ಸಾರಾಂಶ
ಅಥಣಿಪರಿಸರ ಸಂರಕ್ಷಣೆ ದೃಷ್ಟಿಯಿಂದ ನೆಡಲಾಗುವ ಸಸಿಗಳನ್ನು ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುವಂತೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಚಿಕ್ಕಮಕ್ಕಳ ತಜ್ಞ ಡಾ.ಪಿ.ಪಿ. ಮಿರಜ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಪರಿಸರ ಸಂರಕ್ಷಣೆ ದೃಷ್ಟಿಯಿಂದ ನೆಡಲಾಗುವ ಸಸಿಗಳನ್ನು ಮಕ್ಕಳನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುವಂತೆ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಚಿಕ್ಕಮಕ್ಕಳ ತಜ್ಞ ಡಾ.ಪಿ.ಪಿ. ಮಿರಜ ಹೇಳಿದರು.ಪಟ್ಟಣದ ಲಕ್ಷ್ಮೀನಾರಾಯಣ ನಗರದಲ್ಲಿರುವ ಉದ್ಯಾನದಲ್ಲಿ ಅಥಣಿ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವದಲ್ಲಿ ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವನಮಹೋತ್ಸವದಂದು ಸಸಿಗಳನ್ನು ನೆಟ್ಟರೆ ಸಾಲದು, ಅವು ಬೆಳೆದು ದೊಡ್ಡದಾಗುವವರೆಗೂ ಸಂರಕ್ಷ ಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ದೇಶದಲ್ಲಿ ರೈತರು ಕ್ರಿಮಿನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಹಾಳಾಗುತ್ತಿದೆ. ಅದರ ಬದಲು ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಕೆರೆಗಳಲ್ಲಿ ಹೂಳು ತೆಗೆದು ನೀರು ನಿಲ್ಲುವಂತೆ ಮಾಡಿದಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗುತ್ತದೆ. ಮಳೆ ನೀರು ವ್ಯರ್ಥವಾಗಿ ಹರಿಯದಂತೆ ಮನೆ ಮನೆಯಲ್ಲಿ ಇಂಗುಗುಂಡಿ ನಿರ್ಮಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಥಣಿ ರೋಟರಿ ಸಂಸ್ಥೆಯ ಅಧ್ಯಕ್ಷ ಅರುಣ ಸೌದಾಗರ ಮಾತನಾಡಿ, ಗಿಡಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಉತ್ತಮ ಮಳೆಯಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಸ್ವಾರ್ಥಕ್ಕಾಗಿ ಮತ್ತು ಅಭಿವೃದ್ಧಿ ನೆಪವೊಡ್ಡಿ ಗಿಡಮರಗಳನ್ನು ಕಡಿಯುತ್ತಿದ್ದಾರೆ. ಗಿಡಗಳನ್ನು ಕಡಿಯಲು ಮೂರು ನಿಮಿಷ ಸಾಕು. ಆದರೆ, ಅವುಗಳನ್ನು ಬೆಳೆಸಲು 30 ವರ್ಷಗಳು ಬೇಕು. ಆದ್ದರಿಂದ ಅಧಿಕಾರಿಗಳು, ಸಾರ್ವಜನಿಕರು ಪ್ರತಿಯೊಬ್ಬರೂ ಪರಿಸರ ಸಂರಕ್ಷ ಣೆಯತ್ತ ಗಮನಹರಿಸಬೇಕು ಎಂದರು.ರೋಟರಿ ಸಂಸ್ಥೆಯ ಕಾರ್ಯದರ್ಶಿ ಸಚಿನ್ ದೇಸಾಯಿ, ಖಜಾಂಚಿ ಶೇಖರ ಕೋಲಾರ, ಹಿರಿಯ ಸದಸ್ಯರಾದ ಅರುಣ ಯಲಗುದ್ರಿ, ಡಿ.ಡಿ. ಮೆಕನಮರಡಿ, ಸಂತೋಷ ಬೊಮ್ಮಣ್ಣವರ, ಶ್ರೀಕಾಂತ ಅಥಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.