆ, ಪ್ರತಿ ಕಾರ್ಮಿಕರ ಹೆಸರಿನಲ್ಲಿ ₹3500 ಖರ್ಚು ಹಾಕಲಾಗುತ್ತದೆ. ಆದರೆ, ಆರೋಗ್ಯ ತಪಾಸಣೆ ಶಿಬಿರಕ್ಕೆ ಕಾರ್ಮಿಕರೇ ಬಂದಿರುವುದಿಲ್ಲ. ಇರುವ ದಾಖಲೆ ದುರ್ಬಳಕೆ ಮಾಡಿಕೊಂಡು ಕಾರ್ಮಿಕರ ಕುಟುಂಬದ ಹೆಸರು ನೋಂದಾಯಿಸಿ ಲೂಟಿ ಮಾಡಲಾಗುತ್ತದೆ ಎಂದು ದೂರಿದ್ದಾರೆ.
ಈ ಹೆಲ್ತ್ ಕ್ಯಾಂಪ್ ಮಾಡುವ ಅಗತ್ಯವೇ ಇಲ್ಲ. ಇದೆಲ್ಲವೂ ಜಿಲ್ಲಾಸ್ಪತ್ರೆಯಲ್ಲಿ ನಮಗೆ ₹5ಗೆ ಚೀಟಿ ಮಾಡಿದರೆ ಉಚಿತವಾಗಿ ದೊರೆಯುತ್ತಿದೆ. ಶುಗರ್, ಬಿಪಿಗೂ ಸಹ ಅಲ್ಲಿ ಉಚಿತ ಮಾತ್ರೆ ನೀಡುತ್ತಾರೆ. ಆದರೂ ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ರಾಜ್ಯಾದ್ಯಂತ ಬರೋಬ್ಬರಿ ₹ 250 ಕೋಟಿ ಖರ್ಚು ಮಾಡಿ, ಲೂಟಿ ಮಾಡಲಾಗುತ್ತಿದೆ. ಇದೆಲ್ಲವನ್ನು ತಡೆಯುವಂತೆ ಸಚಿವರಿಗೆ ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.