ಭಾರಿ ಗಾಳಿ ಮಳೆಗೆ ಬುಡ ಸಮೇತ ಬಿದ್ದ ಮರಗಳು, ಕಾರು, ಬೈಕ್‌ ಜಖಂ

| Published : May 12 2024, 01:16 AM IST / Updated: May 12 2024, 09:14 AM IST

ಸಾರಾಂಶ

ಬೆಂಗಳೂರಿನಲ್ಲಿ ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಭಾರಿ ಅನಾಹುತವಾಗಿದೆ. ಮನೆಗಳು, ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗಿದೆ. ಮರಗಳು, ಕೊಂಬೆಗಳು ಬಿದ್ದು ಕಾರು, ಬೈಕ್‌ಗಳು ಜಖಂಗೊಂಡಿವೆ.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ತಡರಾತ್ರಿ ಸುರಿದ ಗುಡುಗು ಸಹಿತ ಸುರಿದ ಧಾರಾಕಾರ ಮಳೆಗೆ ತಗ್ಗು ಪ್ರದೇಶದ ಹಲವು ಮನೆಗಳಿಗೆ, ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು, ಮತ್ತೊಂದೆಡೆ ಗಾಳಿ ಮಳೆಗೆ ನೂರಾರು ಸಂಖ್ಯೆಯ ಮರ ಹಾಗೂ ಮರಕೊಂಬೆ ಧರೆಗುರುಳಿ ಕಾರು, ಬೈಕ್‌ ಸೇರಿದಂತೆ ಹಲವು ವಾಹನ ಜಖಂಗೊಂಡಿವೆ.

ಕಳೆದ ಐದಾರು ದಿನದಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಶುಕ್ರವಾರ ತಡ ರಾತ್ರಿಯೂ ಬೆಂಗಳೂರಿನ ವಿವಿಧ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಯಿಂದ ಅನ್ನಪೂರ್ಣೇಶ್ವರಿ ನಗರದ ಮನೆಗಳಿಗೆ ಹಾಗೂ ಅಪಾರ್ಟೆಮೆಂಟ್‌ ಬೇಸ್‌ಮೆಂಟ್‌ಗೆ ನೀರು ನುಗ್ಗಿದೆ. ಇದರಿಂದ ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದ್ದಾರೆ. ಮನೆಯ ವಸ್ತುಗಳೆಲ್ಲ ಮಳೆ ನೀರಿಗೆ ನೆಂದು ಹೋಗಿವೆ.

ಇನ್ನು ಏಕಾಏಕಿ ನೀರು ನುಗ್ಗಿದ ಪರಿಣಾಮ ಕಾರು, ಬೈಕ್‌ ಸೇರಿದಂತೆ ಮೊದಲಾದ ವಾಹನಗಳು ಜಲಾವೃತ್ತಗೊಂಡಿದ್ದವು. ಶನಿವಾರ ಬೆಳಗ್ಗೆ ಬಿಬಿಎಂಪಿ ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ ಅಪಾರ್ಟ್‌ಮೆಂಟ್‌ ಬೇಸ್‌ಮೆಂಟ್‌ನಲ್ಲಿ ಶೇಖರಣೆಯಾಗಿದ್ದ ನೀರನ್ನು ಪಂಪ್‌ ಬಳಸಿ ತೆರವುಗೊಳಿಸಿದರು.

ಚಾಮರಾಜಪೇಟೆಯ ಬಿನ್ನಿಮಿಲ್‌ ಬಳಿಯ ಅಪಾರ್ಟ್‌ಮೆಂಟ್‌ನಿಂದ ಹರಿದ ನೀರು ಪಕ್ಕದ ರಾಯಪುರ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಇದರಿಂದ ರಾಯಪುರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನದಿಯಂತಾದ ರಸ್ತೆಗಳು

ಭಾರೀ ಪ್ರಮಾಣ ಮಳೆ ಸುರಿದ ಪರಿಣಾಮ ರಾಜರಾಜೇಶ್ವರಿನಗರ, ಜ್ಞಾನಭಾರತಿ, ಏರ್‌ಪೋರ್ಟ್‌ ರಸ್ತೆ, ಸುಂಕದಕಟ್ಟೆ ಸೇರಿದಂತೆ ನಗರದ ಬಹುತೇಕ ರಸ್ತೆಗಳು ಅಕ್ಷರಶಃ ನದಿಯಂತಾಗಿದ್ದವು. ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ರಸ್ತೆ, ಆರ್‌ಆರ್‌ನಗರ ಆರ್ಚ್‌ ರಸ್ತೆಯಲ್ಲಿ ಸುಮಾರು ಮೂರು ಅಡಿಯಷ್ಟು ನೀರು ನಿಂತು ಜಲಾವೃತವಾಗಿತ್ತು. ವಾಹನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುವಷ್ಟು ಪ್ರಮಾಣದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿತ್ತು.

ಇದರಿಂದ ಮೈಸೂರು ರಸ್ತೆ, ತುಮಕೂರು ರಸ್ತೆ, ವಿಮಾನ ನಿಲ್ದಾಣ ರಸ್ತೆ ಸೇರಿದಂತೆ ಮೊದಲಾದ ಕಡೆ ರಾತ್ರಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಮರಗಳು ಧರೆಗೆ: ವಾಹನಗಳು ಜಖಂ

ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ನಗರದಲ್ಲಿ 31 ಮರಗಳು ಸಂಪೂರ್ಣವಾಗಿ ಧರೆಗುರುಳಿವೆ. ಜತೆಗೆ ನಗರದ ವಿವಿಧ ಭಾಗದಲ್ಲಿ 94 ಮರ ಕೊಂಬೆಗಳು ಮುರಿದು ಬಿದ್ದಿವೆ. ಮರ ಹಾಗೂ ಮರ ಕೊಂಬೆಗಳನ್ನು ಬಿಬಿಎಂಪಿ ಅರಣ್ಯ ವಿಭಾಗದ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಶನಿವಾರ ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಜಯನಗರದ 4ನೇ ಹಂತದ ರಸ್ತೆಯಲ್ಲಿ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಎರಡು ಬೈಕ್‌ ಹಾಗೂ ತಳ್ಳೋಗಾಡಿ ಜಖಂಗೊಂಡಿದೆ. ನಾಗರಭಾವಿಯ ಮಾನಸನಗರದಲ್ಲಿ ಕಾರಿನ ಮೇಲೆ ಮರದ ಕೊಂಬೆ ಬಿದ್ದಿದೆ. ದೀಪಾಂಜಲಿನಗರದಲ್ಲಿ ಮರದೊಂದಿಗೆ ಮೂರು ವಿದ್ಯುತ್‌ ಕಂಬ ಬಿದ್ದ ಪರಿಣಾಮ 2 ಕಾರು, ಒಂದು ಟಿಟಿ ಜಖಂಗೊಂಡಿದೆ.ಕಾಂಪೌಂಡ್‌ ಕುಸಿತ

ಮಳೆಗೆ ಕೆಂಗೇರಿ ಟಿಟಿಎಂಸಿಯ ಕಾಂಪೌಂಡ್ ಕುಸಿತಗೊಂಡಿದೆ. ಜತೆಗೆ ವಾಹನ ನಿಲುಗಡೆಯ ಪಾರ್ಕಿಂಗ್ ಸ್ಥಳ ಸಂಪೂರ್ಣ ಜಲಾವೃತಗೊಂಡಿತ್ತು. ಇನ್ನು ಆರ್.ಆರ್.ನಗರ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್‌ಗೆ ಮಳೆ ನೀರು ನುಗ್ಗಿದ್ದು, ಸಿಬ್ಬಂದಿ ತೆರವುಗೊಳಿಸುವಲ್ಲಿ ನಿರತರಾಗಿದ್ದರು. ಹೀಗಾಗಿ, ಶನಿವಾರ ಬೆಳಗ್ಗೆ ಕೆಲಕಾಲ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.ರಸ್ತೆ ಕುಸಿತ

ಮಳೆಗೆ ನಗರದ ಬ್ರಿಗೇಡ್ 7 ಗಾರ್ಡೇನಿಯಾ ಅಪಾರ್ಟ್‌ಮೆಂಟ್ ಬಳಿ ಕುಸಿದಿರುವ ರಸ್ತೆ ಕುಸಿತ ಉಂಟಾಗಿದ್ದು, ಬಿಬಿಎಂಪಿಯ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿತ ಉಂಟಾಗಿದೆ ಎಂದು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮುಂದುವರೆಯಲಿದೆ ಮಳೆ

ಶನಿವಾರ ಸಂಜೆಯೂ ನಗರದ ಒಂದೆರಡು ಕಡೆ ತುಂತುರು ಮಳೆಯಾಗಿದೆ. ಶನಿವಾರ ತಡರಾತ್ರಿ ಹಾಗೂ ಭಾನುವಾರ ನಗರದಲ್ಲಿ ಗುಡುಗು ಮಿಂಚು, ಗಾಳಿ ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಇನ್ನು ಶುಕ್ರವಾರ ನಗರದಲ್ಲಿ ಸರಾಸರಿ 2.26 ಸೆಂ.ಮೀ ನಷ್ಟು ಮಳೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಮಳೆಗೆ ಈವರೆಗೆ  271 ಮರ ಧರೆಗೆ

ಕಳೆದ ಒಂದು ವಾರದಲ್ಲಿ ನಗರದಲ್ಲಿ ಸುರಿದ ಗಾಳಿ ಮಳೆಗೆ ಈವರೆಗೆ ಬರೋಬ್ಬರಿ 271 ಮರ ಧರೆಗುರುಳಿದ್ದು, 483 ಮರದ ಕೊಂಬೆಗಳು ಮುರಿದು ಬಿದ್ದಿವೆ. ಈ ಪೈಕಿ ಈಗಾಗಲೇ 256 ಮರ ಹಾಗೂ 427 ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.ಶುಕ್ರವಾರ ಎಲ್ಲಿ ಎಷ್ಟು ಮಳೆಸ್ಥಳಮಳೆ ಪ್ರಮಾಣ (ಸೆಂ,ಮೀ)ಹೇರೋಹಳ್ಳಿ9.25ಕೆಂಗೇರಿ9.15ಹೆಗ್ಗನಹಳ್ಳಿ/ಪೀಣ್ಯ6.25ನಾಯಂಡಹಳ್ಳಿ/ಜ್ಞಾನಭಾರತಿ/ಹೆಮ್ಮಿಗೆಪುರ6.2ಆರ್‌ಆರ್‌ನಗರ6.15ಎಚ್‌.ಗೊಲ್ಲಹಳ್ಳಿ5.8ನಾಗರಭಾವಿ/ಮಾರುತಿ ಮಂದಿರ5.2ಬಸವನಗುಡಿ/ವಿದ್ಯಾಪೀಠ/ಕುಮಾರಸ್ವಾಮಿ ಲೇಔಟ್‌5.15ಉತ್ತರಹಳ್ಳಿ4.55ಹಂಪಿನಗರ/ಗಾಳಿ ಆಂಜನೇಯ ದೇವಸ್ಥಾನ4.25ಯಲಹಂಕ3.9ಬ್ಯಾಟರಾಯನಪುರ/ಜಕ್ಕೂರು3.8ಆಗ್ರಹಾರ ದಾಸರಹಳ್ಳಿ/ಕೊಟ್ಟಿಗೆಪಾಳ್ಯ3.35