ಕನ್ನಡಪ್ರಭ ವಾರ್ತೆ ವಿಜಯಪುರವಕ್ರ ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ. ನಗರದ ಬಿಎಲ್‌ಡಿಇ ಡೀಮ್ಸ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಅ.30 ಹಾಗೂ 31 ರಂದು ಎರಡು ದಿನಗಳ ಕಾಲ ಶಿಬಿರ ನಡೆಸಲಾಗುತ್ತಿದೆ ಎಂದು ಮುಂಬೈನ ಅಂತಾರಾಷ್ಟ್ರೀಯ ಖ್ಯಾತಿಯ ಬೆನ್ನೆಲುಬು ನರಗಳ ಶಸ್ತ್ರ ಚಿಕಿತ್ಸಕ ಡಾ.ಶೇಖರ ಭೋಜರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮುಂಬೈನ ದಿ ಸ್ಪೈನ್ ಫೌಂಡೇಷನ್ ಜೊತೆಗೆ ಬಿಎಲ್‌ಡಿಇ ಸಂಸ್ಥೆ ಕಳೆದ ಎರಡು ವರ್ಷಗಳಿಂದ ಒಡಂಬಡಿಕೆ ಮಾಡಿಕೊಂಡಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ವಕ್ರ ಬೆನ್ನುಹುರಿ ಸಮಸ್ಯೆಗೆ ಶಸ್ತ್ರಚಿಕಿತ್ಸಾ ಶಿಬಿರ ನಡೆಸಲಾಗುತ್ತಿದೆ. ನಗರದ ಬಿಎಲ್‌ಡಿಇ ಡೀಮ್ಸ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಅ.30 ಹಾಗೂ 31 ರಂದು ಎರಡು ದಿನಗಳ ಕಾಲ ಶಿಬಿರ ನಡೆಸಲಾಗುತ್ತಿದೆ ಎಂದು ಮುಂಬೈನ ಅಂತಾರಾಷ್ಟ್ರೀಯ ಖ್ಯಾತಿಯ ಬೆನ್ನೆಲುಬು ನರಗಳ ಶಸ್ತ್ರ ಚಿಕಿತ್ಸಕ ಡಾ.ಶೇಖರ ಭೋಜರಾಜ ಹೇಳಿದರು.

ನಗರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಲ್ಲಿ ನಡೆಯುವ ನಿರಂತರ ವೈದ್ಯಕೀಯ ಶಿಕ್ಷಣ, ಕಲಿಕಾ ಕಾರ್ಯಾಗಾರ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರದಿಂದ ಸಾಕಷ್ಟು ರೋಗಿಗಳಿಗೆ ಸಹಾಯವಾಗಿದೆ. ಹದಿಹರೆಯದ ವಯಸ್ಸಿನಲ್ಲಿ ಕಂಡು ಬರುವ ವಕ್ರ ಬೆನ್ನು ಹುರಿಗೆ ವಿಶೇಷ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ, ಇನ್ನುಳಿದ ಬೆನ್ನು ಹುರಿ ಸಮಸ್ಯೆಗಳಿಗೆ ಚಿಕಿತ್ಸೆ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ವಕ್ರ ಬೆನ್ನು ಹುರಿ ಸಮಸ್ಯೆಗೆ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಮುಂಬೈನ ಡಾ.ಶೇಖರ ಭೋಜರಾಜರ ನೇತೃತ್ವದ ತಂಡ ನೆರವೇರಿಸುತ್ತದೆ. ಈ ಶಸ್ತ್ರಚಿಕಿತ್ಸೆ ಅತ್ಯಂತ ಕ್ಲಿಷ್ಟಕರವಾಗಿದ್ದು ಸುಮಾರು 5-6 ತಾಸು ನಡೆಯುತ್ತದೆ ಎಂದು ಮಾಹಿತಿ ನೀಡಿದರು. ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ಆಗುತ್ತಿರುವುದು ಇಡೀ ಉತ್ತರ ಕರ್ನಾಟಕದಲ್ಲೇ ಮೊದಲು. ಕಳೆದ ಎರಡು ವರ್ಷಗಳಲ್ಲಿ ಸುಮಾರು 8 ಇಂತಹ ಶಿಬಿರಗಳನ್ನು ಆಯೋಜನೆ ಮಾಡಿದ್ದು, ಹಲವಾರು ರೋಗಿಗಳು ಈ ಚಿಕಿತ್ಸೆಯ ಲಾಭವನ್ನು ಪಡೆದಿದ್ದಾರೆ. ದೊಡ್ಡ ನಗರಗಳಲ್ಲಿ ಈ ಶಸ್ತ್ರಚಿಕಿತ್ಸೆಗೆ ಸುಮಾರು ₹ 8-10 ಲಕ್ಷ ಖರ್ಚಾಗುತ್ತದೆ. ಆದರೆ, ಬಿಎಲ್‌ಡಿಇ ಆಸ್ಪತ್ರೆಯಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಹಾಗೂ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ನೆರವೇರಿಸಲಾಗಿದೆ. ಜಿಲ್ಲೆಯ ಇಂತಹ ವಕ್ರ ಬೆನ್ನು ಹುರಿ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.ಮುಂಬೈನ ದಿ ಸ್ಪೈನ್‌ ಫೌಂಡೇಷನ್ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ರೋಗಿಗಳಿಗೆ ಬದುಕು ಕಲ್ಪಿಸಿದೆ. ದೇಶಾದ್ಯಂತ ನಮ್ಮ ಸಂಸ್ಥೆಯ 30 ಸೆಂಟರ್‌ಗಳು ಇವೆ. ಸ್ಪೈನಲ್ ಸಮಸ್ಯೆ ಇರುವವರಿಗೆ ತಪಾಸಣೆ ನಡೆಸಿ ಬಹುತೇಕರಿಗೆ ಮೆಡಿಸಿನ್ ಮೇಲೆ ಗುಣಪಡಿಸಲಾಗುತ್ತಿದ್ದು, ತೀವ್ರ ಸಮಸ್ಯೆ ಅನುಭವಿಸುವ ಹಾಗೂ ಅವಶ್ಯಕತೆ ಇದ್ದವರಿಗೆ ಮಾತ್ರ ಆಪರೇಷನ್ ಮಾಡಲಾಗುವುದು. ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಆಯುಷ್ಮಾನ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದಂತೆ ಫಿಜಿಯೋಥೆರಫಿ ಮೂಲಕವು ಬಹುತೇಕ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.ಈ ಸುದ್ದಿಗೋಷ್ಠಿಯಲ್ಲಿ ಬಿಎಲ್‌ಡಿಇ ವೈದ್ಯಕೀಯ ಉಪಅಧೀಕ್ಷಕ, ಎಲುಬು ಕೀಲು ವಿಭಾಗದ ಮುಖ್ಯಸ್ಥ ಡಾ.ರವಿಕುಮಾರ ಬಿರಾದಾರ, ಡಾ.ಅಶೋಕ ನಾಯಕ, ಡಾ.ಸಂತೋಷ ನಂದಿ, ಡಾ.ವಿಜಯಕುಮಾರ ಪಾಟೀಲ, ಡಾ.ಪ್ರೇಮಿಕ ನಗದ ಭಾಗವಹಿಸಿದ್ದರು.