ವೃತ್ತಿ ರಂಗಭೂಮಿ ಎಂದರೆ ಕಂಪನಿ ನಾಟಕಗಳತ್ತ ನೋಡುತ್ತವೆ. ಆದರೆ, ವೃತ್ತಿ ರಂಗಭೂಮಿ ಮೂಲ ಇರುವುದು ನಮ್ಮ ಬುಡಕಟ್ಟು ಸಂಸ್ಕತಿಯಲ್ಲಿ ಎಂದು ಸಂಸ್ಕೃತಿ ಚಿಂತಕ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

- ಐದು ದಿನಗಳ ರಾಷ್ಟ್ರೀಯ ವೃತ್ತಿ ರಂಗೋತ್ಸವ, ವೃತ್ತಿ ರಂಗಭೂಮಿ ವಸ್ತು ಪ್ರದರ್ಶನ ಉದ್ಘಾಟನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ವೃತ್ತಿ ರಂಗಭೂಮಿ ಎಂದರೆ ಕಂಪನಿ ನಾಟಕಗಳತ್ತ ನೋಡುತ್ತವೆ. ಆದರೆ, ವೃತ್ತಿ ರಂಗಭೂಮಿ ಮೂಲ ಇರುವುದು ನಮ್ಮ ಬುಡಕಟ್ಟು ಸಂಸ್ಕತಿಯಲ್ಲಿ ಎಂದು ಸಂಸ್ಕೃತಿ ಚಿಂತಕ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗ ಮಂದಿರದಲ್ಲಿ ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಏ.10ರಿಂದ ಏ.14ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವ ಹಾಗೂ ವೃತ್ತಿ ರಂಗಭೂಮಿ ಕುರಿತ ವಸ್ತು ಪ್ರದರ್ಶನವನ್ನು ಹಾರ್ಮೋನಿಯಂ ನುಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಹಗಲು ವೇಷಧಾರಿಗಳು, ಬುಡ್ಗ ಜಂಗಮ, ಬಹುರೂಪಿಗಳು ಹೀಗೆ ಬುಡುಕಟ್ಟು ಸಂಸ್ಕೃತಿಯಲ್ಲಿ ವೃತ್ತಿ ರಂಗಭೂಮಿ ಇದೆ ಎಂದರು.

ರಾಮ, ಆಂಜನೇಯ ವೇಷಧಾರಿಗಳಾಗಿ, ಬೀದಿ ಬೀದಿ ಸುತ್ತಾಡುವ, ಜನರು ನೀಡುವ ಹಣವನ್ನು ನಾನು ಭಿಕ್ಷೆ ಅನ್ನೊಲ್ಲ. ಆ ಕೊಡುಗೆ ಒಯ್ದು ಜೀವನ ಮಾಡುತ್ತಾರೆ. ದೊಂಬಿದಾಸರು ಕಂಪನಿ ನಾಟಕದಂತೆ ಊರೂರು ಸುತ್ತಾಡಿ, ಟೆಂಟ್ ಹಾಕಿಕೊಂಡು 15 ದಿನ, ತಿಂಗಳ ಕಾಲ ನಾಟಕ ಮಾಡಿಕೊಂಡು ಬಂದಿದ್ದು, ಅಂತಹ ಕಲೆ ಪ್ರಾಚೀನ ಕಾಲದಿಂದಲೇ ಬಂದಿದೆ. ಅಂತಹ ಮೂಲ ಪರಂಪರೆ ಬದಲಾದಾಗ ವೃತ್ತಿ ರಂಗಭೂಮಿಯು ಆಧುನಿಕ ಕಾಲದಲ್ಲಷ್ಟೇ ಅಲ್ಲ, ಪ್ರಾಚೀನ ಕಾಲದಿಂದಲೇ ಬಂದಿದೆಯೆಂಬುದನ್ನು ಕಾಣಬಹುದು ಎಂದು ಹೇಳಿದರು.

ವೃತ್ತಿ ರಂಗಭೂಮಿ ಭೌತಿಕ ಚಲನೆ ಜೊತೆಗೆ ಆಂತರಿಕ ಚಲನಶೀಲತೆಯೂ ಇರಬೇಕು. ಒಳಗಡೆ ಬದಲಾವಣೆ ಆಗುವುದೆಂದರೆ ಪೌರಾಣಿಕ ನಾಟಕಗಳನ್ನು ಬದಲಿಸಬೇಕು. ಶಿವನ ವಿಷ್ಣು, ವಿಷ್ಣುವನ್ನು ಶಿವನಾಗಿ ಮಾಡಬೇಕು. ವೃತ್ತಿ ರಂಗಭೂಮಿಗಳನ್ನು ವ್ಯಾಖ್ಯಾನ ಮಾಡಬೇಕು. ಗಿರೀಶ ಕಾರ್ನಾಡರ ತುಘಲಕ್ ನಾಟಕ ಇದಕ್ಕೆ ನಿದರ್ಶನ. ತುಘಲಕ್ ಹುಚ್ಚನಲ್ಲ ಅವನ ಕಾರ್ಯತಂತ್ರ, ತುಘಲಕ್ ಪಾತ್ರ ಮೂಲಕ ಹೇಳಿ, ನಿರ್ಧಿಷ್ಟ ಕಾಲಾವದಿಯ ಚರಿತ್ರೆಯ ಮರು ವ್ಯಾಖ್ಯಾನ ಮಾಡಿದ್ದಾರೆ. ಅದೇ ರೀತಿ ಪುರಾಣಗಳ ವ್ಯಾಖ್ಯಾನವಾಗಬೇಕು. ಸಣ್ಣಪುಟ್ಟ ಬದಲಾವಣೆಗಳೂ ಆಗಬೇಕು. ಶಿವನನ್ನು, ವಿಷ್ಣುವನ್ನು, ರಕ್ತಾಕ್ಷಿಯನ್ನೂ ಹೀಗೂ ಮಾಡಬಹುದು ಎಂದು ತಿಳಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ನಾಟಕಗಳನ್ನು ಆಡದಂತೆ ನಿರ್ಬಂಧ ಹೇರಿದ್ದರು. ನಾಟಕಗಳಲ್ಲಿ ಬ್ರಿಟಿಷರ ವಿರೋಧಿಯಾದ ಅನೇಕ ಅಂಶಗಳನ್ನು ಹೊಂದಿತ್ತು ಎಂಬುದೇ ಅದಕ್ಕೆ ಕಾರಣವಾಗಿತ್ತು. ಆಗ ನಾಟಕಗಳಲ್ಲಿ ಕೃಷ್ಣನ ಪಾತ್ರ ಬಂದರೆ, ಪಾಂಡವ ಪಾತ್ರಧಾರಿಗಳು ಸ್ವಾಗತಿಸುತ್ತಿದ್ದು ಖಾದಿ ಹಾರ ಹಾಕುವ ಮೂಲಕ. ಹೀಗೆ ಖಾದಿ ಹಾರ ಹಾಕಿದರೆ ಹೋರಾಟದ ಸಂಕೇತವಾಗಿತ್ತು. ನಾಟಕವು ಸ್ಥಿರವಾಗದೇ, ಜಡವಾಗದೇ, ಚಲನಶೀಲವಾಗಿದೆ. ಇದು ಸಮಕಾಲೀನವಾಗುತ್ತಾ ಹೋಗಬೇಕು. ವೃತ್ತಿ ರಂಗಭೂಮಿಯು ಪ್ರತಿರೋಧವಾಗುತ್ತಾ ಬೆಳೆದುಬಂದಿದೆ ಎಂದು ವಿವರಿಸಿದರು.

ದಾವಣಗೆರೆ ವೃತ್ತಿ ರಂಗಭೂಮಿಗೆ ಪ್ರಸಿದ್ಧಿಯಾಗಿದೆ. 120 ಕಂಪನಿಗಳು ಇಲ್ಲಿಗೆ ಬಂದು ಹೋದ ಜಾಗ. ಅನ್ವೇಷಣೆ, ಹೃದಯ ಭಾಷೆ ಹುಡುಕದೇ ಇರುವುದು ಕಲೆಯೇ ಅಲ್ಲ. ಯಾವುದೇ ಕಲೆಗೆ ಹೃದಯ ಇದ್ದಾಗ ಕಲೆ ಅನುಭ‍ವನ್ನು ತನ್ನೊಳಗೆ ಪಡೆಯಲು, ಅನುಭ‍ವವನ್ನು ಜನರಿಗೆ ಕೊಡಬೇಕು. ಹೃದಯಾಘಾತವಾದಾಗಲೇ ಕೆಲವರಿಗೆ ಹೃದಯವಿದೆಯೆಂದು ಗೊತ್ತಾಗುತ್ತದೆ. ಜೀವಶಾಸ್ತ್ರದ ಹೃದಯ ಆಕಾರವುಳ್ಳದ್ದಾದರೆ, ಕಲಾ ಲೋಕದ ಹೃದಯ ಆಕಾರ ಇಲ್ಲದ್ದು, ನಿರಾಕಾರವಾದುದು. ನಿರಾಕಾರವಾದ ಕಲೆಗೆ ಆಕಾರ ಇರುವುದಿಲ್ಲ. ನಿರಾಕಾರ ನೆಲೆಗಳಿಗೆ ಅದ್ಭುತ ಶಕ್ತಿ ಇದೆ. ಹೃದಯ, ಮನಸ್ಸು, ಆತ್ಮಕ್ಕೆ ಆಕಾರ ಇರುವುದಿಲ್ಲ. ನಿರಾಕಾರಗಳು ಕಲಾ ಲೋಕದಲ್ಲಿ ವಿಶಿಷ್ಟ ಶಕ್ತಿ ಹೊಂದಿರುತ್ತವೆ ಎಂದು ಅವರು ತಿಳಿಸಿದರು.

ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಿದ್ದರು. ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ನೆನಪು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

ಪದ್ಮಶ್ರೀ ಡಾ.ಸುರೇಶ ಹನಗವಾಡಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ.ಎಸ್. ಮಂಜುನಾಥ ಸ್ವಾಮಿ, ವಿಶೇಷಾಧಿಕಾರಿ ರವಿ ಚಂದ್ರ ಇತರರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಜೆ.ಮಂಜುನಾಥ ಬಹುಮಾನ ವಿತರಿಸಿದರು. ಗದಗಿನ ಶಂಕರಗೌಡ ಪಾಟೀಲರಿಂದ ವೃತ್ತಿ ರಂಗಭೂಮಿ ಕುರಿತ ವಸ್ತು ಪ್ರದರ್ಶನ ನಡೆಯಿತು. ರಂಗ ನೃತ್ಯ ಮತ್ತು ರಂಗಗೀತೆ ಗಾಯನ ನಡೆಯಿತು. ನಮನ ಅಕಾಡೆಮಿಯ ವಿದುಷಿ ಡಿ.ಕೆ. ಮಾಧವಿ ಗೋಪಾಲಕೃಷ್ಣ ರಂಗ ನೃತ್ಯ ನಡೆಸಿಕೊಟ್ಟರು. ರಂಗೋತ್ಸವದಲ್ಲಿ ತೆಲುಗಿನ ಬಾಲ ನಾಗಮ್ಮ ನಾಟಕ ಪ್ರದರ್ಶನಗೊಂಡಿತು.

- - -

-10ಕೆಡಿವಿಜಿ3, 4:

ರಾಷ್ಟ್ರೀಯ ವೃತ್ತಿ ರಂಗೋತ್ಸವ ಹಾಗೂ ವೃತ್ತಿ ರಂಗಭೂಮಿ ಕುರಿತ ವಸ್ತು ಪ್ರದರ್ಶನ ಉದ್ಘಾಟನೆಯಲ್ಲಿ ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ.