ಸಾರಾಂಶ
ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉತ್ತರ ಭಾಗದ ಮಹತ್ವಾಕಾಂಕ್ಷಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಸಪ್ಟೆಂಬರ್ ಕೊನೆಯ ವಾರ ಇಲ್ಲವೇ ಅಕ್ಟೊಬರ್ ಮೊದಲ ವಾರದಲ್ಲಿ ಮೊದಲ ಹಂತದ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು ಎಂದುಶಾಸಕ ರಾಜು ಕಾಗೆ ಹೇಳಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಕಾಗವಾಡ ವಿಧಾನಸಭಾ ಮತಕ್ಷೇತ್ರದ ಉತ್ತರ ಭಾಗದ ಮಹತ್ವಾಕಾಂಕ್ಷಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಸಪ್ಟೆಂಬರ್ ಕೊನೆಯ ವಾರ ಇಲ್ಲವೇ ಅಕ್ಟೊಬರ್ ಮೊದಲ ವಾರದಲ್ಲಿ ಮೊದಲ ಹಂತದ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುವುದು ಎಂದುಶಾಸಕ ರಾಜು ಕಾಗೆ ಹೇಳಿದರು.ಐನಾಪುರ ಪಟ್ಟಣದ ನದಿ ತೀರದಲ್ಲಿ ನಿರ್ಮಿಸಲಾಗುತ್ತಿರುವ ಜಾಕವೆಲ್ ಹಾಗೂ ವಿದ್ಯುತ್ ಕಾಮಗಾರಿ ವೀಕ್ಷಿಸಿದ ನಂತರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಹುದಿನಗಳಿಂದ ಜನರ ಬೇಡಿಕೆಯಾಗಿ ಉಳದಿದ್ದ ₹1363.48 ಕೋಟಿ ಮೊತ್ತದ ಖಿಳೇಗಾಂವ ಬಸವೇಶ್ವರ ಏತ ನೀರಾವಿರಿ ಯೋಜನೆಯ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಉಳಿದ ಕಾರ್ಯ ನಡೆದಿದ್ದು, ಸೆಪ್ಟಂಬರ್ ಕೊನೆಯ ವಾರ ಇಲ್ಲವೇ ಅಕ್ಟೋಬರ್ ಮೊದಲ ವಾರದಲ್ಲಿ ಪ್ರಾಯೋಗಿಕವಾಗಿ ಮೊದಲ ಹಂತದ ನೀರಾವರಿ ಯೋಜನೆ ಪ್ರಾರಂಭಿಸಲಾಗುವುದು ಎಂದು ಭರವಸೆ ನೀಡಿದರು.ಈ ಯೋಜನೆಯಿಂದ ಮದಭಾವಿ ಹಾಗೂ ಅನಂತಪುರ ಜಿಲ್ಲಾ ಪಂಚಾಯತಿ ವ್ಯಾಪ್ತಿಯ 27462 ಹೆಕ್ಟೇರ್ ಭೂ ಪ್ರದೇಶಕ್ಕೆ ನೀರು ಒದಗಿಸಲಾಗುವುದು. ಈ ಯೋಜನೆಯಿಂದ ಸಾವಿರಾರು ಕುಟುಂಬಗಳಿಗೆ ಈ ಯೋಜನೆ ಆಶ್ರಯ ನೀಡಲಿದೆ. ಅಕಾರಿಗಳು, ಗುತ್ತಿಗೆದಾರರು ಸತತ ಪ್ರಯತ್ನ ಮಾಡುತ್ತಿರುವುದರಿಂದ ಈ ಹಂತಕ್ಕೆ ಬಂದಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.ರಾಜ್ಯ ನೀರಾವರಿ ಎಂಡಿ ರಾಜೇಶ ಅಮ್ಮಿನಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಗುತ್ತಿಗೆದಾರನ ಕೆಲವು ನಿಸ್ಕಾಳಜಿತನದಿಂದ ಕಾಮಗಾರಿ ವಿಳಂಬವಾಗಿದೆ. ಈಗ ಶಾಸಕ ರಾಜು ಕಾಗೆಯವರು ಹಗಲು ರಾತ್ರಿಯನ್ನದೇ ಬೆಳಗಾವಿ ಹಾಗೂ ಬೆಂಗಳೂರಿನಲ್ಲಿ ನಮ್ಮ ಕಚೇರಿಯಲ್ಲಿ ಸಭೆಗಳ ಮೇಲೆ ಸಭೆಗಳನ್ನು ಮಾಡಿ ಒಂದು ಹಂತಕ್ಕೆ ತಂದಿದ್ದಾರೆ. ಈಗ ಮೊದಲ ಹಂತವಾಗಿ 3 ಸಾವಿರ ಹೆಕ್ಟೇರ್‌ಗೆ ನೀರನ್ನು ಹರಿಸಲು 15.35 ಕಿಮೀ ಗೆ ನೀರನ್ನು ಹರಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ. ಈಗ ವಿದ್ಯುತ್ ಸಂಪರ್ಕ ಬೇಕಾಗಿದೆ. ಸಿಎಚ್ಎ ಅವರ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಅದು 10ನೇ ತಾರಿಕಿನೊಳಗಾಗಿ ಮಂಜೂರಾತಿ ಸಿಗಲಿದೆ. ಮಂಜೂರಾತಿ ಸಿಕ್ಕ ನಂತರ ಎರಡು ಮೋಟಾರ್‌ಗಳ ಮೂಲಕ 3 ಸಾವಿರ ಹೆಕ್ಟೇರ್‌ಗೆ ನೀರು ಒದಗಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.ಈ ವೇಳೆ ಮುಖ್ಯ ಇಂಜನಿಯರ್ ಬಿ.ಆರ್.ರಾಠೋಡ, ಸುಪರಿಡೆಂಟ್ ಇಂಜನಿಯರ್ ಬಿ.ಎಸ್.ನಾಗರಾಜು, ಕಾರ್ಯನಿರ್ವಾಹಕ ಇಂಜನಿಯರ್ ಪ್ರವೀಣ ಹುಣಸಿಕಟ್ಟಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕೆ.ರವಿ, ಇಂಜನಿಯರುಗಳಾದ ಎಸ್.ಬಿ.ಬಾಗಿ, ಪ್ರಶಾಂತ ಪೋತದಾರ, ಬಸವರಾಜ ಗಲಗಲಿ, ಎನ್.ಪಿ.ಪವಾರ, ಮುಖ್ಯ ಮುಖಂಡರು ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದರು.